ಸಾರಾಂಶ
ಮದ್ದೂರು ಪಟ್ಟಣದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ವೈದ್ಯರ ನಿರ್ಲಕ್ಷದಿಂದ ಮೃತಪಟ್ಟಿದ್ದ ಗೃಹಿಣಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ನರ್ಸಿಂಗ್ ಹೋಮ್ ಆಡಳಿತ ಮಂಡಳಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ರೈತ ಸಂಘದ ಬೆಂಬಲದೊಂದಿಗೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ತಡರಾತ್ರಿ ಅಂತ್ಯಗೊಳಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ವೈದ್ಯರ ನಿರ್ಲಕ್ಷದಿಂದ ಮೃತಪಟ್ಟಿದ್ದ ಗೃಹಿಣಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ನರ್ಸಿಂಗ್ ಹೋಮ್ ಆಡಳಿತ ಮಂಡಳಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ರೈತ ಸಂಘದ ಬೆಂಬಲದೊಂದಿಗೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ತಡರಾತ್ರಿ ಅಂತ್ಯಗೊಳಿಸಿದರು.ಮದ್ದೂರು ಮೆಡಿಕಲ್ ಸೆಂಟರ್ ಮುಖ್ಯಸ್ಥ ಡಾ.ಸಿದ್ದೇಗೌಡ ಅವರು ರೈತ ಮುಖಂಡರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮವಾಗಿ ಮಾತುಕತೆ ನಡೆದು ಚಿಕಿತ್ಸೆ ವೇಳೆ ಮೃತಪಟ್ಟ ಅಣ್ಣೂರು ಗ್ರಾಮದ ಸಿಂಧು ಅಲಿಯಾಸ್ ಸಿದ್ದಮ್ಮ ಅವರ ಕುಟುಂಬಕ್ಕೆ 8 ಲಕ್ಷ ರು. ಪರಿಹಾರ ನೀಡುವುದಾಗಿ ಭರವಸೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೃತಳ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದರು. ನಂತರ ಸಿಂಧೂ ಅವರ ಶವವನ್ನು ನರ್ಸಿಂಗ್ ಹೋಮ್ ನಿಂದ ಬುಧವಾರ ರಾತ್ರಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಗುರುವಾರ ಮುಂಜಾನೆ ಶವಪರೀಕ್ಷೆ ನಂತರ ಮದ್ದೂರು ಪೊಲೀಸರು ಕುಟುಂಬಸ್ಥರಿಗೆ ಸಿಂಧೂ ಶವವನ್ನು ಹಸ್ತಾಂತರ ಮಾಡಿದರು.
ಮೃತ ಸಿಂಧೂ ಅಲಿಯಾಸ್ ಸಿದ್ದಮ್ಮಳಿಗೆ ಹೆಣ್ಣು ಮಕ್ಕಳಿದ್ದು ಅವರ ಭವಿಷ್ಯದ ದೃಷ್ಟಿಯಿಂದ ಆಸ್ಪತ್ರೆ ಆಡಳಿತ ಮಂಡಳಿ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡರು ಒತ್ತಾಯಿಸಿದರು.ನಂತರ ಮದ್ದೂರು ಮೆಡಿಕಲ್ ಸೆಂಟರ್‌ನ ಮುಖ್ಯಸ್ಥ ಡಾ.ಸಿದ್ದೇಗೌಡ, ರೈತ ಮುಖಂಡರಾದ ಅಣ್ಣೂರು ಮಹೇಂದ್ರ, ಯರಗನಹಳ್ಳಿ ರಾಮಕೃಷ್ಣಯ್ಯ, ಕುದರಗುಂಡಿ ನಾಗರಾಜು ಸೇರಿದಂತೆ ಹಲವು ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಗೃಹಿಣಿ ಸಿಂಧು ಸಾವಿಗೆ ನಮ್ಮಿಂದ ಕೆಲವೊಂದು ತಪ್ಪುಗಳಾಗಿವೆ ಎಂದು ಒಪ್ಪಿಕೊಂಡರು. ಅಂತಿಮವಾಗಿ ಮೃತಳ ಕುಟುಂಬಕ್ಕೆ ಮುಂದಿನ ಎರಡು ಮೂರು ದಿನಗಳಲ್ಲಿ 8 ಲಕ್ಷ ರು. ಪರಿಹಾರ ನೀಡುವುದಾಗಿ ಭರವಸೆ ನೀಡಿದ ನಂತರ ಪರಿಹಾರ ವಿವಾದ ಬಗೆಹರಿದಿದೆ ಎಂದು ರೈತ ಮುಖಂಡ ಅಣ್ಣೂರು ಮಹೇಂದ್ರ ಕನ್ನಡಪ್ರಭಕ್ಕೆ ತಿಳಿಸಿದರು.