ಸದೃಢವಾಗದೇ ಭಾರತ ವಿಶ್ವಗುರು ಹೇಗೆ ಸಾಧ್ಯ?

| Published : Apr 29 2024, 01:38 AM IST / Updated: Apr 29 2024, 12:46 PM IST

ಸಾರಾಂಶ

  ಭಾರತ ವಿಶ್ವಗುರು ಆಗಲಿದೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ.   ರೈತರ ಬದುಕು ಹಸನಾಗದೆ, ಮಹಿಳೆಯರು ಸ್ವಾವಲಂಬಿಗಳಾಗದೆ, ನಿರುದ್ಯೋಗ ಸಮಸ್ಯೆ ಹೋಗದೆ, ದೇಶ ಆರ್ಥಿಕವಾಗಿ ಸದೃಢವಾಗದೇ ಭಾರತ ಹೇಗೆ ವಿಶ್ವಗುರುವಾಗುತ್ತದೆ 

 ಬಾಗಲಕೋಟೆ:  ಭಾರತ ವಿಶ್ವಗುರು ಆಗಲಿದೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ರೈತರ ಬದುಕು ಹಸನಾಗದೆ, ಮಹಿಳೆಯರು ಸ್ವಾವಲಂಬಿಗಳಾಗದೆ, ನಿರುದ್ಯೋಗ ಸಮಸ್ಯೆ ಹೋಗದೆ, ದೇಶ ಆರ್ಥಿಕವಾಗಿ ಸದೃಢವಾಗದೇ ಭಾರತ ಹೇಗೆ ವಿಶ್ವಗುರುವಾಗುತ್ತದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪ್ರಶ್ನಿಸಿದ್ದಾರೆ.

ಬೀಳಗಿ ವಿಧಾನಸಭಾ ಕ್ಷೇತ್ರದ ಕುಂದರಗಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಯುಕ್ತಾ ಪಾಟೀಲ, ಹಲವಾರು ಜ್ವಲಂತ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ವಿಶ್ವ ಗುರುವಿನ ಬಗ್ಗೆ ಮಾತನಾಡುವವರು ಈ ಬಗ್ಗೆಯೂ ಮಾತನಾಡಬೇಕು ಎಂದರು.

ಒಡೆದಾಳುವ ನೀತಿ ಬಿಜೆಪಿಯದ್ದು, ಒಗ್ಗೂಡಿಸಿಕೊಂಡು ಹೋಗುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ದೇಶಕ್ಕೆ ಏನು ಕೊಡುಗೆ ನೀಡಿದೆ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದರು. ಸಿದ್ದರಾಮಯ್ಯ ಅವರು ಸಹಕಾರ ಸಂಘಗಳಲ್ಲಿನ ಸಾಲ ಮನ್ನಾ ಮಾಡಿದರು. ಈಗಿನ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಬಡ ಕುಟುಂಬಗಳಿಗೆ ಆಸರೆಯಾಗಿದೆ ಎಂದು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಷಾ ಅವರ ಬಣ್ಣದ ಮಾತುಗಳಿಗೆ ಈ ಬಾರಿ ಮತದಾರರು ಮರುಳಾಗುವುದಿಲ್ಲ. ಹತ್ತು ವರ್ಷ ಅವಕಾಶ ಕೊಟ್ಟು ನಿಮ್ಮ ಆಡಳಿತ ನೋಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವ ಬದಲಿಗೆ ಕೃಷಿ ವೆಚ್ಚ ದ್ವಿಗುಣ ಮಾಡಿದ್ದೀರಿ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿ ಪಕೋಡಾ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಿ ಎಂದಿದ್ದೀರಿ, ಅಭಿವೃದ್ಧಿ ಬದಲು ಧರ್ಮ, ಜಾತಿಗಳ ನಡುವೆ ಸಂಘರ್ಷ ಬೆಳೆಯುಂತೆ ಮಾಡಿದ್ದೇ ನಿಮ್ಮ ಹತ್ತು ವರ್ಷಗಳ ಸಾಧನೆ ಎಂದು ಕುಟುಕಿದರು.

ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಮಾತಿನಿಂದ ಅಭಿವೃದ್ಧಿ ಸಾಧ್ಯವೇ ? ಎಂದು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಟೀಕಿಸಿದರು. ಮಾತಿನಿಂದ ದೇಶ ಅಭಿವೃದ್ಧಿಯಾಗದು. ದೇಶದ ಸಮಸ್ಯೆಗಳೇನು ಎಂಬುದನ್ನು ಅರಿತು ಪರಿಹಾರಕ್ಕೆ ಕಾರ್ಯೋನ್ಮುಖವಾಗಬೇಕು ಎಂದರು.

ವಿದೇಶಗಳಲ್ಲಿ ಶೈಕ್ಷಣಿಕ ನೀತಿ, ವಿದೇಶಾಂಗ ನೀತಿ, ಆರ್ಥಿಕ ನೀತಿಗಳ ಮೇಲೆ ಚುನಾವಣೆ ನಡೆಯುತ್ತವೆ. ಆದರೆ ಭಾರತದಲ್ಲಿ ಮೋದಿ ಅವರು ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ಚುನಾವಣೆ ಮಾಡುತ್ತಿದ್ದಾರೆ. ನಮ್ಮ ಕೆಲಸ ನೋಡಿ ಕೂಲಿ ಕೊಡಿ ಎಂದು ಮತ ಕೇಳುತ್ತಿಲ್ಲ. ರಾಮನನ್ನು ಮುಂದೆ ಇಟ್ಟುಕೊಂಡು ಮತದಾರರ ಬಳಿ ಬರುತ್ತಿದ್ದಾರೆ ಎಂದು ಟೀಕಿಸಿದರು.

ಈ ಚುನಾವಣೆ ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದ್ದ, ಮೋದಿ ಮೂರನೆ ಬಾರಿಗೆ ಮತದಾರರ ಬಳಿ ಬರುತ್ತಿದ್ದಾರೆ. ಅವರು ಎಲ್ಲಿಯಾದರೂ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳಿದ್ದರೆ ಹೇಳಿ ನಿಮಗೆ ನಾನೇ ಬಹುಮಾನ ಕೊಡುವೆ ಎಂದು ಘೋಷಿಸಿದರು.

ಭಾನುವಾರ ಅನಗವಾಡಿ, ಕುಂದರಗಿ, ಅರಕೇರಿ, ಸುನಗ, ನಾಗರಾಳ, ಸಿದ್ಧಪೂರ, ತೆಗ್ಗಿ, ಗಲಗಲಿ ಗ್ರಾಮಗಳಲ್ಲಿ ಸಂಯುಕ್ತ ಪಾಟೀಲ, ಶಾಸಕ ಜೆ.ಟಿ. ಪಾಟೀಲ, ಬಸವಪ್ರಭು ಸರನಾಡಗೌಡ ಅವರು ಮತಯಾಚನೆ ಮಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ನ್ಯಾಯಪತ್ರದಲ್ಲಿ ಪ್ರಕಟಿಸಿರುವ ಎಲ್ಲ ಗ್ಯಾರಂಟಿಗಳು ಜಾರಿಯಾಗಲಿವೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಷಾ ಅವರ ಸುಳ್ಳು ಮಾತುಗಳು ಈ ಬಾರಿ ಕೊನೆಯಾಗಲಿವೆ ಎಂದು ಎಐಸಿಸಿ ವೀಕ್ಷಕ ಡಾ. ಸೈಯದ್ ಹೇಳಿದರು.(ಪೋಟೊ28ಬಿಕೆಟಿ6, ಕುಂದರಗಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಮಾತನಾಡಿದರು. ಶಾಸಕ ಜೆ.ಟಿ. ಪಾಟೀಲ, ಬಸವಪ್ರಭು ಸರನಾಡಗೌಡ, ಮುತ್ತು ದೇಸಾಯಿ, ಹನುಮಂತ ಕಾಖಂಡಕಿ ಇದ್ದರು.)

 -ರಾಜ್ಯ ಸತತ ಎರಡು ಬರಗಾಲಕ್ಕೆ ತುತ್ತಾಯಿತು. ನೆರೆ, ಬರವಿದ್ದಾಗ ಕಷ್ಟ ಕೇಳಲು ಕರ್ನಾಟಕಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ ಅವರು ಮತ ಕೇಳಲು ಪದೇಪದೆ ಬರುತ್ತಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ರಾಜ್ಯಕ್ಕೆ 22 ಬಾರಿ ಬಂದಿದ್ದರು. ಈಗಲೂ ರಾಜ್ಯ ಪ್ರವಾಸದಲ್ಲಿದ್ದಾರೆ. ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುವ ಬದಲು ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಹಿಂದೂ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ. ನಾವೂ ಕೂಡ ಹಿಂದೂಗಳೇ.

 ಸಂಯುಕ್ತಾ ಪಾಟೀಲ, ಕಾಂಗ್ರೆಸ್‌ ಅಭ್ಯರ್ಥಿ