ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಗೆ 46 ಹಳ್ಳಿಗಳನ್ನು ತರಲು ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರ ಜತೆಗೆ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆ (ರಿವೈಸ್) ಕೂಡ ಮಾಡುತ್ತಿದೆ. ಅದರಲ್ಲೂ ಜಿಐಎಸ್ ತಂತ್ರಜ್ಞಾನದ ಮೂಲಕವೇ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನೊಂದು ತಿಂಗಳಲ್ಲಿ ಜಿಐಎಸ್ ಮಾಸ್ಟರ್ ಪ್ಲ್ಯಾನ್ ರಿವೈಸ್ ಆಗಲಿದೆ.ಒಂದು ನಗರ ವ್ಯವಸ್ಥಿತವಾಗಿ ಬೆಳೆಯಬೇಕೆಂದರೆ ಮಾಸ್ಟರ್ ಪ್ಲ್ಯಾನ್ ಬೇಕೇ ಬೇಕು. ಮಾಸ್ಟರ್ ಪ್ಲ್ಯಾನ್ ಎಂದರೆ ಆ ನಗರದ ನೀಲನಕ್ಷೆ. ಎಲ್ಲಿ ರಸ್ತೆಗಳು ಬರಬೇಕು. ಎಷ್ಟು ಅಳತೆಯ ರಸ್ತೆಗಳು ಇರಬೇಕು. ವಸತಿ ವ್ಯವಸ್ಥೆ ಎಲ್ಲಿದ್ದರೆ ಚೆನ್ನ? ವಾಣಿಜ್ಯ ಸಂಕೀರ್ಣಗಳು ಎಲ್ಲಿರಬೇಕು. ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಯಾವ ರೀತಿ ಇರಬೇಕು ಎಂಬುದೆಲ್ಲವೂ ಅದರಲ್ಲಿ ಅಡಕವಾಗಿರುತ್ತವೆ. ಮಾಸ್ಟರ್ ಪ್ಲ್ಯಾನ್ ಇದ್ದಾಗಲೇ ಯೋಜನಾ ಬದ್ಧವಾಗಿ ಆ ನಗರ ಬೆಳೆಯಲು ಸಾಧ್ಯ. ನಗರಗಳು ಬೆಳೆಯುತ್ತಿದ್ದಂತೆ ಮಾಸ್ಟರ್ ಪ್ಲ್ಯಾನ್ ಕೂಡ ರಿವೈಸ್ ಆಗುತ್ತಿರುತ್ತವೆ. ಅಂದರೆ ಕೆಲ ಮಾರ್ಪಾಡುಗಳು ಆಗುತ್ತಿರುತ್ತವೆ.
ಇನ್ನು ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೆಯ ದೊಡ್ಡ ನಗರ. ಇದು ನಾಗಾಲೋಟದಲ್ಲಿ ಬೆಳೆಯುತ್ತಿರುವ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಹತ್ತಾರು ಹೊಸ ಬಡಾವಣೆಗಳು ಬರುತ್ತಿವೆ. ವ್ಯವಸ್ಥಿತವಾಗಿ ಬೆಳೆಯುತ್ತವೆ. ಅಂದಾಗ ಆ ನಗರದಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸ್ಥಳೀಯ ಸಂಸ್ಥೆಗಳಿಗೆ ಸಮಸ್ಯೆಯಾಗಲ್ಲ. ಪ್ರತಿ 10 ವರ್ಷಕ್ಕೊಮ್ಮೆ ಮಾಸ್ಟರ್ ಪ್ಲ್ಯಾನ್ ರಿವೈಸ್ ಆಗುತ್ತಿರುತ್ತದೆ.ಮಾಸ್ಟರ್ ಪ್ಲ್ಯಾನ್ ಯಾವಾಗ?: ಮೊದಲ ಮಾಸ್ಟರ್ ಪ್ಲ್ಯಾನ್ ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾದಾಗ ಅಂದರೆ 1988ರಲ್ಲಿ ಆಗಿತ್ತು. ಅದಾದ ಬಳಿಕ ಬೇಗನೇ ರಿವೈಸ್ ಆಗಿರಲಿಲ್ಲ. 2001ರಲ್ಲಿ ಒಂದು ಸಲ ರಿವೈಸ್ ಆಗಿತ್ತು. ಆಮೇಲೆ 2011ರಲ್ಲಿ, 2019ರಲ್ಲಿ ಮತ್ತೆ ಮಾಸ್ಟರ್ ಪ್ಲ್ಯಾನ್ ರಿವೈಸ್ ಆಗಿತ್ತು. ಆದರೆ 2019ರಲ್ಲಿ ಕ್ಯಾಡ್ (CAD- Computer Aided Design) ತಂತ್ರಜ್ಞಾನದಲ್ಲಿ ಮಾಸ್ಟರ್ ಪ್ಲ್ಯಾನ್ ರಿವೈಸ್ ಮಾಡಲಾಗಿತ್ತು.
ಇದೀಗ ಜಿಐಎಸ್ (GIS- Geographic information system) ಬೌಗೋಳಿಕ ಮಾಹಿತಿ ವ್ಯವಸ್ಥೆಯಡಿ ಈ ಮಾಸ್ಟರ್ ಪ್ಲ್ಯಾನ್ ರಿವೈಸ್ ಮಾಡಲಾಗುತ್ತಿದೆ. ಇದರಿಂದ ಮಾಸ್ಟರ್ ಪ್ಲ್ಯಾನ್‌ನಲ್ಲಿ ಯಾವ ಅಂಶಗಳು ಬಿಟ್ಟು ಹೋಗಲ್ಲ. ಬೌಗೋಳಿಕವಾಗಿ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಕ್ಯಾಡ್‌ನಲ್ಲಿ ಕೆಲವೊಂದಿಷ್ಟು ಅಂಶಗಳು ಕಣ್ತಪ್ಪುವ ಸಾಧ್ಯತೆಯುಂಟು. ಆದರೆ, ಜಿಐಎಸ್ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ಪ್ಲ್ಯಾನ್‌ನಲ್ಲಿ ಬೌಗೋಳಿಕವಾಗಿ ಅತ್ಯಂತ ನಿಖರವಾದ ಅಂಕಿ ಅಂಶಗಳು ಲಭ್ಯವಾಗುತ್ತವೆ. ಹೀಗಾಗಿ ಇದು ಅತ್ಯುತ್ತಮ ಎನಿಸಿದೆ.ಸಮೀಕ್ಷೆ ಅಂತಿಮಕ್ಕೆ: ದೆಹಲಿಯ ಇ- ಜಿಐಎಸ್ ಎಂಬ ಸಂಸ್ಥೆಯು ಮಾಸ್ಟರ್ ಪ್ಲ್ಯಾನ್ ಪರಿಷ್ಕರಿಸಲು ಜಿಎಸ್‌ಐ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಗಾಗಿ ₹50 ಲಕ್ಷ ವೆಚ್ಚ ತಗುಲಿದೆ. ಆದರೆ, ಅತ್ಯಂತ ನಿಖರ ಮಾಹಿತಿ ಲಭ್ಯವಾಗುತ್ತದೆ. ಕಳೆದ ಕೆಲ ತಿಂಗಳಿಂದಲೇ ಸಮೀಕ್ಷೆ ನಡೆಯುತ್ತಿದೆ. ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಹದಿನೈದು ದಿನದಿಂದ ತಿಂಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಮಾಸ್ಟರ್ ಪ್ಲ್ಯಾನ್ ಪೂರ್ಣಗೊಳ್ಳಲಿದೆ ಎಂದು ಹುಡಾ ಮೂಲಗಳು ತಿಳಿಸುತ್ತವೆ.
ಮಹಾನಗರ ಪಾಲಿಕೆಯೂ ಆಸ್ತಿ ಕರ ಸಮರ್ಪಕ ವಸೂಲಾಗಲಿ ಎಂಬ ಉದ್ದೇಶದಿಂದ ಜಿಐಎಸ್ ತಂತ್ರಜ್ಞಾನದ ಮೂಲಕ ಆಸ್ತಿಗಳ ಸಮೀಕ್ಷೆ ನಡೆಸುತ್ತಿದೆ. ಇದೀಗ ಹುಡಾ ಕೂಡ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆ ಮಾಡುವ ಉದ್ದೇಶದಿಂದ ಜಿಎಸ್‌ಐ ತಂತ್ರಜ್ಞಾನ ಬಳಸುತ್ತಿದೆ. ಇನ್ನಾದರೂ ನಮ್ಮ ನಗರ ವ್ಯವಸ್ಥಿತವಾಗಿ ಬೆಳೆಯಲು ಈ ಮಾಸ್ಟರ್ ಪ್ಲ್ಯಾನ್ ಸಹಕಾರಿಯಾಗಲಿದೆ ಎಂಬುದು ಪ್ರಜ್ಞಾವಂತರ ಅಂಬೋಣ.ಹೊಸ ಹಳ್ಳಿಗಳದ್ದು ಈಗಲ್ಲ: ಇದೀಗ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು 46 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿರುವ ಹುಡಾ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹಾಗಂತ ಹೊಸದಾಗಿ ಸೇರಲಿರುವ ಹಳ್ಳಿಗಳ ಜಿಐಎಸ್ ಸಮೀಕ್ಷೆಯನ್ನೇನೂ ಸದ್ಯ ಮಾಡುತ್ತಿಲ್ಲ. ಹಳೆಯ ಮಾಸ್ಟರ್ ಪ್ಲ್ಯಾನ್‌ನ್ನೇ ಜಿಐಎಸ್ ಮೂಲಕ ಅಳವಡಿಸಿಕೊಳ್ಳುತ್ತಿದೆ. ತನ್ನ ವ್ಯಾಪ್ತಿ ವಿಸ್ತರಿಸಲು ಸರ್ಕಾರದ ಅನುಮೋದನೆ ದೊರೆತ ನಂತರವೇ ಉಳಿದ 46 ಹಳ್ಳಿಗಳಲ್ಲೂ ಜಿಐಎಸ್ ಸಮೀಕ್ಷೆ ನಡೆಸಲಿದೆ ಎಂಬುದು ಹುಡಾ ಹೇಳಿಕೆ.
ಕಾಲ ಕಾಲಕ್ಕೆ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆ ಮಾಡಬೇಕಾಗುತ್ತದೆ. 2019ರಲ್ಲಿ ಕ್ಯಾಡ್ ತಂತ್ರಜ್ಞಾನ ಅಳವಡಿಸಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿತ್ತು. ಇದೀಗ ಜಿಐಎಸ್ ಸಮೀಕ್ಷೆ ಮೂಲಕ ಅದನ್ನು ರಿವೈಸ್ ಮಾಡಲಾಗುತ್ತಿದೆ. ಸರ್ಕಾರದ ಅನುಮೋದನೆ ಬಳಿಕವೇ ಹೊಸದಾಗಿ ಸೇರ್ಪಡೆಯಾಗಲಿರುವ ಹಳ್ಳಿಗಳ ಜಿಐಎಸ್ ಸಮೀಕ್ಷೆ ನಂತರ ಮಾಡಲಾಗುತ್ತದೆ ಎಂದು ಹುಡಾ ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ ಹೇಳಿದರು.ನಗರ ವ್ಯವಸ್ಥಿತವಾಗಿ ಬೆಳೆಯಬೇಕೆಂದರೆ ಮಾಸ್ಟರ್ ಪ್ಲ್ಯಾನ್ ಅತ್ಯಗತ್ಯ. ಇದೀಗ ಜಿಐಎಸ್ ತಂತ್ರಜ್ಞಾನದ ಅನುಗುಣವಾಗಿ ಮಾಸ್ಟರ್ ಪ್ಲ್ಯಾನ್ ಪರಿಷ್ಕೃತಗೊಳಿಸುವ ಕಾರ್ಯ ನಡೆದಿದೆ. ಜಿಐಎಸ್ ಸಮೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ಇನ್ನೊಂದು ತಿಂಗಳಲ್ಲಿ ಮಾಸ್ಟರ್ ಪ್ಲ್ಯಾನ್ ರಿವೈಸ್ ಆಗುವ ಸಾಧ್ಯತೆ ಇದೆ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಹೇಳಿದರು.