ಕನ್ನಡಪ್ರಭ ವಾರ್ತೆ ಕೋಲಾರ

ಪತ್ರಕರ್ತರಿಗೆ ಸೂರು ಕಲ್ಪಿಸುವ ಸದುದ್ದೇಶದಿಂದ ನಿವೇಶನಗಳಿಗಾಗಿ ಸರ್ಕಾರಿ ಜಮೀನು ಪಡೆಯಲು ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸುವುದು ಮತ್ತು ಖಾಸಗಿ ಮಾಲಿಕತ್ವದ ಲೇಔಟ್‌ಗಳಲ್ಲಿ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸಲು ಕ್ರಮವಹಿಸಲು ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಹಾಗೂ ಸಂಘದ ನಿರ್ದೇಶಕರಾದ ಎ.ಜಿ.ಸುರೇಶ್‌ಕುಮಾರ್, ರಾಜೇಂದ್ರ, ರವಿ, ಸಿ.ವಿ.ನಾಗರಾಜ್ ಮತ್ತಿತರರು, ಪತ್ರಕರ್ತರಿಗೆ ನಿವೇಶನ ವಿತರಿಸುವ ಕುರಿತ ಅವಕಾಶ ವಿವಿಧೋದ್ದೇಶ ಸಹಕಾರ ಸಂಘ ಬೈಲಾದಲ್ಲೇ ಇರುವುದರಿಂದ ಈ ಕುರಿತು ಗಂಭೀರ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.

ಆದ್ದರಿಂದ ಆದಷ್ಟು ಶೀಘ್ರ ಸರ್ಕಾರಿ ನಿವೇಶನ ಪಡೆಯಲು ಪ್ರಯತ್ನಿಸಿ, ಇಲ್ಲವಾದಲ್ಲಿ ಖಾಸಗಿ ಲೇಔಟ್ ಮಾಲೀಕರ ಮನವೊಲಿಸಿ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸಲು ಕ್ರಮವಹಿಸಿ ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಕೆ.ಎಸ್.ಗಣೇಶ್, ಶೀಘ್ರ ಈ ಸಂಬಂಧ ಸರ್ಕಾರಿ ಜಮೀನಿಗಾಗಿ ಡಿಸಿಯವರಿಗೆ ಮನವಿ ಸಲ್ಲಿಸೋಣ, ವಸತಿ ಸಚಿವರೊಂದಿಗೆ ಮಾತನಾಡಿ, ಪತ್ರಕರ್ತರಿಗೆ ನಿವೇಶನಕ್ಕಾಗಿ ಲೇಔಟ್ ಮಾಡುವ ಕುರಿತು ಕ್ರಮವಹಿಸೋಣ ಎಂದು ಹೇಳಿದರು.


ಈ ಸಂಬಂಧ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರಿಗೂ ಮನವಿ ಸಲ್ಲಿಸೋಣ. ತಾಲೂಕು ಹಂತದಲ್ಲೂ ಪತ್ರಕರ್ತರಿಗೆ ನಿವೇಶನ ಸಿಗುವಂತೆ ಮಾಡಲು ಸದಾ ಕ್ರಿಯಾಶೀಲರಾಗಿದ್ದು, ಕ್ರಮವಹಿಸೋಣ ಎಂದು ನುಡಿದರು.

ವಿಚಾರ ಸಂಕಿರಣ:

ಅಂಬೇಡ್ಕರ್ ವಿಚಾರಧಾರೆ ಅರಿಯಲು ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ಆಶಯಗಳ ಕುರಿತು ವಿಚಾರ ಸಂಕಿರಣವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ಪತ್ರಕರ್ತರ ಭವನದಲ್ಲೇ ನಡೆಸಲು ತೀರ್ಮಾನಿಸಲಾಯಿತು.

ಸಾಮಾಜಿಕ ಕಾರ್ಯಗಳಲ್ಲೂ ಸಹಕಾರ ಸಂಘ ಪ್ರಮುಖ ಪಾತ್ರವಹಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ದಾನಿಗಳ ಸಹಭಾಗಿತ್ವ ಪಡೆದು ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್, ಶೂ, ಟ್ರ್ಯಾಕ್‌ಶೂಟ್ ಮತ್ತಿತರ ನೆರವು ಒದಗಿಸುವ ಚಿಂತನೆಗೂ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.

ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ, ಷೇರು ಬಂಡವಾಳ ಹೆಚ್ಚಿಸುವ ನಿಟ್ಟಿನಲ್ಲಿ ಷೇರು ಮೌಲ್ಯ ಐದು ಸಾವಿರಕ್ಕೆ ಹೆಚ್ಚಿಸುವ ಕುರಿತು ನಿರ್ಣಯ ಮಾಡಿ, ಇದನ್ನು ಮುಂದಿನ ಸರ್ವಸದಸ್ಯರ ಸಭೆಯಲ್ಲಿ ಅಂಗೀಕರಿಸಲು ಕ್ರಮವಹಿಸೋಣ ಎಂದು ಹೇಳಿದರು.

ಪತ್ರಕರ್ತರು ಹಾಗೂ ಸಂಘದ ಸದಸ್ಯರು, ಕುಟುಂಬದವರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲು ನಿರ್ಧಾರ ಕೈಗೊಂಡಿದ್ದು, ಒಟ್ಟಾರೆ ಇದು ವಿವಿಧೋದ್ದೇಶ ಸಹಕಾರ ಸಂಘವಾಗಿರುವುದರಿಂದ ಬೈಲಾ ಪ್ರಕಾರವೇ ನಾವು ನಿವೇಶನ, ಮನೆ ಹಂಚಿಕೆ, ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ನಿರ್ದೇಶಕ ಬಿ.ವಿ.ಗೋಪಿನಾಥ್, ಸಹಕಾರ ಸಂಘದ ನಿರ್ದೇಶಕರಾದ ಎಂ.ವರಲಕ್ಷ್ಮಿ, ಸೋಮಶೇಖರ್, ಎಸ್.ವಿ.ಲೋಕೇಶ್, ಎಚ್.ಎಲ್.ಸುರೇಶ್, ಎಂ.ನಾಗರಾಜಯ್ಯ, ಈಶ್ವರ್, ಶಬ್ಬೀರ್, ಪತ್ರಕರ್ತ ಚಾಂದ್ ಪಾಷಾ ಮತ್ತಿತರರಿದ್ದರು. ಕಾರ್ಯದರ್ಶಿ ಗಂಗಾಧರ್ ಸ್ವಾಗತಿಸಿದರು.