ನಿಮ್ಮನ್ನ ಕಟ್ಕೊಂಡು ಸರ್ಕಾರ ನಡೆಸೋದ್‌ ಹೇಗ್ರಿ?: ಸಚಿವ ಸಂತೋಷ್‌ ಲಾಡ್

| Published : Jan 21 2025, 12:31 AM IST

ನಿಮ್ಮನ್ನ ಕಟ್ಕೊಂಡು ಸರ್ಕಾರ ನಡೆಸೋದ್‌ ಹೇಗ್ರಿ?: ಸಚಿವ ಸಂತೋಷ್‌ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರದ ಜಿಪಂ ಸಭಾಂಗಣದಲ್ಲಿ ಕಲಬುರಗಿ ಕಂದಾಯ ವಿಭಾಗದ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ಸಭೆಯನ್ನು ಕಾರ್ಮಿಕ ಸಚಿವ ಸಂತೋಷ ಲಾಡ್‌ ಕೈಗೊಂಡರು.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಯಪ್ಪಾ, ದೇವರೇ ಏನ್ರಿ ಮಾಹಿತಿನೇ ಇಲ್ವಾ? ಸಭೆಗೆ ಏನ್‌ ಚಿಮ್ಸ್‌ ತಿನ್ನಲು ಬಂದಿದ್ದೀರಾ? ಮಾಹಿತಿಯಿಲ್ಲದೇ ಸಭೆಗೆ ಯಾಕೆ ಬರುತ್ತೀರಿ ? ನಿಮ್ಮನ್ನ ಕಟ್ಕೊಂಡು ಸರ್ಕಾರ ನಡೆಸೋದು ಹೇಗ್ರಿ ? ಎಂದು ಹೇಳಿ ಸಭೆಯ ವೇದಿಕೆ ಮೇಲೆಯೇ ತಲೆಮೇಲೆ ಕೈಹೊತ್ತು ಕುಳಿತ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್....ಇವು ಸ್ಥಳೀಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಕಲಬುರಗಿ ಕಂದಾಯ ವಿಭಾಗದ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಝಲಕ್ ಗಳು. ಸಭೆ ಆರಂಭದಲ್ಲಿ ಸಚಿವ ಸಂತೋಷ ಲಾಡ್‌ ಅವರು ಮಾತನಾಡಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಅಂಕಿ-ಸಂಖ್ಯೆ, ಖಾಯಂ ನೌಕರರು, ಗುತ್ತಿಗೆ ನೌಕರರ ಮಾಹಿತಿ ನೀಡಲು ಸೂಚಿಸಿದರು ಈ ವೇಳೆ ಅಧಿಕಾರಿಗಳು ಮಾಹಿತಿ ನೀಡಲು ತಡಬಡಾಯಿಸಿದ್ದರಿಂದ ಸಿಟ್ಟಿಗೆದ್ದ ಸಚಿವರು ಅಧಿಕಾರಿಗಳನ್ನು ಯರ್ರಾಬಿರ್ರಿ ತರಾಟೆಗೆ ತೆಗೆದುಕೊಂಡರು.ಚಳಿ ಬಿಡಿಸಿದರು: ಗುತ್ತಿಗೆದಾರರಿಗೆ ಪರವಾನಗಿ ನೀಡುತ್ತೀರಿ, ಅಲ್ಲಿ ಎಷ್ಟು ಜನ ನೌಕರರು ಕೆಲಸ ಮಾಡುತ್ತಾರೆ ಎನ್ನುವ ಮಾಹಿತಿ ಇಲ್ಲವೆಂದರೇ ಹೇಗೆ? ಸಣ್ಣ ಕೈಗಾರಿಕೆ, ಹೋಟೆಲ್ ಗಳ ಮೇಲೆ ಕೇಸ್ ಹಾಕಿದ್ದೀರಿ, ದೊಡ್ಡ ಇಂಡಸ್ಟ್ರಿಗಳನ್ನ ಯಾಕೆ ಬಿಟ್ಟಿದ್ದೀರಿ ಅಂತ ಪ್ರಶ್ನಿಸಿದರು. ಚೈಲ್ಡ್ ಲೇಬರ್ ಸಮಸ್ಯೆಯನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ, ತಪ್ಪಿತಸ್ಥರ ಮೇಲೆ ಕೇಸ್ ಹಾಕಬೇಕು , ಹೊಡಿಬೇಕು ಅನ್ನೋದನ್ನ ಜಾಗೃತಿ ಮೂಡಿಸಬೇಕು, ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನ ಮಾಡಬೇಕು ಅಂತ ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು ಇದೇ ದಾಟಿಯಲ್ಲಿ ಸಭೆಯುದ್ದಕ್ಕು ಅಸಮಧಾನ,ಬೇಸರ, ಗರಂ ಮೂಡ್‌ನಲ್ಲಿಯೇ ಇದ್ದ ಸಚಿವರು ಇಲಾಖೆಯ ಅಧಿಕಾರಿಗಳ ಚಳಿ ಬಿಡಿಸಿದರು.ಸಭೆಗೆ ಕಾರ್ಮಿಕರ ನೋಂದಣಿ ಮಾಹಿತಿ ನೀಡುವಾಗ ಅಧಿಕಾರಿಗಳು ಗೊಂದಲ ಮಾಡಿಕೊಂಡರು,ಅಧಿಕೃತ ಕಾರ್ಮಿಕರ ಅಂಕಿ-ಅಂಶ,ಅರ್ಜಿ ವಿಲೆವಾರಿ ಸೇರಿ ಇನ್ನಿತರ ಮಾಹಿತಿ ಕೇಳಿದ ಸಚಿವರಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡದೇ ಗೊಂದಲದ ಮಾಹಿತಿಯನ್ನು ಕೊಟ್ಟ ಮಹಿಳಾ ಅಧಿಕಾರಿಗೆ ನಿಮ್ಮನ್ನ ಮನೆಗೆ ಕಳುಹಿಸಲೇನಮ್ಮ ಎಂದು ಕ್ಲಾಸ್ ತೆಗೆದುಕೊಂಡರು.ಗಮನಕ್ಕೆ ತಾರದೆ ವಿಕಲಚೇತನರಿಗೆ ಕಾರ್ಡ್‌ಗಳನ್ನು ವಿತರಿಸಿದ್ದು, ಅಧಿಕಾರಿಗಳಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳುವಲ್ಲಿ ವಿಫಲಗೊಂಡ ಇಲಾಖೆಯ ಕಲಬುರಗಿ ವಿಭಾಗದ ಆಯುಕ್ತರ ವಿರುದ್ಧವು ಸಚಿವ ಸಂತೋಷ ಲಾಡ್ ಅವರು ಸಿಟ್ಟಿಗೆದ್ದು, ಬೆಜವಾಬ್ದಾರಿ, ನಿರ್ಲಕ್ಷ್ಯತನದ ವರ್ತನೆ ಮರುಕಳಿಸದಂತೆ ಎಚ್ಚರಿಕೆ ಸಂದೇಶ ಸಾರಿದರು.ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳ ಒದಗಿಸಿ: ಸಚಿವ ಸಂತೋಷ ಲಾಡ್

ರಾಯಚೂರು: ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನು ಒದಗಿಸಬೇಕು. ಇಲಾಖೆ ಯೋಜನೆಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕೆಂದು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಎಸ್. ಲಾಡ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸ್ಥಳೀಯ ಜಿಪಂ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.ಕಲಬುರಗಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಇಲಾಖೆಯ ಯೋಜನೆಗಳು ಅಚ್ಚುಕಟ್ಟಾಗಿ ಅನುಷ್ಠಾನವಾಗಬೇಕು. ಏನಾದರು ಸಲಹೆ ಸೂಚನೆಗಳಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ತೆಗೆದುಕೊಳ್ಳಬೇಕು. ಎಲ್ಲ ಕಚೇರಿಗಳಲ್ಲಿ ಸಹಾಯವಾಣಿ ಇರಬೇಕು. ಇಲಾಖೆಯ ಯೋಜನೆಗಳ ಕುರಿತು ಪ್ರತಿ ತಿಂಗಳು ಪ್ರಗತಿ ಪರಶೀಲನೆ ನಡೆಸಿ, ಕಚೇರಿಗೆ ವರದಿಯನ್ನು ಕಳಿಸಿಕೊಡಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಂದು ತಾಲೂಕಿನಲ್ಲಿ ತಾಲೂಕು ಮಟ್ಟದಲ್ಲಿ ಕಾರ್ಯಗಾರವನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳಬೇಕು. ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯೊಗೆ ಇರುವ ಸಂಸ್ಥೆಗಳಲ್ಲಿ ಕನಿಷ್ಠ ವೇತನ ದರಗಳು, ವೇತನ ಪಾವತಿ ದಿನಾಂಕವನ್ನು ಕಡ್ಡಾಯ ಸಂಸ್ಥೆಯ ಸೂಚನಾ ಫಲಕದಲ್ಲಿ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.ರಾಜ್ಯದಲ್ಲಿ ಈಗಾಗಲೇ ಕಾರ್ಮಿಕರಿಗೆ ಕಾರ್ಡುಗಳನ್ನು ವಿತರಿಸಲಾಗಿದೆ. ಮೂರ್ನಾಲ್ಕು ವರ್ಷಗಳಲ್ಲಿ ಕಾರ್ಮಿಕರ ನೋಂದಣಿ ಹೆಚ್ಚಳವಾಗಿದೆ. ಅನರ್ಹರೂ ಈ ಪಟ್ಟಿಯಲ್ಲಿ ಸೇರಿರಬಹುದಾದ ಆತಂಕವಿದೆ. ಅನರ್ಹರಿಗೆ ಕಾರ್ಡ್ ಕೊಟ್ಟಲ್ಲಿ ಅಧಿಕಾರಿ-ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಏನಾದರೂ ಅಕ್ರಮಗಳು ನಡೆದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದರು.

ಎಸ್ಸಿ ಮತ್ತು ಎಸ್ಟಿ ಮಾಲೀಕತ್ವದ ಉದ್ಯಮಗಳಿಗೆ ನೆರವು ಎಸ್.ಸಿ ಎಸ್.ಟಿ ಸಮುದಾಯದವರ ಮಾಲೀಕತ್ವದ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಹಾಯಧನ ನೀಡಲಾಗುತ್ತಿದೆ. ಅಲ್ಲದೇ ಅದೇ ಕೈಗಾರಿಕೆಯಲ್ಲಿ ಕಾಯಂ ನೌಕರನಾಗಿ ನೇಮಕಗೊಂಡಿದ್ದಲ್ಲಿ ಅವರ ಕಾರ್ಯ ನಿರ್ವಹಣಾ ಅವಧಿಯ ಪಿ.ಎಫ್ ಸೇರಿದಂತೆ ಇತರೆ ಸೌಲಭ್ಯಗಳ ಶುಲ್ಕ ಇಲಾಖೆಯಿಂದಲೇ ಭರಿಸಲಾಗುವುದು ಎಂದರು.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ಕಿಟ್ಗಳನ್ನು ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಲ್ಲಿ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸುವ ಸಮಯದಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರನ್ನು ಆಹ್ವಾನಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕಲಬುರಗಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆಯಿಂದ ಬಾಲ ಕಾರ್ಮಿಕ & ಕಿಶೋರ ಕಾರ್ಮಿಕ ಕಾಯ್ದೆಯಡಿ ಸುಮಾರು 5,327 ತಪಾಸಣೆ ಕೈಗೊಳ್ಳ ಲಾಗಿದ್ದು, 226 ಬಾಲ ಕಾರ್ಮಿಕ & ಕಿಶೋರ ಕಾರ್ಮಿಕ ಕಾಯ್ದೆ ಪ್ರಕರಣಗಳು ಪತ್ತೆಯಾಗಿವೆ. ಈ ಸಂಬಂಧ ಮೊಕದ್ದಮೆಗಳನ್ನು ಹೂಡಲಾಗಿದೆ. 226 ಬಾಲ ಕಾರ್ಮಿಕ & ಕಿಶೋರ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದರು.ವಿಜಯಪುರ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣ ತಲೆತಗ್ಗಿಸುವ ಸಂಗತಿ: ಲಾಡ್‌ರಾಯಚೂರು: ವಿಜಯಪುರದ ಇಟ್ಟಿಗೆ ಬಟ್ಟಿಯಲ್ಲಿ ಕಾರ್ಮಿಕರ ಮೇಳೆ ನಡೆದಿರುವ ಹಲ್ಲೆ ಪ್ರಕರಣ ಇಡೀ ಕರ್ನಾಟಕವೇ ತಲೆ ತಗ್ಗಿಸುವ ಸಂಗತಿಯಾಗಿದ್ದು, ರಾಜ್ಯದ ಪಾಲಿಕೆ ಬ್ಲಾಕ್‌ ಡೇ ಎಂದರೇ ತಪ್ಪಾಗಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ತೀವ್ರ ಬೇಸರ ವ್ಯಕ್ತಪಡಿಸಿದರು.ಸ್ಥಳೀಯ ಜಿಪಂ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಕಲ್ಯಾಣ ಕರ್ನಾಟಕ ವಿಭಾಗದ ಸಭೆಯ ನಂತರ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣ ಎಲ್ಲರೂ ತಲೆತಗ್ಗಿಸುವಂತ ಅಮಾನವೀಯ ಘಟನೆ. ಈ ಘಟನೆ ಮಾನವೀಯತೆ ಮೀರಿ ನಡೆದಿದೆ, ಮಾನವೀಯತೆ ಇರುವವರು ಯಾರೂ ಇಂತಹ ಕೃತ್ಯವನ್ನು ಮಾಡಲ್ಲ, ಇದು ಹಲ್ಲೆ ನಡೆಸಿದವರ ಮನಸ್ಥಿತಿಯನ್ನು ತೋರಿಸುತ್ತದೆ.

ಲೇಬರ್ ,ಪೊಲೀಸ್ ಪ್ರಕರಣ ಇತರೆ ಎಲ್ಲವೂ ಆ ಮೇಲೆ ಈ ತರ ಮನಸ್ಥಿತಿ ಇರುವಂತದ್ದು ,ಈ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ ಅಂದರೆ ನನಗೇ ವೈಯಕ್ತಿಕವಾಗಿ ತಲೆತಗ್ಗಿಸುವಂತದ್ದಾಗಿದೆ ಎಂದರು.

ಘಟನೆಯನ್ನು ನಾನು ವೈಯಕ್ತಿಕವಾಗಿ ಖಂಡಿಸುತ್ತೇನೆ. ಹಬಕ್ಕೆ ಹೋಗಿ ಬಂದವರ ಮೇಳೆ ಬಟ್ಟಿ ಮಾಲೀಕರು ಹೊಡೆದಿದ್ದು, ಮಾನಸಿಕ ಆರೋಗ್ಯ ಕಳೆದುಕೊಂಡವರೇ ಈ ರೀತಿಯಾಗಿ ಮಾಡುತ್ತಾರೆ. ಅಮಾನವೀಯ ಘಟನೆಯಿದು, ಬಿಹಾರನಲ್ಲಿ ನಡೆಯುವಂಥ ಘಟನೆ ಥರ ಮೇಲ್ನೋಟಕ್ಕೆ ಕಾಣುತ್ತೆ. ಅಲ್ಲಿ ನಡೆಯುವಂಥ ಘಟನೆ ಅನ್ನೋದಕ್ಕೆ ನನ್ನ ಸಮರ್ಥನೆ ಇದೆ. ಕಾರ್ಮಿಕ ಅಂತಲ್ಲಾ ಯಾರ ಮನೆಯಲ್ಲಿಯಾದ್ರೂ ಇಂತಹ ಘಟನೆ ನಡೆಯಬಹುದು. ಕಾರ್ಮಿಕ ಅಂತ ಪದ ತೆಗೆದರೂ ಈ ರೀತಿ ಹೊಡಿಬಹುದಾ, ಇದು ಕೆಟ್ಟ ಮನಸ್ಥಿತಿ. ಇಂತಹ ಮನಸ್ಥಿತಿಯನ್ನ ನಾವು ವಿರೋಧಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಕಾನೂನು ಪ್ರಕಾರ ಯಾವ ಕ್ರಮ ಜರುಗಿಸಬೇಕೋ ಅದನ್ನು ಕೈಗೊಳ್ಳುತ್ತಾರೆ. ಕೃತ್ಯದಾರರ ಮೇಲೆ ಪೊಲೀಸ್‌ ಕೇಸ್‌ ದಾಖಲಿಸಲಿದ್ದು, ಯಾರು ಕಾರ್ಮಿಕರಿಗೆ ಹೊಡೆಯುವ ಅಧಿಕಾರವಿಲ್ಲ.

ಕಾರ್ಮಿಕರನ್ನ ಹಿಗ್ಗಾಮುಗ್ಗಾ ಹೊಡೆದಿರುವುದನ್ನ ನಾನು ಮಾಧ್ಯಮಗಳ ಮುಖಾಂತರ ನೋಡಿದ್ದೇನೆ. ಎಲ್ಲಾ ಇಲಾಖೆ ಅಧಿಕಾರಿಗಳು ಅಲ್ಲಿಗೆ ಹೋಗಿದ್ದು, ಕಾನೂನಿನ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಏನು ಕಠಿಣ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳಲಾಗುವುದು. ಯಾರೂ ಸಹ ಕಾರ್ಮಿಕರ ಜೊತೆಗೆ ಅನುಚಿತವಾಗಿ ನಡೆದುಕೊಳ್ಳಬಾರದು. ಕಾನೂನನ್ನು ಎಲ್ಲರೂ ಪಾಲಿಸಬೇಕು. ಕಾನೂನಿನ ಕಠಿಣ ಕ್ರಮ ಪರಿಹಾರ ಅಲ್ಲಾ ಮನಸ್ಥಿತಿಗಳು ಬದಲಾಗಬೇಕು. ಬಾಲಕಾರ್ಮಿಕ ಪದ್ಧತಿ ಕೂಡ ಅಪಕ್ವ ಮನಸ್ಥಿತಿ, ಅದೂ ಬದಲಾಗಬೇಕು. ಈ ರೀತಿಯ ಮನಸ್ಥಿತಿ ಬದಲಾಗಬೇಕು ಅಂತ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಸಹಕರಿಸಲು ಸಚಿವ ಮನವಿರಾಯಚೂರು: ಗ್ರಾಮೀಣ ಭಾಗದ ಹಲವೆಡೆ ಇನ್ನು ಜೀವಂತವಾಗಿದೆ ಎನ್ನಲಾಗುವ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯವಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಕಾರ್ಮಿಕ ಸಚಿವ ಸಂತೋಷ ಎಸ್. ಲಾಡ್ ಅವರು ಹೇಳಿದರು.

ಸ್ಥಳೀಯ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಇಂಡಸ್ಟ್ರಿಯಲ್ ಡಿಸ್ಪೋರ್ಟ್ ಕಾಯ್ದೆಯಡಿ ಸುಮಾರು 183 ಪ್ರಕರಣಗಳು ದಾಖಲಾಗಿದ್ದು, ಸುಮಾರು 133 ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದರು.

ಬಾಲ ಕಾರ್ಮಿಕ ಕಾಯ್ದೆಯಡಿ ಸುಮಾರು 256 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಬೇರೆ ರಾಜ್ಯಗಳಿಂದ ಬರುವಂತಹ ಮಕ್ಕಳನ್ನು ರಕ್ಷಣೆ ಮಾಡುವಂತ ಕಾರ್ಯ ಸಹ ಮಾಡಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಾಲ ಕಾರ್ಮಿಕ ಇಲಾಖೆಯಲ್ಲಿ ದೊರಕುವಂತೆ ಕಾರ್ಯವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯಡಿ ರಾಯಚೂರ ಜಿಲ್ಲೆಯಲ್ಲಿ 12, ಕಲಬುರಗಿ ಜಿಲ್ಲೆಯಲ್ಲಿ 37, ಬೀದರ ಜಿಲ್ಲೆಯಲ್ಲಿ 9, ಯಾದಗಿರಿ ಜಿಲ್ಲೆಯಲ್ಲಿ 34, ಕೊಪ್ಪಳ ಜಿಲ್ಲೆಯಲ್ಲಿ 5 ಹಾಗೂ ವಿಜಯನಗರ ಜಿಲ್ಲೆಯಲ್ಲಿ 9 ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 20 ಸೇರಿದಂತೆ ಒಟ್ಟು 126 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಮೊಕದ್ದಮೆ ಹೂಡಲು 43 ಪ್ರಕರಣಗಳು ಬಾಕಿ ಇವೆ. 226 ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.ಸಭೆಯಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ, ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ, ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ನಿತೀಶ್ ಕೆ., ಕಾರ್ಮಿಕ ಇಲಾಖೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯದರ್ಶಿ ಭಾರತಿ ಡಿ., ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಸೇರಿ ಕಲಬುರಗಿ ವಿಭಾಗದ ಎಲ್ಲ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಿರೀಕ್ಷಕರು ಇತರರು ಇದ್ದರು.ಇಂಡಿಯಾದಲ್ಲಿ ಓಬ್ಬರೇ ‘ಸ್ಟಾರ್’ ಪ್ರಚಾರಕ, ಅವ್ರೇ ಮೋದಿ: ಲಾಡ್ರಾಯಚೂರು: ಇಂಡಿಯಾದಲ್ಲಿ ಓಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ, ಅವರೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಹೇಬರು, ಎಲ್ಲ ಪಕ್ಷಗಳ ಪ್ರಚಾರದ ಕಾರ್ಯದ ಜವಾಬ್ದಾರಿಯನ್ನು ಅವರಿಗೆ ಕೊಟ್ಟು ಬಿಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಲೇವಡಿ ಮಾಡಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇಲ್ಲದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು ಸಿಎಂ ಸಿದ್ದರಾಮಯ್ಯ ಅವರು ಸಾಮಾನ್ಯವಾಗಿ ಬೇರೆ ರಾಜ್ಯಕ್ಕೆ ಹೋಗುವುದಿಲ್ಲ, ಇಂಡಿಯಾದಲ್ಲಿ ಓಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ ಅವರೇ ಮೋದಿಯಾಗಿದ್ದು, ಅವರಿಗೆ ಸಾಕಷ್ಟು ಸಮಯವಿದೆ, ಇಡೀ ದೇಶದ ಎಲ್ಲ ರಾಜ್ಯಗಳಲ್ಲಿ ಓಡಾಡೋಕೆ, ಎಲ್ಲ ಚುನಾವಣೆ ಭಾಷಣ ಮಾಡೋಕೆ ಅವರಿಗೆ ಟೈಂ ಇದೆ. ಒಂದೊಂದು ರಾಜ್ಯಕ್ಕೆ 30-40 ಸಲ ತೆರಳಲು ಸಮಯವಿದೆ, ಅದಕ್ಕಾಗಿಯೇ ಅವರೊಬ್ಬರೇ ಸ್ಟಾರ್ ಪ್ರಚಾರಕರಾಗಿದ್ದಾರೆ ಎಂದರು.ಬೆಳಗಾವಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಅವರ ತ್ಯಾಗದ ಕುರಿತು ಮಾತನಾಡಿರೋ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಸಚಿವ ಸಂತೋಷ್ ಲಾಡ್ ಅವರು, ಈ ವಿಚಾರ ವನ್ನು ಡಿಕೆಶಿ ಅವರೇ ವ್ಯಕ್ತಪಡಿಸಿರುವುದರಿಂದ ಈ ಸಂಗತಿಯನ್ನು ಅವರನ್ನೇ ಕೇಳಿ, ನನ್ನನ್ನು ಕೇಳಿದರೆ, ನಾನು ಹೇಗೆ ಹೇಳಲಿ ಈ ಪ್ರಶ್ನೆಯನ್ನು ಅವರನ್ನೇ ಕೇಳಿ, ನೀವು (ಪತ್ರಕರ್ತರು) ಎಷ್ಟೇ ಚಾವಿ (ಕೀ) ಕೊಟ್ಟರು ನಾನೂ ಹೇಳುವುದಿಲ್ಲ ಎಂದು ನುಣುಚಿಕೊಂಡರು.