ಮತಾಂಧ ಜಿಹಾದಿಗಳಿಗೆ ಗೃಹಸಚಿವರು ಎಷ್ಟು ಮುತ್ತು ಕೊಟ್ಟಿದ್ದಾರೆ?: ಶಾಸಕ ಬೆಲ್ಲದ ಪ್ರಶ್ನೆ

| Published : Dec 15 2024, 02:02 AM IST

ಮತಾಂಧ ಜಿಹಾದಿಗಳಿಗೆ ಗೃಹಸಚಿವರು ಎಷ್ಟು ಮುತ್ತು ಕೊಟ್ಟಿದ್ದಾರೆ?: ಶಾಸಕ ಬೆಲ್ಲದ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯನ್ನೇ ಉಸಿರಾಗಿಸಿಕೊಂಡಿದೆ. ಆದರೆ, ಶಾಂತಿಯುತ ಹೋರಾಟ ನಡೆಸುತ್ತಿದ್ದ ಲಿಂಗಾಯತರ ಮೇಲೆಯೇ ಹಲ್ಲೆ ನಡೆಸಿ, ಹೋರಾಟಗಾರರೇ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು ಎಂದು ಸದನದಲ್ಲೇ ಗೃಹಸಚಿವರು ಸುಳ್ಳು ಹೇಳಿದ್ದಾರೆ ಎಂದು ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಮರಿಗೆ ಮುತ್ತು ಕೊಟ್ಟರೆ, ನಮಗೆ ಲಾಠಿ ಏಟು ಕೊಡುತ್ತದೆ. ಮತಾಂಧ ಜಿಹಾದಿಗಳಿಗೆ ಗೃಹ ಸಚಿವರು ಎಷ್ಟು ಮುತ್ತು ಕೊಟ್ಟಿದ್ದಾರೆ ಎಂಬ ಲೆಕ್ಕ ನೀಡಲಿ ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಹೋರಾಟಗಾರರಿಗೆ ಲಾಠಿ ಏಟು ಕೊಡದೇ, ಮುತ್ತು ಕೊಡಬೇಕಿತ್ತಾ?, ಎಂದು ಬೆಳಗಾವಿಯಲ್ಲಿ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಲಿಂಗಾಯತರ ಮೇಲೆ ಲಾಠಿಚಾರ್ಜ್ ನಡೆಸಿದ್ದನ್ನು ಸದನದಲ್ಲಿ ಸಮರ್ಥಿಸಿಕೊಂಡ ಗೃಹ ಸಚಿವ ಡಾ. ಜಿ. ಪರಮೇಶ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯನ್ನೇ ಉಸಿರಾಗಿಸಿಕೊಂಡಿದೆ. ಆದರೆ, ಶಾಂತಿಯುತ ಹೋರಾಟ ನಡೆಸುತ್ತಿದ್ದ ಲಿಂಗಾಯತರ ಮೇಲೆಯೇ ಹಲ್ಲೆ ನಡೆಸಿ, ಹೋರಾಟಗಾರರೇ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು ಎಂದು ಸದನದಲ್ಲೇ ಗೃಹಸಚಿವರು ಸುಳ್ಳು ಹೇಳಿದ್ದಾರೆ ಎಂದು ಬೆಲ್ಲದ ಕಿಡಿಕಾರಿದರು.

ಎಷ್ಟು ಮುತ್ತು ಕೊಟ್ಟಿದ್ದೀರಿ?:

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಠಾಣೆ, ದೇವಸ್ಥಾನಗಳ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕರ ಮೇಲಿನ ಪ್ರಕರಣ ವಾಪಾಸ್ ಪಡೆದು ಎಷ್ಟು ಮುತ್ತು ಕೊಟ್ಟಿದ್ದೀರಿ?, ನಾಗಮಂಗಲ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ದಾಳಿ ಮಾಡಿದ್ದ ಜಿಹಾದಿಗಳಿಗೆ ನೀವು ಕೊಟ್ಟ ಮುತ್ತಿನ ಲೆಕ್ಕ ಎಷ್ಟು?. ಪಿಎಫ್‌ಐ ಭಯೋತ್ಪಾದಕ ಸಂಘಟನೆಗಳ ಮೇಲಿನ 175 ಪ್ರಕರಣ ವಾಪಾಸ್ ಪಡೆದು, ಎಷ್ಟು ಮುತ್ತು ಕೊಟ್ಟು ಕಳುಹಿಸಿದಿರಿ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ನಿಸ್ಸೀಮರು:

ಎಲ್ಲರ ಮೀಸಲಾತಿ ತೆಗೆದು ಮುಸ್ಲಿಮರಿಗೆ ಕೊಡಲು ಮುಖ್ಯಮಂತ್ರಿ ಹೊರಟಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು. ಲಿಂಗಾಯತರಿಗೆ, ಒಕ್ಕಲಿಗರಿಗೆ, ಮರಾಠರಿಗೆ ಮೀಸಲಾತಿ ಕೊಡಲ್ಲ ಎಂದು ಘೋಷಣೆ ಮಾಡಲಿ. ಕಾಂಗ್ರೆಸ್ ಸರ್ಕಾರ ನಮಗೆ ಮೀಸಲಾತಿ ಕೊಡುತ್ತದೆ ಎಂಬ ಗ್ಯಾರಂಟಿ ಇಲ್ಲ. ನಾಡಿನ ಬಸವ ಅನುಯಾಯಿಗಳು ಈ ಲಿಂಗಾಯಿತ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ‌ ಕಲಿಸದೇ ಬಿಡುವುದಿಲ್ಲ ಎಂದು ಹೇಳಿದರು.

ರಾಹುಲ್‌ ಬೈಬಲ್ ಹಿಡಿಯುತ್ತಾರೆ:

ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನ ಹಿಡಿದುಕೊಂಡವರ ಹಾಗೆ ಬೈಬಲ್ ಹಿಡಿದುಕೊಂಡಿರುತ್ತಾರೆ. ಅಂಬೇಡ್ಕರ್ ಸಂವಿಧಾನ ಅಂತ ಹೇಳಿಕೊಂಡು ಆಟ ಆಡುತ್ತಾರೆ ಎಂದು ಬೆಲ್ಲದ ಕಿಡಿಕಾರಿದರು.