ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಎಚ್‍ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಎಚ್‍ಪಿವಿ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಎಚ್‍ಪಿವಿ ಲಸಿಕಾ ಕಾರ್ಯಕ್ರಮದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲಸಿಕೆ ನೀಡುವ ಮುನ್ನ ಶಾಲಾ ಹಂತದಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆ ನಡೆಸಿ ಎಚ್‍ಪಿವಿ ಲಸಿಕೆಯ ಮಹತ್ವ ಹಾಗೂ ಅಗತ್ಯತೆ ಕುರಿತು ಅರಿವು ಮೂಡಿಸಬೇಕು. ಪೋಷಕರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಜಾಗೃತಿ ಮೂಡಿಸಬೇಕು. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಎಚ್‍ಪಿವಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಪಡೆಯಲು ಸುಮಾರು ರು 9 ಸಾವಿರದಿಂದ15 ಸಾವಿರದವರೆಗೂ ವೆಚ್ಚವಾಗುತ್ತದೆ. ಸರ್ಕಾರವು ಇದನ್ನು ಉಚಿತವಾಗಿ ನೀಡುತ್ತಿರುವಾಗ, ಅರ್ಹ ವಯಸ್ಸಿನ ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಲಸಿಕೆ ಕುರಿತು ತಪ್ಪು ಮಾಹಿತಿ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ಮಾತನಾಡಿ, ಮಹಿಳೆಯರನ್ನು ಕಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ 14 ವರ್ಷ ಪೂರೈಸಿದ ಮತ್ತು 15 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಎಚ್‍ಪಿವಿ ಲಸಿಕಾ ಅಭಿಯಾನದ ಫಲಾನುಭವಿಗಳೆಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 18,267 ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.
ಅಭಿಯಾನದಲ್ಲಿ “ಗಾರ್ಡಸಿಲ್ 4” ಲಸಿಕೆ ಬಳಸಲಾಗುತ್ತಿದ್ದು, ಇದು ಎಚ್‍ಪಿವಿ ವೈರಸ್‍ನ 6, 11, 16 ಮತ್ತು 18 ಎಂಬ ನಾಲ್ಕು ರೂಪಾಂತರಗಳ ವಿರುದ್ಧ ರಕ್ಷಣೆ ನೀಡುತ್ತದೆ. ಜಿಲ್ಲೆಯ 347 ಉಪ ಕೇಂದ್ರಗಳು, 86 ಪ್ರಾಥಮಿಕ ಆರೋಗ್ಯ , 11 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆ ಲಭ್ಯವಿರುತ್ತದೆ. ಈ ಅಭಿಯಾನವು ಕಳೆದ ಒಂದು ವಾರದಿಂದ ಪ್ರಾರಂಭವಾಗಿದ್ದು, ಮುಂದಿನ ಮೂರು ತಿಂಗಳ ಕಾಲ ನಡೆಯಲಿದೆ. ಲಸಿಕೆಯನ್ನು ಎಡಗೈ ಮೇಲ್ಭಾಗಕ್ಕೆ 0.5 ಮಿ.ಲೀ ಪ್ರಮಾಣವನ್ನು ಸ್ನಾಯುಗಳ ಮೂಲಕ ನೀಡಲಾಗುತ್ತದೆ ಎಂದರು.
ನಿಗದಿತ ವಯೋಮಿತಿಗಿಂತ ಹೊರಗಿರುವವರು, ಗರ್ಭಿಣಿಯರು, ಈಗಾಗಲೇ ಬೇರೆ ಲಸಿಕೆ ಪಡೆದವರು, ಲಸಿಕೆಯಿಂದ ಅಲರ್ಜಿ ಇತಿಹಾಸ ಹೊಂದಿರುವವರು ಹಾಗೂ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಲಸಿಕೆ ನೀಡುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು 74 ವೈದ್ಯಾಧಿಕಾರಿಗಳು ಹಾಗೂ 423 ನರ್ಸಿಂಗ್ ಸಿಬ್ಬಂದಿ ಹಾಗೂ 292 ಪಿಹೆಚ್‍ಸಿಓ ಅವರು ಸಕ್ರಿಯಾಗಿ ಪಾಲ್ಗೊಳ್ಳುತ್ತಿದ್ದು, ಸಾರ್ವಜನಿಕರು ಈ ಸದಾವಕಾಶ ಬಳಸಿಕೊಂಡು ತಮ್ಮ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಹೆಚ್‍ಪಿವಿ ಲಸಿಕಾ ಅಭಿಯಾನದ ಕಾರ್ಯಕ್ರಮಕ್ಕಾಗಿ ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದ್ದು, ಶಿಕ್ಷಣ ಇಲಾಖೆಯು 14 ವರ್ಷ ವಯಸ್ಸಿನ ಅರ್ಹ ಹೆಣ್ಣು ಮಕ್ಕಳ ಸಂಖ್ಯೆ ಮತ್ತು ವಿವರವನ್ನು ತಿಳಿಸುವ ಶಾಲೆಗಳ ಲೈನ್‍ಲಿಸ್ಟನ್ನು ಯುಡಿಐಎಸ್‍ಇ ಪೋರ್ಟಲ್‍ನಲ್ಲಿ ಹಂಚಿಕೊಳ್ಳಬೇಕು. ಪೋಷಕರು-ಶಿಕ್ಷಕರ ಸಭೆಯನ್ನು ಆಯೋಜಿಸಿ, ದಿನಾಂಕಗಳನ್ನು ಸ್ಥಳೀಯ ಅರೋಗ್ಯ ಕೇಂದ್ರದೊಂದಿಗೆ ವಿನಿಮಯ ಮಾಡಿಕೊಳ್ಳಬೇಕು. ಸ್ಥಳೀಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳೊಂದಿಗೆ ನೇರ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಜವಾಬ್ದಾರಿಯುತ ನೋಡಲ್ ಶಿಕ್ಷಕರನ್ನು ನೇಮಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಒದಗಿಸಲಾದ ಎಲ್ಲಾ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳನ್ನು ಬಳಸಿ ಜಾಗೃತಿ ಮೂಡಿಸುವುದು ಎಂದು ತಿಳಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.