ಮಗುವಿನೊಂದಿಗೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ

| Published : Nov 13 2024, 12:03 AM IST

ಸಾರಾಂಶ

ತುರುವೇಕೆರೆ: ಗೃಹಿಣಿಯೋರ್ವರು ತನ್ನ ಮೂರುವರೆ ವರ್ಷದ ಗಂಡು ಮಗುವಿನೊಂದಿಗೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ತುರುವೇಕೆರೆ: ಗೃಹಿಣಿಯೋರ್ವರು ತನ್ನ ಮೂರುವರೆ ವರ್ಷದ ಗಂಡು ಮಗುವಿನೊಂದಿಗೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ತಾಲೂಕಿನ ಮೇಲಿನವರಗೇನಹಳ್ಳಿಯ ನಿವಾಸಿ ಬಸವರಾಜು ಎಂಬುವವರ ಪತ್ನಿ ಡಿ.ಶಶಿಕಲಾ (೩೭) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ತನ್ನೊಂದಿಗೆ ಮೂರುವರೆ ವರ್ಷದ ಗಂಡು ಮಗು ಗೋಕುಲ್ ನನ್ನು ಹೊಟ್ಟೆಗೆ ಕಟ್ಟಿಕೊಂಡು ನೀರಿಗೆ ಜಿಗಿದು ಪ್ರಾಣ ಬಿಟ್ಟಿದ್ದಾರೆ. ಶಶಿಕಲಾ ಕಳೆದ ಶನಿವಾರದಂದು ಮನೆಯಿಂದ ಹೊರ ಬಂದಿದ್ದರು. ಶಶಿಕಲಾ ಮೂರು ದಿನಗಳಿಂದ ಕಾಣೆಯಾಗಿರುವ ಬಗ್ಗೆ ಮೃತಳ ಅಣ್ಣ ರೇಣುಕಪ್ಪ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಂಗಳವಾರ ಬೆಳಗ್ಗೆ ದಾರಿ ಹೋಕರು ಅಪರಿಚಿತ ಶವ ಕೆರೆಯಲ್ಲಿ ತೇಲುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಸ್ಥಳಕ್ಕೆ ಸಿಪಿಐ ಲೋಹಿತ್ ಭೇಟಿ ನೀಡಿ ಪರಿಶೀಲಿಸಿದರು.ನಂತರ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರ ತೆಗೆಯಲಾಯಿತು.

ಆ ವೇಳೆ ಶಶಿಕಲಾ ರವರು ತಾವು ತಂದಿದ್ದ ಕೈ ಚೀಲದಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನನ್ನು ಕ್ಷಮಿಸಿ ಬಿಡಿ. ನನ್ನ ಮತ್ತು ನನ್ನ ಮಗ ಗೋಕುಲ್ ನ ಶವವನ್ನು ನನ್ನ ತಂದೆ ತಾಯಿಯವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡಿ ಎಂದು ಬರೆದಿರುವ ಡೆತ್ ನೋಟ್ ಸಿಕ್ಕಿದೆ ಎಂದು ತಿಳಿದುಬಂದಿದೆ.

ದೂರು - ತನ್ನ ಸಹೋದರಿಯ ಸಾವಿಗೆ ಪತಿ ಬಸವರಾಜು ಕೊಡುತ್ತಿದ್ದ ಕಿರುಕುಳವೇ ಕಾರಣ ಎಂದು ತುರುವೇಕೆರೆ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. ಮೃತಳ ಗಂಡ ಬಸವರಾಜು ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಈ ಬಗ್ಗೆ ಎರಡೂ ಕುಟುಂಬದವರೂ ಕೂಡಿ ರಾಜಿ, ಸಂಧಾನ ಕೂಡ ಮಾಡಿದ್ದರು. ಆದರೂ ಸಹ ಗಂಡನ ಕಿರುಕುಳ ಮಿತಿಮೀರಿದ್ದರಿಂದ ತನ್ನ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರೇಣುಕಪ್ಪ ದೂರಿದ್ದಾರೆಂದು ತಿಳಿದುಬಂದಿದೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.