ರೈಲ್ವೆಯ ಬಹುತೇಕ ರೈಲು ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದ್ದು, ಕೊಂಕಣ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಸೋಮಣ್ಣ ಹೇಳಿದರು.
ಕಾರವಾರ: ಹುಬ್ಬಳ್ಳಿ- ಅಂಕೋಲಾ ನಡುವಿನ 164 ಕಿಮೀ ಉದ್ದದ ನೂತನ ಯೋಜನೆಯನ್ನು ₹16,500 ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಈಗಾಗಲೇ ಸರ್ವೇ, ಡಿಪಿಆರ್, ಫಾರೆಸ್ಟ್ ಕ್ಲಿಯರೆನ್ಸ್ ಕೂಡ ಮುಕ್ತಾಯಗೊಂಡಿದ್ದು, ವನ್ಯಜೀವಿ ಮಂಡಳಿಯ ಪರವಾನಗಿ ಬಾಕಿ ಇದೆ. ಇನ್ನು 6 ತಿಂಗಳಿನೊಳಗೆ ಇದಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಈ ಯೋಜನೆಯಿಂದ ಪಶ್ಚಿಮ ಘಟ್ಟಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ ಎಂದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಇಲಾಖೆ ವತಿಯಿಂದ ಸುಮಾರು ₹21 ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳು ವಿವಿಧ ಹಂತದಲ್ಲಿ ನಡೆಯುತ್ತಿವೆ. ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಗೋಕರ್ಣ ಮತ್ತು ಹೊನ್ನಾವರ ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾಮಗಾರಿ ಪ್ರಾರಂಭವಾಗಿದೆ ಎಂದರು.ಕೊಂಕಣ ರೈಲ್ವೆಯ ವಿಲೀನ ಪ್ರಕ್ರಿಯೆ ಚರ್ಚೆಯ ಹಂತದಲ್ಲಿದ್ದು, ಅವುಗಳ ಆಗುಹೋಗಗಳ ಬಗ್ಗೆ ಚರ್ಚಿಸಲಾಗುತ್ತಿದೆ. ರೈಲ್ವೆಯ ಬಹುತೇಕ ರೈಲು ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದ್ದು, ಕೊಂಕಣ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ. ದಾಂಡೇಲಿಯ ಅಂಬೇವಾಡಿಗೆ ಮುಂದಿನ ತಿಂಗಳಿನಿಂದ ರೈಲ್ವೆ ಸಂಚಾರ ಪ್ರಾರಂಭಿಸಲಾಗುವುದು ಎಂದರು.
ಪ್ರಾದೇಶಿಕ ರೈಲ್ವೆ ಮೆನೇಜರ್ ಆಶಾ ಶೆಟ್ಟಿ, ಮುಖ್ಯ ಎಂಜಿನಿಯರ್ ಪ್ರಕಾಶ್, ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಡಿ. ಭಟ್, ಹಿರಿಯ ಎಂಜಿನಿಯರ್ ಉದಯ ಭಾಸ್ಕರ್, ,ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಹಿರಿಯ ಪ್ರಾದೇಶಿಕ ಆರ್ಥಿಕ ಸಲಹೆಗಾರ ಪ್ರದೀಪ್ ಬಾಳಿಗ ಮತ್ತಿತರರು ಇದ್ದರು.