ಹುಬ್ಬಳ್ಳಿ- ಅಂಕೋಲಾ: ರೈಲು ಮಾರ್ಗಕ್ಕೆ ಕಾಲ ಸನ್ನಿಹಿತ

| Published : Jul 30 2025, 12:46 AM IST

ಹುಬ್ಬಳ್ಳಿ- ಅಂಕೋಲಾ: ರೈಲು ಮಾರ್ಗಕ್ಕೆ ಕಾಲ ಸನ್ನಿಹಿತ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ- ಅಂಕೋಲಾ ಹೆಸರು ಹೇಳುತ್ತಿದ್ದಂತೆ ಥಟ್ಟನೆ ನೆನಪಾಗುವುದು ಹೋರಾಟ. ಹುಬ್ಬಳ್ಳಿ- ಅಂಕೋಲಾ ಮಧ್ಯೆ ರೈಲು ಮಾರ್ಗವಾಗಬೇಕೆಂಬ ಬೇಡಿಕೆ ಬರೋಬ್ಬರಿ ಎರಡುವರೆ ದಶಕದ್ದು. ಸುದೀರ್ಘ ಹೋರಾಟದ ನಡುವೆಯೇ ಈ ರೈಲು ಮಾರ್ಗದ ಬಗ್ಗೆ ರಾಜ್ಯಸಭೆ ಅಧಿವೇಶನದಲ್ಲಿ ಈ ಕುರಿತು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುವಾಗ ಕೇಂದ್ರ ರೈಲ್ವೆ ಸಚಿವರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ಯೋಜನೆಗೆ ಹಸಿರು ನಿಶಾನೆ ದೊರೆಯುವ ಕಾಲ ಸನ್ನಿಹಿತವಾದಂತಾಗಿದೆ. ಹಾಗಾದರೆ ಈ ಯೋಜನೆ ಏನು?, ಏಕಿಷ್ಟು ಪರಿಸರವಾದಿಗಳ ವಿರೋಧ?, ಪರಿಸರವಾದಿಗಳು ಹೇಳುವಂತೆ ಅರಣ್ಯ ನಾಶವಾಗುತ್ತದೆಯೇ?, ಎಷ್ಟು ಪ್ರಮಾಣದ ಅರಣ್ಯ ನಾಶವಾಗುತ್ತದೆ?, ಈ ಯೋಜನೆಯಿಂದ ಏನೆಲ್ಲ ಉಪಯೋಗ? ಎಂಬುದರ ಕುರಿತು ''ಕನ್ನಡಪ್ರಭ''ದ ಸರಣಿ ಇಂದಿನಿಂದ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಬಯಲು ಸೀಮೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ, ವಾಣಿಜ್ಯೀಕರಣಕ್ಕೆ ಉತ್ತೇಜನ ನೀಡುವ ಬಹುದಶಕದ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಸಂಬಂಧಪಟ್ಟಂತೆ ನಿತ್ಯ ನಿರಂತರ ಹೋರಾಟ ನಡೆಯುತ್ತಲೇ ಇದೆ. ಒಂದೆಡೆ ಪರಿಸರವಾದಿಗಳು ಇದಕ್ಕೆ ವಿರೋಧಿಸಿದರೆ, ರೈಲು ಮಾರ್ಗದಿಂದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂಬುದು ಹೋರಾಟಗಾರರದ್ದು.

ಇವೆಲ್ಲವುಗಳ ಮಧ್ಯೆ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಯೋಜನೆಗೆ ಸಂಬಂಧಪಟ್ಟಂತೆ ಕೇಂದ್ರ ಮಂಜೂರಾತಿ ನೀಡಿದೆನ್ನಲಾದ ಹೇಳಿಕೆ ಅತ್ತ ಉತ್ತರ ಕನ್ನಡ ಇತ್ತ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಂಚಲನ ಮೂಡಿಸಿದೆ. ಅಬ್ಬಾ ಕೊನೆಗೂ ಮಂಜೂರಾತಿ ದೊರೆಯುವ ಕಾಲ ಸನ್ನಿಹಿತವಾಯಿತಲ್ಲ ಎಂದು ಹೋರಾಟಗಾರರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಏನದು ಹೋರಾಟ?: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದಿಂದ ಸಾಕಷ್ಟು ಅನುಕೂಲಗಳಿವೆ. ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದಂತಾಗಿದೆ. ಪ್ರಾದೇಶಿಕ ಅಸಮಾನತೆ ದೂರವಾಗುತ್ತದೆ. ಉದ್ಯೋಗ ಅವಕಾಶಗಳು ಹೆಚ್ಚಾಗುತ್ತವೆ. ಇದು ಸತ್ಯ ಕೂಡ. ಇಲ್ಲಿನ ಜನರ ಬೇಡಿಕೆಗಳಿಗೆ ಮನ್ನಣೆ ನೀಡಿ 1999ರಲ್ಲೇ ಅಂದಿನ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು. ಆಗ ಯೋಜನೆಯ ವೆಚ್ಚ ₹494 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ, ಈ ಯೋಜನೆಯಿಂದ ಅರಣ್ಯನಾಶವಾಗುತ್ತದೆ. ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದ ಈ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ತೊಂದರೆಯಾಗಲಿದೆ ಎಂಬುದು ಪರಿಸರವಾದಿಗಳು ವಾದಿಸುತ್ತಲೇ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ವನ್ಯಜೀವಿ ಮಂಡಳಿಯ ತಂಡ 2025ರ ಜನವರಿಯಲ್ಲಿ ಖುದ್ದು ಸಮೀಕ್ಷೆ ನಡೆಸಿ ಪ್ರಾಣಿಗಳ ಸಂಚಾರ, ಸಸ್ಯ ಸಂಕುಲ ಹಾಗೂ ಅಳಿವಿನ ಅಂಚಿನಲ್ಲಿರುವ ಈ ಪ್ರದೇಶದ ಸಸ್ಯ ಪ್ರಭೇದಗಳ ಮಾಹಿತಿಯನ್ನೂ ಕಲೆಹಾಕಿ ವರದಿ ಸಲ್ಲಿಸಿದ್ದು ಆಗಿದೆ.

ಡಿಪಿಆರ್‌ ಸಲ್ಲಿಕೆ: ವನ್ಯಜೀವಿ ಮಂಡಳಿ ಬಂದು ಸಮೀಕ್ಷೆ ನಡೆಸಿಕೊಂಡು ಹೋದ ಬಳಿಕ ನೈರುತ್ಯ ರೈಲ್ವೆ ವಲಯವೂ ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ 2025ರ ಫೆಬ್ರವರಿಯಲ್ಲಿ ರೈಲ್ವೆ ಅಭಿವೃದ್ಧಿ ಮಂಡಳಿಗೆ ಸಲ್ಲಿಸಿದ್ದು ಆಗಿದೆ. ಬರೋಬ್ಬರಿ ₹ 17141 ಕೋಟಿ ವೆಚ್ಚದ ಯೋಜನೆಯೆಂದು ಅಂದಾಜಿಸಲಾಗಿದೆ.

ಎಷ್ಟು ಕಿಮೀ?: ಈಗಿರುವ ರಾಷ್ಟ್ರೀಯ ಹೆದ್ದಾರಿ 263 ಪಕ್ಕದಲ್ಲೇ ಜೋಡಿ ಮಾರ್ಗ ನಿರ್ಮಾಣ ಮಾಡುವುದಾಗಿ ಡಿಪಿಆರ್‌ನಲ್ಲಿ ಹೇಳಿಕೊಳ್ಳಲಾಗಿದೆ. 163 ಕಿ.ಮೀ ಅಂತರದ ಈ ಮಾರ್ಗದಲ್ಲಿ 97 ಕಿ.ಮೀ ಮಾರ್ಗವು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ. ಇದರಲ್ಲಿ ಅರಣ್ಯ ಪ್ರದೇಶದಲ್ಲಿ ಬಾರದ 47 ಕಿಮೀ ವ್ಯಾಪ್ತಿಯಲ್ಲಿ ಹುಬ್ಬಳ್ಳಿ- ಕಿರುವತ್ತಿ ಮಧ್ಯೆ ರೈಲು ಮಾರ್ಗ ಈಗಾಗಲೇ ಪೂರ್ಣಗೊಂಡಿದ್ದು ಆಗಿದೆ. ಈಗ ಉಳಿದೆಡೆ ಯೋಜನೆ ಕೈಗೆತ್ತಿಕೊಳ್ಳಲು ಅನುಮೋದನೆ ಸಿಗಬೇಕಿದೆ.

ಇದೀಗ ರೈಲ್ವೆ ಖಾತೆ ಸಚಿವರಾದ ಅಶ್ವಿನಿ ವೈಷ್ಣವ ಅವರೇ ರಾಜ್ಯಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವುದರಿಂದ ಇದು ಇಲ್ಲಿನ ಹೋರಾಟಗಾರರಲ್ಲಿ ಸಂತಸವನ್ನುಂಟು ಮಾಡಿದೆ. ಒಟ್ಟಿನಲ್ಲಿ ಕೊನೆಗೂ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಗುವ ಕಾಲ ಸನ್ನಿಹಿತವಾದಂತಾಗಿದೆ ಎಂದು ಹೋರಾಟಗಾರರು ಹರ್ಷ ವ್ಯಕ್ತಪಡಿಸುತ್ತಿರುವುದಂತೂ ಸತ್ಯ.