ರಾಯಚೂರಿನಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆ : ಮನೆ ಕುಸಿತ, ಜನಜೀವನ ಅಸ್ತವ್ಯಸ್ತ

| Published : Sep 03 2024, 01:47 AM IST / Updated: Sep 03 2024, 05:17 AM IST

ಸಾರಾಂಶ

ರಾಯಚೂರು ಜಿಲ್ಲೆಯಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು ಕುಸಿದಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

 ರಾಯಚೂರು :  ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯು ಸೋಮವಾರವೂ ಮುಂದುವರಿದಿದ್ದು, ಅಲ್ಲಲ್ಲಿ ನಡೆದ ಅನಾಹುತಗಳಿಗೆ ಜನ-ಜೀವನ ಅಸ್ತವ್ಯವಸ್ತಗೊಂಡಿದೆ.

ಹಗಲು-ರಾತ್ರಿ ಎನ್ನದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆ ಹಾಗೂ ನದಿಗಳು ಭರ್ತಿಯಾಗಿದ್ದು, ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರ ಜೀವನವು ಏರುಪೇರಾಗಿದೆ. ರವಿವಾರ ಸುರಿದ ಮಳೆಯಿಂದಾಗಿ ರಾಯಚೂರು ತಾಲೂಕಿನ ಮರ್ಚೇಡ್‌, ಬಿ.ಯದ್ಲಾಪುರ ಗ್ರಾಮಗಳಲ್ಲಿ ಮನೆಗಳು ಕುಸಿದಿದ್ದು, ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯ ಎಟಿಎಂ ವೃತ್ತದ ಸಮೀಪದಲ್ಲಿದ್ದ ಬೇವಿನ ಮರವು ನೆಲಕ್ಕುರುಳಿಬಿದ್ದಿದೆ.

ನಿರಂತರ ಮಳೆಯಿಂದಾಗಿ ಮರ್ಚೇಡ್‌ ಗ್ರಾಮದಲ್ಲಿನ ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಗ್ರಾಮದ ನಿವಾಸಿಗಳಾದ ಯಮ್ಮಲ್ಲ, ರಂಗಮ್ಮ, ರಜಿಯಾಭಾನು, ಈಶಪ್ಪ,ಆಶಾಭಾನು ಎಂಬುವವರಿಗೆ ಸೇರಿದ ಮಣ್ಣಿನ ಮನೆಗಳು ಕುಸಿದುಬಿದ್ದಿವೆ. ಇನ್ನು ಕೆಲ ಹಳೆಯ ಮನೆಗಳು ಮಳೆಯಿಂದಾಗಿ ತೀವ್ರವಾಗಿ ಹಾನಿಗೀಡಾಗಿವೆ. ಇಷ್ಟೇ ಅಲ್ಲದೇ ತಾಲೂಕಿನ ಬಿ.ಯದ್ಲಾಪುರ ಗ್ರಾಮದ ದಿವಾಕರ ಎಂಬುವವರಿಗೆ ಸೇರಿದ ಮನೆಯ ಕೊಠಡಿಯೊಂದರ ಮೇಲ್ಛಾವಣಿ ಕುಸಿದಿದ್ದು, ಕೂದಲೆಳೆಯ ಅಂತರದಲ್ಲಿ ಕುಟುಂಬಸ್ಥರು ಪಾರಾಗಿದ್ದಾರೆ. ಮಳೆಯಿಂದ ನೆಂದಿದ್ದ ಮನೆಯ ಮೇಲ್ಛಾವಣಿ ಕುಸಿದು ಬೀಳುತ್ತಿದ್ದಂತೆಯೇ ಕುಟುಂಬಸ್ಥರು ಹೊರಗೆ ಬಂದಿದ್ದಾರೆ. ಏಕಾಏಕಿಯಾಗಿ ಮನೆಯನ್ನು ಕಳೆದುಕೊಂಡ ಕುಟುಂಬಸ್ಥರು ತೀವ್ರ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ:

ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 37 ಮಿಮೀ ಮಳೆ ಸುರಿದಿದೆ. ಅದರಲ್ಲಿ ದೇವದುರ್ಗ ತಾಲೂಕಿನಲ್ಲಿ 10.6 ಮಿಮೀ., ಲಿಂಗಸುಗೂರಿನಲ್ಲಿ 3 ಮಿಮೀ, ಮಾನ್ವಿಯಲ್ಲಿ 2.7, ರಾಯಚೂರಿನಲ್ಲಿ 7.7ಮಿಮೀ, ಸಿಂಧನೂರಿನಲ್ಲಿ 1.3ಮಿಮೀ, ಮಸ್ಕಿಯಲ್ಲಿ 1.9ಮಿಮೀ,ಸಿರವಾರ ತಾಲೂಕಿನಲ್ಲಿ 5.1ಮಿಮೀಗಳಷ್ಟು ಮಳೆಯಾಗಿದೆ. ಆದರೆ, ವಾಡಿಕೆ ಪ್ರಕಾರ ಜಿಲ್ಲೆಯಲ್ಲಿ ಸರಾಸರಿ 5.2 ಮಿಮೀಗಳ ಪ್ರಮಾಣದಲ್ಲಿ ಮಳೆಯಾಗಬೇಕಿತ್ತು. ಆದರೆ, 5.2ಮಿಮೀಗಳಷ್ಟು ಮಳೆಯಾಗಿದೆ. ಲಿಂಗಸುಗೂರು, ಮಾನ್ವಿ,ಸಿಂಧನೂರು ಹಾಗೂ ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ವಾಡಿಕೆ ಪ್ರಮಾಣಗಿಂತಲೂ ಕಡಿಮೆ ಮಳೆಯಾಗಿದೆ.