ವ್ಯಕ್ತಿಗೆ ಸುಲಿಗೆ ಮಾಡಿದ್ದ ಮೂವರ ಬಂಧಿಸಿದ ಹೊಯ್ಸಳ ಪೊಲೀಸರು

| Published : Dec 02 2024, 01:19 AM IST

ಸಾರಾಂಶ

ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ಸುಲಿಗೆ ಮಾಡಿದ್ದ ಮೂವರನ್ನು 112 ಹೊಯ್ಸಳ ಪೊಲೀಸರು ಬಂಧಿಸಿದ್ದಾರೆ.

- ತರುಣ್, ಸಿಕಂದರ್, ಐಗೂರು ವಾಸಿ ಪ್ರಶಾಂತ್ ಸೆರೆ

- - -

- ಐಗೂರು ಗೊಲ್ಲರಹಟ್ಟಿ ಬಳಿಯ ಜೀವನ್ ಡಾಬಾದಲ್ಲಿ ದಾದಾಪೀರ್ ಅವರ ವಸ್ತುಗಳ ಸುಲಿಗೆ

- ಯಶಸ್ವಿ ಕಾರ್ಯಾಚರಣೆ ನಡೆಸಿದ 112 ಹೊಯ್ಸಳ ಅಧಿಕಾರಿಗಳು, ಸಿಬ್ಬಂದಿಗೆ ಎಸ್‌ಪಿ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ಸುಲಿಗೆ ಮಾಡಿದ್ದ ಮೂವರನ್ನು 112 ಹೊಯ್ಸಳ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ತರುಣ್, ಸಿಕಂದರ್ ಹಾಗೂ ಐಗೂರು ವಾಸಿ ಪ್ರಶಾಂತ್ ಬಂಧಿತರು. ಆರೋಪಿಗಳಿಂದ 1 ರಿಯಲ್‌ ಮಿ ಮೊಬೈಲ್, ₹2000 ನಗದು, 1 ಬೆಳ್ಳಿ ಉಂಗುರ, ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ನ.27ರಂದು ಕಾಟೇಹಳ್ಳಿ ತಾಂಡಾದ ದಾದಾಪೀರ್ ಅಲಿಯಾಸ್ ಮಹಮದ್ ಎಂಬವರು ತರಗಾರ ಕೆಲಸ ಮುಗಿಸಿಕೊಂಡು ರಾತ್ರಿ ಐಗೂರು ಗೊಲ್ಲರಹಟ್ಟಿ ಬಳಿಯ ಜೀವನ್ ಡಾಬಾದಲ್ಲಿ ಊಟಕ್ಕೆ ಬಂದಿದ್ದರು. ಡಾಬಾ ಬಳಿ ನಿಲ್ಲಿಸಿದ್ದ ಬೈಕ್ ಬಳಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್‌ನಲ್ಲಿ ಬಂದ ಮೂವರು ಯುವಕರು ದಾದಾಪೀರ್ ಮೇಲೆ ಹಲ್ಲೆ ನಡೆಸಿ ಹೆದರಿಸಿ, 2 ಬೆಳ್ಳಿಯ ಉಂಗುರ, ಜೇಬಿನಲ್ಲಿದ್ದ ₹2 ಸಾವಿರ, ರಿಯಲ್ ಮಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಕೂಡಲೇ ದಾದಾಪೀರ್ 112 ತುರ್ತು ಸಹಾಯವಾಣಿಗೆ ಕರೆ ಮಾಡಿದಾಗ, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಪಲ್ಸರ್ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರನ್ನು ಆರ್‌ಎಂಸಿ ಠಾಣಾ ವ್ಯಾಪ್ತಿಯ ಗಾಣಗಿತ್ತಿ ಮಾಯಮ್ಮ ದೇವಸ್ಥಾನದ ಬಳಿ ಹಿಡಿಯುವಲ್ಲಿ ಯಶಸ್ವಿಯಾದರು. ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

112 ತುರ್ತು ಸಹಾಯವಾಣಿ ಅಧಿಕಾರಿಗಳು ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ್, ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು.

112 ಹೊಯ್ಸಳ 07 ಕರ್ತವ್ಯದಲ್ಲಿದ್ದ ಅಧಿಕಾರಿಗಳಾದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಸಣ್ಣ ನಾಗೇಂದ್ರಪ್ಪ, ವೀರೇಶ್ ಅವರು ದೂರು ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕಾರ್ಯಾಚರಣೆ ನಡೆಸಿದ 112 ಹೊಯ್ಸಳ ಅಧಿಕಾರಿಗಳನ್ನು ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿಗಳಾದ ವಿಜಯ್ ಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ್ ಅಭಿನಂದಿಸಿದ್ದಾರೆ.

- - -