ವಾರಂಟಿ ಇಲ್ಲದ ಪಕ್ಷ ಹೇಗೆ ಗ್ಯಾರಂಟಿ ಕೊಟ್ಟೀತು?

| Published : May 04 2024, 12:30 AM IST / Updated: May 04 2024, 12:31 AM IST

ವಾರಂಟಿ ಇಲ್ಲದ ಪಕ್ಷ ಹೇಗೆ ಗ್ಯಾರಂಟಿ ಕೊಟ್ಟೀತು?
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಲಕ್ಷ ಗ್ಯಾರಂಟಿ ಕೊಡುತ್ತೇವೆಂದು ಕಾಂಗ್ರೆಸ್ಸಿನವರು ಮನೆಗೆ ಬಂದರೆ ಮುಂಗಡ ಹಣವನ್ನಾಗಿ ₹ 5 ಸಾವಿರ ಈಗ ಕೊಡಿ. ಮುಂದೆ ₹ 95 ಸಾವಿರ ಕೊಡುವಿರಂತೆ ಎಂದು ಮಹಿಳೆಯರು ಹೇಳಿರಿ.

ಧಾರವಾಡ:

ಮಹಿಳೆಯರಿಗೆ ₹ 1 ಲಕ್ಷ ಕೊಡುತ್ತೇವೆಂದು ಗ್ಯಾರಂಟಿ ಕಾರ್ಡ್‌ ಕೊಟ್ಟಿರುವ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೇ ವಾರಂಟಿ ಇಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ಒಂದು ಲಕ್ಷ ಗ್ಯಾರಂಟಿ ಕೊಡುತ್ತೇವೆಂದು ಕಾಂಗ್ರೆಸ್ಸಿನವರು ಮನೆಗೆ ಬಂದರೆ ಮುಂಗಡ ಹಣವನ್ನಾಗಿ ₹ 5 ಸಾವಿರ ಈಗ ಕೊಡಿ. ಮುಂದೆ ₹ 95 ಸಾವಿರ ಕೊಡುವಿರಂತೆ ಎಂದು ಮಹಿಳೆಯರು ಹೇಳಿರಿ. ಆಗ ಗ್ಯಾರಂಟಿ ಕೊಡಲು ಬಂದ ಕಾಂಗ್ರೆಸ್ಸಿನವರು ಓಡಿ ಹೋಗುತ್ತಾರೆ ಎಂದರು.

ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಶುಕ್ರವಾರ ಪ್ರಹ್ಲಾದ ಜೋಶಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವರೆಂದು ಪೂಜಿಸಬೇಕಾದ ರಾಜಕೀಯವನ್ನು ಇಂಡಿಯಾ ಮೈತ್ರಿಕೂಟವು ಹವ್ಯಾಸವಾಗಿ ಮಾಡಿಕೊಂಡಿದೆ. ತಮ್ಮ ಮಕ್ಕಳ ಜೀವನಕ್ಕೆ ಒಂದು ದಾರಿ ಮಾಡಿಕೊಡಲು ರಾಜಕೀಯ, ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು, ದೇಶದ, ಜನರ ಅಭಿವೃದ್ಧಿಗಲ್ಲ ಎಂದರು. ತಲೆತಲಾಂತರಿಂದ ಇಂದಿರಾಗಾಂಧಿ ಕುಟುಂಬದ ಸದಸ್ಯರು ಒಂದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇಷ್ಟಾಗಿಯೂ ಅದೇ ಸ್ಥಾನದಲ್ಲಿ ಯಾರು ನಿಲ್ಲಬೇಕು ಎಂಬುದು ಕೊನೆ ಕ್ಷಣದ ವರೆಗೂ ಸ್ಪಷ್ಟಪಡಿಸಲಿಲ್ಲ. ಇಂತಹ ವ್ಯಕ್ತಿ ಪ್ರಧಾನಿ ಅಭ್ಯರ್ಥಿ ಎಂಬುದು ಹಾಸ್ಯಾಸ್ಪದ ಎಂದರು.

ಚುನಾವಣೆ ಮುಗಿದ ಕೂಡಲೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೊಡೈಕೆನಾಲಗೆ ವಿಶ್ರಾಂತಿಗೆ ಹೋಗುತ್ತಾರೆ. ರಾಹುಲ್ ಗಾಂಧಿ ತಾವು ಸಂಸದರಾದ ಕ್ಷೇತ್ರಕ್ಕೆ ಐದು ವರ್ಷದಲ್ಲಿ ಐದು ಬಾರಿ ಪ್ರವಾಸಕ್ಕೆಂದು ಹೋಗುತ್ತಾರೆ. ಆದರೆ, ನರೇಂದ್ರ ಮೋದಿ ಅವರು 80ಕ್ಕೂ ಹೆಚ್ಚು ಬಾರಿ ತಮ್ಮ ಕ್ಷೇತ್ರಕ್ಕೆ ಹೋಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ವೈಯಕ್ತಿಕ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟ ಮೋದಿ ಅವರಿಗೆ ದೇಶದ ಜನತೆ ಮತ ನೀಡುವ ಮೂಲಕ ಧನ್ಯವಾದ ಹೇಳಬೇಕು ಎಂದು ಅಣ್ಣಾಮಲೈ ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಳೆದ ಹತ್ತು ವರ್ಷಗಳ ಕಾಲ ದೇಶದ ಜನರಿಗೆ ಅಭಿವೃದ್ಧಿಯ ಟ್ರೇಲರ್‌ ತೋರಿಸಿರುವ ಮೋದಿ ಅವರು ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಸಂಪೂರ್ಣ ವಿಕಾಸಿತ ಭಾರತದ ಪೂರ್ಣ ಪಿಕ್ಚರ್‌ ತೋರಿಸಲಿದ್ದಾರೆ. ಸಂಪೂರ್ಣ ಬಡತನ ನಿರ್ಮೂಲನದ ದೊಡ್ಡ ಚಿತ್ರ ತೋರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಅವರನ್ನು ಬೆಂಬಲಿಸಿ ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಬಿಜೆಪಿ ಮುಖಂಡರಾದ ಮಾಳವಿಕಾ ಅವಿನಾಶ, ಮಾಜಿ ಶಾಸಕಿ ಸೀಮಾ ಮಸೂತಿ, ಜ್ಯೋತಿ ಜೋಶಿ, ತಿಪ್ಪಣ್ಣ ಜೋಶಿ, ಚೈತ್ರಾ ಶಿರೂರ, ಶಂಕರ ಕುಮಾರ ದೇಸಾಯಿ ಮತ್ತಿತರರು ಇದ್ದರು.5 ಲಕ್ಷ ಅಂತರ ಇರಲಿ

ಪ್ರಹ್ಲಾದ ಜೋಶಿ ಅವರನ್ನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದೆ. ಆದರೆ, ಮತದಾರರು ಐದು ಲಕ್ಷ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಘೋಷಣೆ ಕೂಗಿದರು. ಧಾರವಾಡ ಕ್ಷೇತ್ರದ ಜೋಶಿ ಬರೀ ಕರ್ನಾಟಕ ಮಾತ್ರವಲ್ಲದೇ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಪ್ರಧಾನಿ ಬಲಗೈ ಬಂಟನಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಮ್ಮೆ ಅವಕಾಶ ನೀಡಿ ಎಂದು ಅಣ್ಣಾಮಲೈ ಹೇಳಿದರು.