ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸ್ವಾತಂತ್ರ್ಯ ಪೂರ್ವದಲ್ಲಿ ವಕ್ಫ್ ಬೋರ್ಡ್ ಆಸ್ತಿ ಒಂದು ಲಕ್ಷ ಎಕರೆಯಷ್ಟಿತ್ತು. ಈಗ ಅದು 8 - 10 ಲಕ್ಷ ಎಕರೆಯಾಗಿದೆ ಅಂದರೆ ಹೇಗೆ ಸಾಧ್ಯ? ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಶ್ನಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯದ ಪೂರ್ವದಲ್ಲಿ ವಿಂಗಡಣೆಯಾದಾಗ ಮುಸ್ಲಿಮರು ಬಿಟ್ಟು ಹೋದ ಆಸ್ತಿಯನ್ನು ವಕ್ಫ್ ಕ್ರೂಢೀಕರಣ ಮಾಡಲಾಗಿತ್ತು. ಅಂದು ಒಂದು ಲಕ್ಷ ಎಕರೆ ಯಷ್ಟಿದ್ದ ಜಮೀನು ಇಂದು ಸುಮಾರು 10 ಲಕ್ಷ ಎಕರೆಯಷ್ಟಾಗಿದೆ. ಈ ಸಂಬಂಧ ಕೇಂದ್ರದಿಂದ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಚಳಿಗಾಲದ ಅಧಿವೇಶನದಲ್ಲಿ ಈ ವಕ್ಫ್ ಆಸ್ತಿಯ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಬಡ ಮುಸ್ಲಿಮರು ವಕ್ಫ್ ಗೆ ದಾನ ಕೊಟ್ಟ ಆಸ್ತಿಯನ್ನು ಕಾಂಗ್ರೆಸ್ ಮುಖಂಡರು ಲೂಟಿ ಮಾಡಿದ್ದಾರೆ. ಈ ಹಿಂದೆ ಕೂಡ ವಕ್ಫ್ ಆಸ್ತಿ ಹೆಸರಿನಲ್ಲಿ ತಪ್ಪು ಮಾಡಿದ್ದೀರಿ, ಇನ್ನು ಮುಂದೆ ಕೂಡ ಮಾಡಬೇಡಿ. ಪ್ರಾಣ ಹೋದರು ವಕ್ಫ್ ಜಮೀನು ಬಿಟ್ಟುಕೊಡಲ್ಲ ಎಂಬ ಸಚಿವ ಜಮೀರ್ ಹೇಳಿದ್ದಾರೆ. ದೇಶದ ಸಂವಿಧಾನಕ್ಕೆ ಇರುವ ಗೌರವ, ಶಕ್ತಿ ಯಾವ ವ್ಯಕ್ತಿಯ ಪ್ರಾಣಕ್ಕಿಂತ ದೊಡ್ಡದಲ್ಲ. ಪ್ರಾಣ ಕೊಟ್ಟು ಹೋರಾಟ ಮಾಡುವ ಸಂದರ್ಭ ಇದಲ್ಲ. ಜಮೀರ್ ಅಹ್ಮದ್ ಈ ರೀತಿಯ ಹೇಳಿಕೆಗಳನ್ನು ಕೊಟ್ಟು ಧರ್ಮ ಮತ್ತು ಜನರನ್ನು ಭಾವನಾತ್ಮಕವಾಗಿ ಡೈವರ್ಟ್ ಮಾಡುವ ಕೆಲಸ ಮಾಡಬಾರದು ಎಂದು ಕುಟುಕಿದರು.ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಸತ್ಯವನ್ನು ಜಮೀರ್ ಅಹ್ಮದ್ ಒಪ್ಪಿಕೊಳ್ಳಬೇಕು. ಭಾವನಾತ್ಮಕವಾಗಿ ಜನರನ್ನು ಉದ್ರೇಕ ಗೊಳಿಸುವ ಕೆಲಸ ಮಾಡೋದು ಬಿಡಬೇಕು. ಕೇಂದ್ರ ಸರ್ಕಾರ ಪಾರದರ್ಶಕವಾಗಿ ವಕ್ಫ್ ಕಾಯ್ದೆ ಜಾರಿಗೊಳಿಸಲಿದೆ ಎಂದರು.
ಏಕತೆಗಾಗಿ ಹೋರಾಟ ಮಾಡಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಬಿರ್ಸಾ ಮುಂಡಾರವರ ಜನ್ಮ ದಿನಾಚರಣೆ ಅಂಗವಾಗಿ ಏಕತೆಗಾಗಿ ಓಟ ನಡೆಸಿದ್ದೇವೆ ಎಂದು ತಿಳಿಸಿದರು.ಸ್ವಾತಂತ್ರ್ಯ ನಂತರದ ತಪ್ಪುಗಳನ್ನು ಕೇಂದ್ರ ತಿದ್ದಲಿದೆ
ವಿಜಯಪುರದಲ್ಲಿ ಸಾವಿರಾರು ಎಕರೆ ಜಮೀನಿನ ಪಹಣಿ ಮತ್ತು ಖಾತೆಯನ್ನು ತಿದ್ದುವ ಪ್ರಯತ್ನ ನಡೆದಿದೆ. ಕೇಂದ್ರದ ವಕ್ಫ್ ಕಾಯ್ದೆ ಜಾರಿಯಾಗುವ ಮೊದಲು ಎಲ್ಲೆಲ್ಲಿ ಈ ರೀತಿಯ ಖಾತೆ ಪಹಣಿ ತಿದ್ದುಪಡಿ ಮಾಡಬೇಕು ಎಂದು ಷಡ್ಯಂತ್ರ ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಸ್ವಾತಂತ್ರ್ಯ ನಂತರದ ನಡೆದ ತಪ್ಪುಗಳನ್ನು ಸರಿ ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಲಿದೆ. ಯಾರು ಕೂಡ ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಚುನಾವಣೆಯಲ್ಲಿ ಹಣಬಲ, ತೋಳ್ಬಲ ಎಲ್ಲವನ್ನೂ ಬಳಸಿಕೊಳ್ಳುತ್ತದೆ. ಆದರೂ, ಚನ್ನಪಟ್ಟಣ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸವಿದೆ.
- ಬಿ.ವೈ. ರಾಘವೇಂದ್ರ, ಸಂಸದ