ಪುನರ್ವಸು ಮಳೆಗೆ ಹಲವು ಮನೆಗಳು ಕುಸಿತ

| Published : Jul 20 2024, 12:51 AM IST

ಸಾರಾಂಶ

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಹಾಸನ ನಗರದ ಶ್ರೀನಗರದಲ್ಲಿ ನಾಲ್ಕೈದು ಮನೆಗಳು ಕುಸಿದು ಬಿದ್ದು ಅಪಾರ ನಷ್ಟ ಉಂಟಾಗಿದೆ. ನಗರದ ಜಿಲ್ಲಾ ಬಂಧೀಖಾನೆ ಹಿಂಭಾಗದಲ್ಲಿನ ಶ್ರೀನಗರದಲ್ಲಿ ಮುನೀರ್, ರುಕ್ಕಯ್ಯ, ನಾಜೀರ್ ಭಾನು ಸೇರಿದಂತೆ ಹಲವರ ಮನೆಗಳು ಕುಸಿದಿದೆ. ಇವರು ಕಳೆದ 30 ವರ್ಷಗಳಿಂದಲೂ ವಾಸವಾಗಿದ್ದು, ಇವು ಹೆಂಚಿನ ಮನೆಗಳಾಗಿವೆ. ಈ ಭಾಗದಲ್ಲಿ ಬಹುತೇಕ ಹೆಂಚಿನ ಹಳೆಯ ಕಾಲದ ಮನೆಗಳು ಇರುವುದರಿಂದ ಇಂತಹ ಮಳೆಗೆ ಒಂದೊಂದಾಗಿ ಧರೆಗೆ ಉರುಳಿ ಬೀಳುತ್ತಿವೆ.

ಕನ್ನಡಪ್ರಭ ವಾರ್ತೆ ಹಾಸನ

ಕಳೆದ 25 ದಿನಗಳಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದ ಶ್ರೀನಗರದಲ್ಲಿ ನಾಲ್ಕೈದು ಮನೆಗಳು ಕುಸಿದು ಬಿದ್ದು ಅಪಾರ ನಷ್ಟ ಉಂಟಾಗಿದೆ. ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಶ್ರೀನಗರದಲ್ಲಿ ಅನೇಕ ಮನೆಗಳು ಬಿದ್ದಿದ್ದು, ಇನ್ನೂ ಅನೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಈ ವಿಚಾರವನ್ನು ತಹಸೀಲ್ದಾರ್ ಕಚೇರಿಗೆ ಹಾಗೂ ನಗರಸಭೆಗೆ ತಿಳಿಸಿದಾಗ ಸ್ಥಳಕ್ಕೆ ಬಂದು ಮಹಜರ್ ಮಾಡಿದ್ದಾರೆ. ಶಾಸಕರಿಗೂ ಕರೆ ಮಾಡಿದಾಗ ಸ್ಪಂದಿಸಿ ನಾನು ವಿಧಾನಸಭಾ ಕಲಾಪದಲ್ಲಿ ಇದ್ದು, ನಮ್ಮ ಆಪ್ತ ಸಹಾಯಕರು ಸ್ಥಳಕ್ಕೆ ಬರುವುದಾಗಿ ಹೇಳಿದಂತೆ ಬಂದು ನೋಡಿಕೊಂಡು ಪರಿಹಾರ ಕೊಡುವುದಾಗಿ ಆಶ್ವಾಸನೆ ಕೊಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ವೇಳೆ ಶಬ್ಬೀರ್, ಮಹಮದ್ ಫೀರ್ ಸೇರಿದಂತೆ ಶ್ರೀನಗರ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿ ವಾಸಕ್ಕೆ ಬೇರೆಡೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಶ್ರೀನಗರ ನಿವಾಸಿ ಮುನೀರ್ ಮಾಧ್ಯಮದೊಂದಿಗೆ ಮಾತನಾಡಿ, ಊಟ ಮಾಡುವ ವೇಳೆ ಮನೆಯಲ್ಲಿ ಶಬ್ದ ಬಂದಿದ್ದು, ನೋಡುವಷ್ಟರಲ್ಲಿ ಎರಡು ಗೋಡೆಗಳು ಬಿದ್ದಿತ್ತು. ಭಯದಿಂದ ಮನೆ ಹೊರಗೆ ಬರಲಾಯಿತು. ಈ ವೇಳೆ ಯಾರಿಗೂ ಏನು ಪ್ರಾಣಾಪಾಯ ಆಗಲಿಲ್ಲ. ಈ ಮನೆಯಲ್ಲಿ ಐವರು ವಾಸವಾಗಿದ್ದು, ಈ ದುರ್ಘಟನೆ ಸಂಭವಿಸಿದ ನಂತರ ನಗರಸಭೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರು ಮನೆ ಪರಿಶೀಲಿಸಿದ್ದಾರೆ. ಪರಿಹಾರ ಕೊಡುವ ಭರವಸೆ ನೀಡಿದ್ದಾರೆ ಎಂದರು. ಮನೆ ಬಿದ್ದು ಮನೆ ಒಳಗೆ ಇದ್ದ ಒಟ್ಟು ನಾಲ್ಕರಿಂದ ಐದು ಲಕ್ಷ ರು. ಮೌಲ್ಯದ ವಸ್ತುಗಳು ನಷ್ಟವಾಗಿದೆ. ನಾವು ಗ್ಯಾರೇಜ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರು. ಕೂಡಲೇ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದರು.

ನಗರದ ಜಿಲ್ಲಾ ಬಂಧೀಖಾನೆ ಹಿಂಭಾಗದಲ್ಲಿನ ಶ್ರೀನಗರದಲ್ಲಿ ಮುನೀರ್, ರುಕ್ಕಯ್ಯ, ನಾಜೀರ್ ಭಾನು ಸೇರಿದಂತೆ ಹಲವರ ಮನೆಗಳು ಕುಸಿದಿದೆ. ಇವರು ಕಳೆದ 30 ವರ್ಷಗಳಿಂದಲೂ ವಾಸವಾಗಿದ್ದು, ಇವು ಹೆಂಚಿನ ಮನೆಗಳಾಗಿವೆ. ಈ ಭಾಗದಲ್ಲಿ ಬಹುತೇಕ ಹೆಂಚಿನ ಹಳೆಯ ಕಾಲದ ಮನೆಗಳು ಇರುವುದರಿಂದ ಇಂತಹ ಮಳೆಗೆ ಒಂದೊಂದಾಗಿ ಧರೆಗೆ ಉರುಳಿ ಬೀಳುತ್ತಿವೆ.

ಒಟ್ಟಾರೆ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಇಂತಹವರಿಗೆ ಪರ್ಯಾಯ ವ್ಯವಸ್ಥೆಗಾಗಿ ನಿಗಾವಹಿಸಬೇಕಾಗಿದೆ. ಇಲ್ಲವಾದರೇ ಮನೆಗಳು ಕುಸಿದಾಗ ಪ್ರಾಣಾಪಾಯ ಸಂಭವಿಸಿ ಏನಾದರೂ ಅಪಾಯವಾಗುವುದು ತಪ್ಪಿದಲ್ಲ.

* ಹೇಳಿಕೆ

ನಿರಂತರವಾಗಿ ಬರುತ್ತಿರುವ ಮಳೆಯಿಂದ 30 ರಿಂದ 40 ಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಈ ಭಾಗದಲ್ಲಿ ಹೆಚ್ಚಿನವರು ಬಡ ಕೂಲಿ ಕಾರ್ಮಿಕರು ವಾಸವಾಗಿದ್ದು, ಕಳೆದ 30 ವರ್ಷಗಳಿಂದಲೂ ವಾಸವಾಗಿದ್ದು, ಕಳೆದ ಬಾರಿ ಮನೆ ಬಿದ್ದಾಗ ಪರಿಹಾರ ನೀಡಿದ್ದು, ಇಂದು 5 ಮನೆಗಳಿಗೆ ಪೂರ್ಣ ಹಾನಿ ಆಗಿದೆ. ಜಿಲ್ಲಾಡಳಿ ತ ವತಿಯಿಂದ ಇವರಿಗೆಲ್ಲಾ ನ್ಯಾಯ ಒದಗಿಸಿಕೊಡಬೇಕು.

ದಸ್ತಗೀರ್, ಸಮಾಜ ಸೇವಕ