ಸಾರಾಂಶ
ಮಲ್ಲಂದೂರಿನ ನಾಡ ಕಚೇರಿ ಎದುರು ಸಿಪಿಐ ನೇತೃತ್ವದಲ್ಲಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಸತಿ ಮತ್ತು ನಿವೇಶನ ರಹಿತರಿಗೆ ನಿವೇಶನ ಮಂಜೂರುಗೊಳಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಸಿಪಿಐ ನೇತೃತ್ವದಲ್ಲಿ ತಾಲೂಕಿನ ಮಲ್ಲಂದೂರು ಗ್ರಾಮದ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ತಾಲೂಕು ಅಧ್ಯಕ್ಷ ಕೆರೆಮಕ್ಕಿ ರಮೇಶ್, ನಿವೇಶನ ರಹಿತರು ನಾಗರಿಕ ಬದುಕಿನ ಮೂಲಭೂತ ಹಕ್ಕಿನಿಂದ ವಂಚಿತರಾಗಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆವತಿ ಹೋಬಳಿಯಲ್ಲೂ ಸಹ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ವಿಪರೀತವಾಗಿದೆ ಎಂದರು.ನಿವೇಶನ ರಹಿತರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪ್ರತಿಭಟನೆಗಳ ಮೂಲಕ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸಹ ಕೇವಲ ಭರವಸೆಗಳ ಹೊರತಾಗಿ ನಿವೇಶನ ಹಂಚುವ ಹಾಗೂ ಮನೆ ಗಳನ್ನು ನಿರ್ಮಿಸುವ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಕುಟುಂಬಕ್ಕೆ ಒಂದು ಮನೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಸರ್ಕಾರ ಅಧಿಕಾರಕ್ಕೆ ಬಂದು ಅನೇಕ ಒಂದೂವರೆ ವರ್ಷವಾದರೂ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ಗಳಿಗೆ ಕಾಯಕಲ್ಪ ರೂಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರಸ್ತುತ ಕಾಡು ಪ್ರಾಣಿಗಳು ನಾಡಿಗೆ ವಲಸೆ ಬರುತ್ತಿವೆ. ಇದಕ್ಕೆ ಮೂಲ ಕಾರಣ ಸರ್ಕಾರ ಮತ್ತು ಅರಣ್ಯ ಇಲಾಖೆ ಹೊಸ ನೀತಿ ಹಾಗೂ ಬೇಜವಾಬ್ದಾರಿ ತನದಿಂದ ಕಾಡಿನಲ್ಲಿ ಹಣ್ಣಿನ ಗಿಡಗಳು, ಬೈನೆ ಮತ್ತು ಬಿದಿರು ಮರಗಳನ್ನು ಬೆಳೆಸುವುದನ್ನು ಕೈಬಿಟ್ಟು ಅಕೇಶಿಯಾ, ತೇಗದ ಮರ ಬೆಳೆಸುತ್ತಿರುವ ಕಾರಣ ವನ್ಯಜೀವಿ ನಾಡಿನತ್ತ ಧಾವಿಸುತ್ತಿದೆ ಎಂದು ಹೇಳಿದರು.ನಿವೇಶನ ಹಂಚಿಕೆಗೆ ಅಗತ್ಯವಿರುವ ಸರ್ಕಾರಿ ಭೂಮಿ ಕಾಯ್ದಿರಿಸಲು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಿ ಕಂದಾಯ ಭೂಮಿಯನ್ನು ಗುರುತು ಮಾಡಬೇಕು. ವಸತಿ ರಹಿತರು ಗ್ರಾಪಂಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.ಈಗಾಗಲೇ ಜಿಲ್ಲೆಯಾದ್ಯಂತ ಅರಣ್ಯ ಒತ್ತುವರಿ ಖುಲ್ಲಾ ಮಾಡಲಾಗುತ್ತಿದೆ. ಇದರಿಂದ ಬಹಳಷ್ಟು ರೈತರು ಭೂಮಿ ಕಳೆದು ಕೊಂಡು ನಿರಾಶ್ರಿತರಾಗುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತು ಕನಿಷ್ಟ 25 ಎಕರೆ ಒಳಗಿನ ಒತ್ತುವರಿ ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದ್ರೇಶ್, ಹೋಬಳಿ ಕಾರ್ಯದರ್ಶಿ ಜಯನಂದ್, ಸಹ ಕಾರ್ಯದರ್ಶಿ ಗಳಾದ ಟಿ.ಎಸ್. ಸಂಜೀವ, ಕೆರೆಮಕ್ಕಿ ಕಲ್ಲೇಶ್, ಶಾಖಾ ಕಾರ್ಯದರ್ಶಿ ನಾರಾಯಣ, ಅಪ್ಪು, ಸತೀಶ್, ಖಜಾಂಚಿ ಲಕ್ಷ್ಮೀ ಹಾಗೂ ಮಲ್ಲಂದೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.1 ಕೆಸಿಕೆಎಂ 2ವಸತಿ ಹಾಗೂ ನಿವೇಶನಕ್ಕೆ ಆಗ್ರಹಿಸಿ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ನಾಡ ಕಚೇರಿ ಎದುರು ಸಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.