ಹುಬ್ಬಳ್ಳಿ- ಅಂಕೋಲಾ: ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ ಸಭೆ

| Published : Jul 09 2025, 12:19 AM IST

ಹುಬ್ಬಳ್ಳಿ- ಅಂಕೋಲಾ: ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯ ಜಾರಿಗೆ ಅಡ್ಡಿಯಾಗಿರುವ ತೊಡಕುಗಳು ಮತ್ತು ಸಾಧ್ಯತೆಗಳ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆಸಲಾಯಿತು. ಯೋಜನೆ ಜಾರಿಯಾಗಬೇಕೆಂದರೆ ಏನು ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಯಿತು.

ಹುಬ್ಬಳ್ಳಿ: ಬಹುವರ್ಷದ ಬೇಡಿಕೆಯಾಗಿರುವ, ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ ಕೊಂಡಿಯಾಗುವ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗಾಗಿ ಶೀಘ್ರದಲ್ಲೇ ಹುಬ್ಬಳ್ಳಿಯಲ್ಲೇ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲೇ ಸಭೆ ನಡೆಯಲಿದೆ.

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಂಗಳವಾರ ಹುಬ್ಬಳ್ಳಿ, ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆ ನಡೆಸಿ ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯ ಜಾರಿಗೆ ಅಡ್ಡಿಯಾಗಿರುವ ತೊಡಕುಗಳು ಮತ್ತು ಸಾಧ್ಯತೆಗಳ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆಸಲಾಯಿತು. ಯೋಜನೆ ಜಾರಿಯಾಗಬೇಕೆಂದರೆ ಏನು ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಯಿತು.

ಸಭೆ ನಡೆಸುವ ಮುನ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಯೋಜನೆಯ ವ್ಯಾಪ್ತಿಗೆ ಬರುವ ಸಂಸದರನ್ನು ಭೇಟಿ ಮಾಡಿವುದು, ಚರ್ಚೆ ನಡೆಸುವುದು, ಅದರ ಬಳಿಕ ಹುಬ್ಬಳ್ಳಿಯಲ್ಲಿ ರೈಲ್ವೆ ಮಂತ್ರಿ ಸೋಮಣ್ಣ ನೇತೃತ್ವದಲ್ಲಿ ಸಭೆ ನಡೆಸಿ ಕೇಂದ್ರ- ರಾಜ್ಯ ಸರ್ಕಾರಕ್ಕೆ ಯೋಜನೆಯ ತ್ವರಿತ ಜಾರಿಯ ಕುರಿತಾಗಿ ಮನವರಿಕೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತು ರೈಲ್ವೆ ಯೋಜನೆಯ ಹೋರಾಟಗಾರ ವಸಂತ ಲದವಾ ಮಾತನಾಡಿ, ಯೋಜನೆಯ ಜಾರಿಗೆ ಹಿಂದಿನಿಂದಲೂ ನಡೆದ ಪ್ರಯತ್ನ ಮತ್ತು ಎದುರಾದ ಅಡೆತಡೆಯನ್ನು ವಿಸ್ತೃತವಾಗಿ ವಿವರಿಸಿದರು. ಸರ್ಕಾರದ ಮೇಲೆ ಪಕ್ಷಾತೀತವಾಗಿ ಪ್ರಬಲ ಒತ್ತಡ ಹೇರಿದರೆ ಯೋಜನೆ ಜಾರಿ ಮಾಡಬಹುದು. ಹೀಗಾಗಿ ಸಂಘಟಿತ ಹೋರಾಟ ನಡೆಯುವುದು ಅಗತ್ಯ ಹಾಗೂ ಅನಿವಾರ್ಯ ಎಂದರು.

ರೈಲ್ವೆ ಬಳಕೆದಾರರ ವಲಯ ಸಮಿತಿಯ ಸದಸ್ಯ ಮಹೇಂದ್ರ ಸಿಂಘಿ ಮಾತನಾಡಿ, ನಮ್ಮ ನಿಯೋಗದ ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕರನ್ನು ಭೇಟಿಯಾಗಿ ಚರ್ಚೆ ಮಾಡೋಣ. ನಂತರದಲ್ಲಿ ಮುಂದಿನ ಪ್ರಯತ್ನದ ಕಾರ್ಯಸೂಚಿ ರೂಪಿಸೋಣ ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಅಭಿವೃದ್ದಿ ದೃಷ್ಟಿಯಿಂದ ತೀರಾ ಹಿಂದುಳಿದಿದ್ದು, ಒಳ್ಳೆಯ ಯೋಜನೆಗಳಿಗೆ ಅನಗತ್ಯವಾಗಿ ತಡೆ ಹಾಕುವ ಪ್ರಯತ್ನ ನಡೆದಿದೆ. ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿ ಈ ಭಾಗದ ಅಭಿವೃದ್ದಿಗೆ ತೀರಾ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ- ಹುಬ್ಬಳ್ಳಿ ಭಾಗದ ಪ್ರಮುಖರು ಮತ್ತೊಮ್ಮೆ ಸಂಘಟಿತ ಪ್ರಯತ್ನ ನಡೆಸೋಣ ಎಂದರು.

ಉ.ಕ ಜಿಲ್ಲಾ ನಾಗರಿಕ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ನ್ಯಾಯಾಲಯದಿಂದ ಯೋಜನೆಗೆ ಇರುವ ತಡೆ ನಿವಾರಣೆ ಆಗಿರುವುದರಿಂದ ಯೋಜನೆ ಜಾರಿಗೆ ಸರ್ಕಾರದ ಮಟ್ಟದಲ್ಲಿ ಇಚ್ಛಾಶಕ್ತಿ ಪ್ರಕಟವಾಗಬೇಕಿದೆ ಎಂದರು.

ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಸಿದ್ರಾಮಯ್ಯ ಸಂಶಿಮಠ, ಕಾರ್ಯದರ್ಶಿ ರವೀಂದ್ರ ಬಳಿಗಾರ ಹೋರಾಟಕ್ಕೆ ಸಂಸ್ಥೆಯಿಂದ ಎಲ್ಲ ರೀತಿಯ ಸಹಕಾರದ ಭರವಸೆ ನೀಡಿದರು.

ಉ.ಕ ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಉಪಾಧ್ಯಕ್ಷ ವೆಂಟು ಮಾಸ್ತರ ಶೀಳ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಪ್ರಮುಖರಾದ ಡಾ. ಮಹೇಶ ಗೋಳಿಕಟ್ಟೆ, ಪ್ರೀತಂ ಮಾಸೂರಕರ್ , ರವಿ ಟಿ.ನಾಯ್ಕ, ರಾಜಗೋಪಾಲ ಅಡಿ, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಕಾರ್ಯದರ್ಶಿ ವಿಠ್ಠಲದಾಸ ಕಾಮತ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ಯೋಜನೆಗೆ ಅಡ್ಡಿಯಾಗದು: ನ್ಯಾಯವಾದಿ ಕೊಲ್ಲೆ

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಗೆ ಇರುವ ಕಾನೂನು ತೊಡಕು ಬಹುತೇಕ ಮುಗಿದಿದೆ. ನ್ಯಾಯಾಲಯ ಈಗಾಗಲೇ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಗುಂಟ ಕಡಿಮೆ ಪರಿಸರಕ್ಕೆ ಹಾನಿಯಾಗುವಂತೆ ಮತ್ತೊಮ್ಮೆ ಸರ್ವೇ ನಡೆಸಿ ವರದಿ ಸಿದ್ಧಪಡಿಸಲು ಸೂಚಿಸಿದೆ. ಈ ವರದಿಗೆ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಸಂರಕ್ಷಣಾ ಮಂಡಳಿಯಿಂದ ಒಪ್ಪಿಗೆ ಸಿಕ್ಕಲ್ಲಿ ಯೋಜನೆ ಜಾರಿಯಾಗಲು ಯಾವುದೇ ಸಮಸ್ಯೆ ಆಗಲ್ಲ. ಕೇಂದ್ರ - ರಾಜ್ಯ ಸರ್ಕಾರಗಳು ಯೋಜನಾಪರ ಇರುವ ಕಾರಣ ತೊಂದರೆಯಾಗದು ಎಂದು ಯೋಜನೆಯ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ನ್ಯಾಯವಾದಿ ಅಕ್ಷಯ ಕೊಲ್ಲೆ ಮಾಹಿತಿ ನೀಡಿದರು.