- ಕೃತಕ ಬುದ್ಧಿಮತ್ತೆಯ ಕ್ರಾಂತಿ ಯುಗದಲ್ಲಿ ಯುವ ಪದವೀಧರರ ಭವಿಷ್ಯಕ್ಕೆ ಹೊಸ ದಿಕ್ಸೂಚಿ: ವಿಲಾಸ್ ವಾಟ್ವೀ ಮಾಹಿತಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕೃತಕ ಬುದ್ಧಿಮತ್ತೆ (ಎಐ)ನ ಕ್ರಾಂತಿಯ ಯುಗದಲ್ಲಿ ಯುವ ಪದವೀಧರರ ಭವಿಷ್ಯಕ್ಕೆ ಹೊಸ ದಿಕ್ಸೂಚಿ ತೋರಲು ದಾವಣಗೆರೆ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಆ.14ರಂದು ಹಮ್ಮಿಕೊಂಡಿರುವ ಎಚ್ಆರ್ ಮಹಾ ಸಮಾವೇಶ- 2026ರ ಸಂಭ್ರಮದಲ್ಲಿ ದೇಶದ 75ಕ್ಕೂ ಹೆಚ್ಚು ಎಚ್ಆರ್ ದಿಗ್ಗಜರು ಪಾಲ್ಗೊಳ್ಳುವರು ಎಂದು ಜಿಎಂವಿವಿ ಪ್ಲೇಸ್‌ಮೆಂಟ್ ಅಧಿಕಾರಿ ವಿಲಾಸ್ ವಾಟ್ವೀ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30 ಗಂಟೆಗೆ ಮಹಾ ಸಮಾವೇಶಕ್ಕೆ ಬೆಂಗಳೂರಿನ ಎಸ್‌ಟಿಪಿಐ ನಿರ್ದೇಶಕ, ಚಿತ್ರದುರ್ಗ ಮೂಲದವರಾದ ವಿ.ಮಹಾದೇಶ ಭಾಗವಹಿಸಲಿದ್ದಾರೆ. ಇನ್ಫೋಸಿಸ್ ಫಿನಾಕಲ್‌ನ ಗ್ಲೋಬಲ್ ಹೆಡ್ ಕೃಷ್ಣಸ್ವಾಮಿ ಸುಬ್ಬರಾವ್, ಆಟೋರ್ಯಾಬಿಟ್ ಗ್ಲೋಬಲ್ ಹೆಡ್ ಸಂಕೇತ್ ರಾಮಕೃಷ್ಣಮೂರ್ತಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಲು, ಮಾರ್ಗದರ್ಶನ ನೀಡಲು ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಆಗಮಿಸುತ್ತಿದ್ದಾರೆ ಎಂದರು.ದೇಶದ ವಿವಿಧ ವಿ.ವಿ.ಗಳ ಶೈಕ್ಷಣಿಕ ತಜ್ಞರು, 75ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳ ಎಚ್ಆರ್‌ಗಳು, ಕೈಗಾರಿಕಾ ತಜ್ಞರು ಸೇರಿದಂತೆ ಅನೇಕ ಸಾಧಕರು ಸಂವಾದ ನಡೆಸಿಕೊಡಲಿದ್ದಾರೆ. ಬೆಂಗಳೂರು ಹಾಗೂ ಇತರೆ ಮೆಟ್ರೋಪಾಲಿಟಿನ್ ನಗರಗಳನ್ನು ಹೊರತುಪಡಿಸಿ, ಮಧ್ಯ ಕರ್ನಾಟಕದಲ್ಲಿ, ಟಯರ್ 2 ಸಿಟಿಗಳಲ್ಲಿ ನಡೆಯುತ್ತಿರುವ ಮೊದಲ ಮಹಾ ಸಮಾವೇಶ ಇದಾಗಿದೆ. ಎಐ ಯುಗದಲ್ಲಿ ಉದ್ಯೋಗ ಮತ್ತು ಶಿಕ್ಷಣ ವಿಷಯವಾಗಿ ವಿಶೇಷ ವಿಷಾಯಾದಾರಿತ ಮಂಥನ ನಡೆಯಲಿದೆ ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ, ಕೌಶಲ್ಯಾಭಿವೃದ್ಧಿ ಹಾಗೂ ಶಿಕ್ಷಣದ ಹೊಸ ಮಾದರಿಗಳು ಎಂಬ ಪರಿಕಲ್ಪನೆಯಡಿ ಬೃಹತ್ ವಿಚಾರ ಸಂಕಿರಣ ನಡೆಯಲಿದೆ. ಬರೀ ಪಠ್ಯಾಧಾರಿತ ಶಿಕ್ಷಣಕ್ಕೆ ಸೀಮಿತವಾಗದೇ, ಕಾರ್ಪೋರೇಟ್ ಜಗತ್ತಿನ ನೈಜ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಹಾಗೂ ತಾಂತ್ರಿಕವಾಗಿ ಸಜ್ಜುಗೊಳಿಸುವುದು ಇಂತಹದ್ದೊಂದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ದೇಶದ ಮೂಲೆ ಮೂಲೆಗಳಿಂದ ಬೃಹತ್ ಕಂಪನಿಗಳ ಅನುಭವಿ, ಹಿರಿಯ, ಪ್ರತಿಭಾವಂತ ಎಚ್‌ಆರ್ ಮುಖ್ಯಸ್ಥರು ಭಾಗವಹಿಸುವರು. ನವದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳ ಪ್ರಸಿದ್ಧ ಸಂಸ್ಥೆಗಳಿಂದ 75ಕ್ಕೂ ಹೆಚ್ಚು ಎಚ್‌ಆರ್ ನಾಯಕರು ಒಂದೇ ಸೂರಿನಡಿ ಸೇರಲಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೊಂದು ಭದ್ರ ಬುನಾದಿ ಹಾಕುವುದು ಇಡೀ ಕಾರ್ಯಕ್ರಮ ಗುರಿ, ಧ್ಯೇಯವಾಗಿದೆ ಎಂದು ವಿವರಿಸಿದರು.
ವಿ.ವಿ.ಯ ಮಾರ್ಕೆಟಿಂಗ್ ಮತ್ತು ಪ್ರಮೋಷನ್ ವಿಭಾಗದ ಡೀನ್ ಡಾ. ಟಿ.ಎಂ.ವೀರಗಂಗಾಧರ ಸ್ವಾಮಿ, ಇಆರ್‌ಪಿ ನಿರ್ದೇಶಕ ಕೀರ್ತಿ ಪ್ರಸಾದ, ಅಸಿಸ್ಟೆಂಟ್ ಪಿಆರ್‌ಒ ಜಿ.ಎಸ್.ವಸಂತಕುಮಾರ ಇದ್ದರು.- - -
(ಬಾಕ್ಸ್)* ಉದ್ಯಮ-ಶಿಕ್ಷಣ ಕ್ಷೇತ್ರ ಮಧ್ಯೆ ಬಲವಾದ ಸೇತುವೆ ಸಮಾವೇಶದ ಉದ್ದೇಶ
ವಿ.ವಿ.ಯ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಎಂ. ಅರುಣಕುಮಾರ್ ಮಾತನಾಡಿ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ನಡುವೆ ಬಲವಾದ ಸೇತುವೆ ನಿರ್ಮಿಸುವುದು ಸಮಾವೇಶದ ಪ್ರಮುಖ ಉದ್ದೇಶ. ಎಐ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾದ ಹೊಸ ಕೌಶಲ್ಯಗಳ ಕುರಿತು ನೇರ ಸಂವಾದವನ್ನು ಅನುಭವಿ, ಹಿರಿಯರು, ಪ್ರತಿಭಾವಂತ ಎಚ್ಆರ್‌ಗಳು ನಡೆಸಿಕೊಡಲಿದ್ದಾರೆ. ಭವಿಷ್ಯದ ಕೌಶಲ್ಯಗಳನ್ನು ನಮ್ಮ ವಿದ್ಯಾರ್ಥಿಗಳು ಹೊಂದಬೇಕೆಂಬ ಪ್ರಯತ್ನ ಇದು ಎಂದು ಅವರು ಹೇಳಿದರು. ದೇಶದ ಪ್ರಮುಖ ಉದ್ಯೋಗದಾತರಿಂದಲೇ ನೇರವಾಗಿ ಉದ್ಯೋಗ ಮಾರುಕಟ್ಟೆ ಸ್ಪರ್ಧೆ ಹಾಗೂ ಅವಕಾಶಗಳ ಮಾಹಿತಿ ನೀಡಲಾಗುವುದು. ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡಲಾಗಿದೆ. ಹೊಸ ಯುಗದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಚಿಂತನ- ಮಂಥನ ಇದಾಗಿದೆ. ವಿದ್ಯಾರ್ಥಿಗಳ ಕನಸುಗಳಿಗೆ ಹೊಸ ರೆಕ್ಕೆ ಕಟ್ಟಿ, ಅಂತಹವರನ್ನು ಜಾಗತಿಕ ಮಟ್ಟದ ಸವಾಲುಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಜಿಎಂವಿವಿ ಆಯೋಜಿಸಿರುವ ಎಚ್‌ಆರ್ ಕಾನ್‌ಕ್ಲೇವ್- 2026 ಶೈಕ್ಷಣಿಕ ವಲಯದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.- - -
-12ಕೆಡಿವಿಜಿ1:ದಾವಣಗೆರೆಯಲ್ಲಿ ಬುಧವಾರ ಜಿಎಂ ವಿ.ವಿ. ಪ್ಲೇಸ್‌ಮೆಂಟ್ ಅಧಿಕಾರಿ ವಿಲಾಸ್ ವಾಟ್ವೀ, ಮಾರ್ಕೆಟಿಂಗ್ ಮತ್ತು ಪ್ರಮೋಷನ್ ವಿಭಾಗದ ಡೀನ್ ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.