ನಿಯಮ‌ಬಾಹಿರವಾಗಿ ವಜಾ ಮಾಡಿರುವುದನ್ನು ವಿರೋಧಿಸಿ, ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ಸುರತ್ಕಲ್ ನ ಬಾಳ ಬಳಿ ಇರುವ ಎಚ್ ಪಿಸಿಎಲ್ ಘಟಕದ ಪ್ರಧಾನ ದ್ವಾರದ ಬಳಿ ಕಳೆದ ಎರಡು ತಿಂಗಳುಗಳಿಂದ ನಿರಂತರ ಧರಣಿ ನಡೆಸುತ್ತಿರುವ ನಾಲ್ಕು ಮಹಿಳಾ ಗುತ್ತಿಗೆ ಕಾರ್ಮಿಕರನ್ನು ಬೆಂಬಲಿಸಿ, ಉದ್ಯೋಗದ ಮರು ನೇಮಕಕ್ಕೆ ಒತ್ತಾಯಿಸಿ ಸಿಐಟಿಯು ದ.ಕ. ಜಿಲ್ಲಾ ಸಮಿತಿ ಹಾಗೂ ನಾಗರಿಕ ಹೋರಾಟ ಸಮಿತಿ, ಸುರತ್ಕಲ್‌ ಜಂಟಿಯಾಗಿ ಕಾಟಿಪಳ್ಳ, ಕೈಕಂಬ ಜಂಕ್ಷನ್‌ನಿಂದ ಎಚ್‌ಪಿಸಿಎಲ್ ಪ್ರಧಾನ ದ್ವಾರದ ವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಎಚ್‌ಪಿಸಿಎಲ್ ಪ್ರಧಾನ ದ್ವಾರದ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.

ಮಂಗಳೂರು: ನಿಯಮ‌ಬಾಹಿರವಾಗಿ ವಜಾ ಮಾಡಿರುವುದನ್ನು ವಿರೋಧಿಸಿ, ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ಸುರತ್ಕಲ್ ನ ಬಾಳ ಬಳಿ ಇರುವ ಎಚ್ ಪಿಸಿಎಲ್ ಘಟಕದ ಪ್ರಧಾನ ದ್ವಾರದ ಬಳಿ ಕಳೆದ ಎರಡು ತಿಂಗಳುಗಳಿಂದ ನಿರಂತರ ಧರಣಿ ನಡೆಸುತ್ತಿರುವ ನಾಲ್ಕು ಮಹಿಳಾ ಗುತ್ತಿಗೆ ಕಾರ್ಮಿಕರನ್ನು ಬೆಂಬಲಿಸಿ, ಉದ್ಯೋಗದ ಮರು ನೇಮಕಕ್ಕೆ ಒತ್ತಾಯಿಸಿ ಸಿಐಟಿಯು ದ.ಕ. ಜಿಲ್ಲಾ ಸಮಿತಿ ಹಾಗೂ ನಾಗರಿಕ ಹೋರಾಟ ಸಮಿತಿ, ಸುರತ್ಕಲ್‌ ಜಂಟಿಯಾಗಿ ಕಾಟಿಪಳ್ಳ, ಕೈಕಂಬ ಜಂಕ್ಷನ್‌ನಿಂದ ಎಚ್‌ಪಿಸಿಎಲ್ ಪ್ರಧಾನ ದ್ವಾರದ ವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಎಚ್‌ಪಿಸಿಎಲ್ ಪ್ರಧಾನ ದ್ವಾರದ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.

ಹಿರಿಯ ಕಾರ್ಮಿಕ ನಾಯಕ, ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಮ್ ರವರು ಗೇಟ್ ಮುಂಭಾಗ ನಡೆದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಗುತ್ತಿಗೆ ಕಾರ್ಮಿಕರ ಪರಿಸ್ಥಿತಿ ತೀರಾ ಹೀನಾಯವಾಗಿದೆ. ಕಡಿಮೆ ವೇತನಕ್ಕೆ ದುಡಿಸುವುದಲ್ಲದೆ, ಯಾವುದೇ ಪೂರ್ವ ಸೂಚನೆ, ಪರಿಹಾರ ಇಲ್ಲದೆ ಕೆಲಸದಿಂದ ಹೊರದಬ್ಬಲಾಗುತ್ತಿದೆ ಎಂದರು.

ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಎಚ್‌ಪಿಸಿಎಲ್, ಎಮ್ಆರ್‌ಪಿಎಲ್ ಸಹಿತ ಸುರತ್ಕಲ್ ವಲಯದ ದೊಡ್ಡ ಉದ್ಯಮಗಳು ಗುತ್ತಿಗೆ ಕಾರ್ಮಿಕರ ಶೋಷಣೆಯಲ್ಲಿ ಮುಂಚೂಣಿಯಲ್ಲಿವೆ. ನಮ್ಮದೇ ನೆಲದಲ್ಲಿ ಉದ್ಯಮ ಕಟ್ಟಿರುವ ಎಚ್‌ಪಿಸಿಎಲ್‌ನಲ್ಲಿ ಹೊರ ರಾಜ್ಯದ ಅಧಿಕಾರಿಗಳು ತುಂಬಿಕೊಂಡಿದ್ದರು, ಸ್ಥಳೀಯರನ್ನು ನಿಕೃಷ್ಟವಾಗಿ ಕಾಣುತ್ತಾರೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಇಲ್ಲಿನ ಶಾಸಕರು, ಸಂಸದರು ಮಾತನಾಡುತ್ತಿಲ್ಲ ಎಂದು ಆರೋಪಿಸಿದರು. ಶುಕ್ರವಾರದಂದು ಕೇಂದ್ರ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆ ಕರೆದಿದ್ದು, ಅಲ್ಲಿ ವಿಷಯ ಇತ್ಯರ್ಥ ಆಗದಿದ್ದಲ್ಲಿ ಹೋರಾಟವನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವುದಾಗಿ ಅವರು ಎಚ್ಚರಿಕೆ ನೀಡಿದರು. ಸಿಐಟಿಯು ಜಿಲ್ಲಾಧ್ಯಕ್ಷ ಬಿಎಂ ಭಟ್, ಪ್ರಮುಖರಾದ ಬಿ.ಕೆ. ಇಮ್ತಿಯಾಜ್ ಮಾತನಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಕೆ. ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ದ.ಕ. ಜಿಲ್ಲಾ ಬೀಡಿ ಫೆಡರೇಷನ್‌ನ ಬಾಲಕೃಷ್ಣ ಶೆಟ್ಟಿ ಮತ್ತಿತರರಿದ್ದರು.