ಸಾರಾಂಶ
ಹರ್ಷಿತಾಳಿಗೆ ಗಂಡ ನಂದೀಶ, ಅತ್ತೆ ಸುಮಿತ್ರ, ಮಾವ ಸುರೇಶ, ಮೈದುನ ನವೀನ, ಅಜ್ಜಿ ಗೌರಮ್ಮ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಗ್ರಾಮದಲ್ಲಿ ನಾಲ್ಕೈದು ಬಾರಿ ಗ್ರಾಮದ ಮುಖಂಡರು ರಾಜೀ ಪಂಚಾಯಿತಿ ನಡೆಸಿದ್ದರೂ ಸಹ ಹರ್ಷಿತಾಳ ಮೇಲೆ ಗಂಡ, ಅತ್ತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಪತಿ ಮತ್ತು ಕುಟುಂಬದವರ ಕಿರುಕುಳ ತಾಳಲಾರದೆ ಮನನೊಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಮಲ್ಲಯ್ಯನ ದೊಡ್ಡಿ ಗ್ರಾಮದಲ್ಲಿ ಶುಕ್ರವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಗೃಹಿಣಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಮಲ್ಲಯ್ಯನದೊಡ್ಡಿ ಗ್ರಾಮದ ನಂದೀಶನ ಪತ್ನಿ ಹರ್ಷಿತಾ (25) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮೂಲತಃ ಮದ್ದೂರು ತಾಲೂಕು ಆತಗೂರು ಹೋಬಳಿ ಹೆಮ್ಮನಹಳ್ಳಿಯ ಗರೀಬಿ ಕಾಲೋನಿ ನಿವಾಸಿಗಳಾದ ನಂದೀಶ ಹಾಗೂ ಹರ್ಷಿತ ಕಳೆದ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಂಡ್ಯ ತಾಲೂಕು ಮಲ್ಲಯ್ಯನ ದೊಡ್ಡಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದರು.
ಹರ್ಷಿತಾಳಿಗೆ ಗಂಡ ನಂದೀಶ, ಅತ್ತೆ ಸುಮಿತ್ರ, ಮಾವ ಸುರೇಶ, ಮೈದುನ ನವೀನ, ಅಜ್ಜಿ ಗೌರಮ್ಮ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಗ್ರಾಮದಲ್ಲಿ ನಾಲ್ಕೈದು ಬಾರಿ ಗ್ರಾಮದ ಮುಖಂಡರು ರಾಜೀ ಪಂಚಾಯಿತಿ ನಡೆಸಿದ್ದರೂ ಸಹ ಹರ್ಷಿತಾಳ ಮೇಲೆ ಗಂಡ, ಅತ್ತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಹರ್ಷಿತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರಾದ ಮಂಜುಳಾ ಪೊಲೀಸರಿಗೆ ದೂರು ನೀಡಿದ್ದಾರೆ.ಘಟನೆ ನಂತರ ಮಾವ ಸುರೇಶನನ್ನು ಹರ್ಷಿತಾಳ ಕುಟುಂಬದವರು ವಶಕ್ಕೆ ತೆಗೆದುಕೊಂಡು ದಿಗ್ಬಂಧನದಲ್ಲಿರಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಗಂಡ ನಂದೀಶ, ಅತ್ತೆ ಸುಮಿತ್ರ ಮತ್ತಿತರರನ್ನು ಬಂಧಿಸಬೇಕು ಹಾಗೂ ಹರ್ಷಿತಾಳ ಎರಡು ಮಕ್ಕಳಿಗೆ ಪರಿಹಾರ ರೂಪದಲ್ಲಿ ಮಾವನ ಆಸ್ತಿಯಲ್ಲಿ ಪಾಲು ನೀಡಬೇಕು. ಇಲ್ಲವಾದಲ್ಲಿ ಹರ್ಷಿತಾಳ ಮನೆಯಲ್ಲಿಯೇ ಶವ ಸಂಸ್ಕಾರ ನಡೆಸುವುದಾಗಿ ಕುಟುಂಬಸ್ಥರು ಪಟ್ಟು ಹಿಡಿದು ಮನೆಯ ಮುಂಭಾಗ ಶವದೊಂದಿಗೆ ಧರಣಿ ನಡೆಸುತ್ತಿದ್ದಾರೆ.