ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ 132 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡದ ನೀಲನಕ್ಷೆಯನ್ನು ಗೃಹ ಸಚಿವ ಡಾ: ಜಿ. ಪರಮೇಶ್ವರ ಪರಿಶೀಲಿಸಿದರು. ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿ ನೂತನ ಕಟ್ಟಡ ವಿನ್ಯಾಸದ ನೀಲನಕ್ಷೆ ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚಿಸಿದ ಅವರು, ಪ್ರಸ್ತುತ ಇರುವ ಜಿಲ್ಲಾಸ್ಪತ್ರೆಯ ಕಟ್ಟಡವು 74 ವರ್ಷ ಹಳೆಯದಾಗಿದ್ದು, ಆಧುನೀಕರಿಸಲು ಸಾಧ್ಯವಿಲ್ಲ. ಕಟ್ಟಡದ ಹಲವು ಭಾಗಗಳು ಶಿಥಿಲಗೊಳ್ಳುತ್ತಿವೆ. ಅಲ್ಲದೆ ಹಳೆಯ ಕಟ್ಟಡದ ಮೇಲೆ ಮೇಲಂತಸ್ತುಗಳ ನಿರ್ಮಾಣ ಸಾಧ್ಯವಿಲ್ಲದೆ ಇರುವುದರಿಂದ ನೂತನವಾಗಿ ಸುಸಜ್ಜಿತ ಹಾಗೂ ಆಧುನಿಕವಾದ 300 ಹಾಸಿಗೆಗಳ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಕಟ್ಟಡ ಕಾಮಗಾರಿಯನ್ನು ಗಣಿಬಾಧಿತ ಪ್ರದೇಶಗಳ ಸಮಗ್ರ ಪುನಃಶ್ಚೇತನ ಯೋಜನೆಯಡಿ ಕೈಗೊಳ್ಳಲಾಗುವುದು. ಕಾಮಗಾರಿ ಕೈಗೊಳ್ಳುವ ಮುನ್ನ ಬೇರೆ ಜಿಲ್ಲೆಯಲ್ಲಿ ಆಧುನಿಕವಾಗಿ ನಿರ್ಮಿಸಿರುವ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರಲ್ಲದೆ, ಕಟ್ಟಡವನ್ನು ಜಿ+೪ ಅಂತಸ್ತುಗಳನ್ನೊಳಗೊಂಡಂತೆ ಆಧುನಿಕವಾಗಿ ವಿನ್ಯಾಸಗೊಳಿಸಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಲು ನವೀನ ಸೌಲಭ್ಯಗಳಿಂದ ಕೂಡಿದ ಆಸ್ಪತ್ರೆ ಕಟ್ಟಡದ ನಿರ್ಮಾಣ ಅತೀ ಅಗತ್ಯವಾಗಿದೆ. ವಿನ್ಯಾಸದಲ್ಲಿ ಸುಲಭ ಪ್ರವೇಶ, ತುರ್ತು ಸೇವೆಗಳ ವೇಗ, ಸ್ವಚ್ಛತೆ ಹಾಗೂ ಸ್ಮಾರ್ಟ್ ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಇದಕ್ಕೂ ಮುನ್ನ ಆಸ್ಪತ್ರೆಯ ಟ್ರಾಮಾಕೇರ್ ಸೆಂಟರ್, ಮಕ್ಕಳ ವಾರ್ಡ್, ಹೆರಿಗೆ ವಾರ್ಡ್, ತೀವ್ರ ನಿಗಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ತೀವ್ರ ನಿಗಾ ಘಟಕದಲ್ಲಿ ರೋಗಿಗಳನ್ನು ದಾಖಲು ಮಾಡಿಕೊಂಡ ವಹಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಆರೋಗ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.