ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಹುಬ್ಬಳ್ಳಿಯ ಚಿಟಗುಪ್ಪಿ ಪಾರ್ಕ್ ಕಾಲನಿ ಚಿಣ್ಣರು ಭಾನುವಾರಕ್ಕೊಮ್ಮೆ ಶ್ರಮದಾನದ ಮೂಲಕ ಮಾಡುತ್ತಿರುವ ಸ್ವಚ್ಛತಾಕಾರ್ಯ ಮಾದರಿಯಾಗಿದೆ.ಭಾನುವಾರವಾದರೆ ಸಾಕು ಬೆಳ್ಳಂಬೆಳಗ್ಗೆ ಕೆಲ ಚಿಣ್ಣರು ಪೊರಕೆ ಹಿಡಿದು ರಸ್ತೆಯಲ್ಲಿ ಕಸ ಹೊಡೆಯುತ್ತಿದ್ದರೆ, ಹಿಂದೆ ಕೆಲವು ಮಕ್ಕಳು ಕೈಯಲ್ಲಿ ಗ್ಲೌಸ್ ಹಾಕಿಕೊಂಡು ಕಸದಬುಟ್ಟಿ ಹಿಡಿದು ರಸ್ತೆಯಲ್ಲಿನ ಕಸ ಸಂಗ್ರಹಿಸುತ್ತಿರುವುದು ಕಾಣಸಿಗುತ್ತದೆ.
ಪುಟ್ಟ ಪುಟ್ಟ ಪೋರರು ಕಾಲನಿಯಲ್ಲಿನ ಮನೆ ಮನೆಗೆ ಸಂಚರಿಸಿ ಕಸವಿದ್ದರೆ ಹಾಕಿ ಎನ್ನುತ್ತ, ಕಾಲನಿಯ ಸಂಪೂರ್ಣ ರಸ್ತೆಯನ್ನು ಶುಚಿಗೊಳಿಸುತ್ತಾರೆ. ಮಕ್ಕಳ ಈ ಕಾರ್ಯಕ್ಕೆ ಪರಿಸರಪ್ರಿಯರು, ಕಾಲನಿಯ ನಿವಾಸಿಗಳು ಕೈಜೋಡಿಸಿದ್ದಾರೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯಿಂದ ಪ್ರೇರಣೆಗೊಂಡ ಚಿಣ್ಣರು ತಮ್ಮ ಕಾಲನಿಯಿಂದಲೇ ಸ್ವಚ್ಛತೆಯೆಡೆಗೆ ಒಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಅದಕ್ಕಾಗಿ ಪ್ರತಿ ಭಾನುವಾರ ಕಾಲನಿಯಲ್ಲಿರುವ ಚಿಣ್ಣರೆಲ್ಲರೂ ಸೇರಿ ಬೆಳಗಿನ ಜಾವ 2 ಗಂಟೆಗಳ ಕಾಲ ಕಾಲನಿಯಲ್ಲಿರುವ ಪಾರ್ಕ್, ರಸ್ತೆಗಳನ್ನು ಸ್ವಚ್ಛಗೊಳಿಸುವ ಶ್ರಮದಾನಕ್ಕೆ ಮುಂದಾಗಿದ್ದಾರೆ.
6 ವಾರಗಳಿಂದ ಶ್ರಮದಾನ"ನಮ್ಮ ಕಾಲನಿ ಸ್ವಚ್ಛ ಕಾಲನಿ " ಕಲ್ಪನೆಯಡಿ ಕಳೆದ ಆರು ವಾರಗಳಿಂದ ಕಾಲನಿಯ ಮಕ್ಕಳು ಈ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಈ ಕುರಿತು ಈಗಾಗಲೇ ಕಾಲನಿಯಲ್ಲಿರುವ ಪ್ರತಿಯೊಂದು ಮನೆಗೂ ತೆರಳಿ ಕರಪತ್ರ ಹಂಚಿ ತಮ್ಮ ಈ ಶ್ರಮದಾನಕ್ಕೆ ಕೈಜೋಡಿಸುವಂತೆ ಮನವಿ ಕೂಡ ಮಾಡಿದ್ದಾರೆ. ಜತೆಗೆ ಮನೆಯಲ್ಲಿರುವ ಅನುಪಯುಕ್ತ ವಸ್ತುಗಳು, ಪ್ಲಾಸ್ಟಿಕ್ ತ್ಯಾಜ್ಯ, ಬಾಟಲ್‌ಗಳು, ರಟ್ಟಿನ ಪೆಟ್ಟಿಗೆಗಳು, ಬಳಸಿದ ಡೈಪರ್, ಗುಟ್ಕಾ, ಪಾನಮಸಾಲ, ತಿನಿಸುಗಳ ರ್‍ಯಾಪರ್‌ಗಳನ್ನು ಎಲ್ಲೆಂದರಲ್ಲಿ ಚೆಲ್ಲದೇ ಶೇಖರಿಸಿಡಿ ನಾವು ಸಂಗ್ರಹಿಸುತ್ತೇವೆ ಎನ್ನುತ್ತಾರೆ. ಎಲ್ಲರೂ ತಮ್ಮ ಮನೆಯ ಮುಂಭಾಗ, ಅಪಾರ್ಟ್‌ಮೆಂಟ್ ಆವರಣ, ಆಸ್ಪತ್ರೆಯೆದುರು ಕಸ ಬೀಳದಂತೆ ಎಚ್ಚರ ವಹಿಸಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರತಿವಾರ ಬೆಳಗ್ಗೆ ಎದ್ದಕೂಡಲೇ ಕಾಲನಿಯ ಮುಂಭಾಗದಲ್ಲಿ ಕೈಗೆ ಗ್ಲೌಸ್ ಹಾಕಿಕೊಂಡು, ಪೊರಕೆ, ಕಸದಬುಟ್ಟಿ ಹಿಡಿದು ಸೇರುವ ಇವರು ಮೊದಲು ಮನೆಮನೆಗೆ ತೆರಳಿ ಕಸ ಸಂಗ್ರಹಿಸುತ್ತಾರೆ. ಬಳಿಕ ಕಾಲನಿಯಲ್ಲಿರುವ ರಸ್ತೆಗಳಲ್ಲಿನ ಕಸಗೂಡಿಸಿ ಒಂದೆಡೆ ಸಂಗ್ರಹಿಸುತ್ತಾರೆ. ಬಳಿಕ ಪಾಲಿಕೆಯ ಪೌರಕಾರ್ಮಿಕರಿಗೆ ಕರೆ ಮಾಡಿ ಸೇರಿರುವ ಕಸದ ವಿಲೇವಾರಿ ಮಾಡುತ್ತಾರೆ.ಪ್ರೋತ್ಸಾಹ
ಈ ಚಿಟಗುಪ್ಪಿ ಪಾರ್ಕ್ ಕಾಲನಿಯ ಚಿಣ್ಣರ ಕಾರ್ಯಕ್ಕೆ ಪಾಲಿಕೆ ಸದಸ್ಯರು, ಸ್ಥಳಿಯರು ಕೈಜೋಡಿಸಿದ್ದು, ಶ್ರಮದಾನಕ್ಕೆ ಬೇಕಾಗುವ ಪೊರಕೆ, ಗ್ಲೌಸ್, ಕಸದಬುಟ್ಟಿ ಜತೆಗೆ "ನಮ್ಮ ಕಾಲನಿ ಸ್ವಚ್ಛ ಕಾಲನಿ " ಸ್ಲೋಗನ್ ಹೊಂದಿದ ಟೀ ಶರ್ಟ್ ನೀಡಿದ್ದಾರೆ.ಯಾರೆಲ್ಲ ಚಿಣ್ಣರಿದ್ದಾರೆ?ಈ ಸ್ವಚ್ಛತಾ ಕಾರ್ಯದಲ್ಲಿ ಚಿಟಗುಪ್ಪಿ ಪಾರ್ಕ್ ಕಾಲನಿಯ 6ರಿಂದ 15 ವರ್ಷದೊಳಗಿನ ಮಕ್ಕಳು ಎಂಬುದು ವಿಶೇಷ. ಕಾಲನಿಯ ಮಕ್ಕಳಾದ ಪೃಥ್ವಿ ಕೋತಂಬ್ರಿ, ವಿಹಾನ್ ನೂಲ್ವಿ, ಪ್ರತೀಕ ತಾಳಿಪಟ್ಟಿ, ಪ್ರಭಾಸ್ ತಾಳಿಪಟ್ಟಿ, ವೈಭವ ತಾಳಿಪಟ್ಟಿ, ಶ್ರೇಯಸ್, ಪ್ರೀತಮ್, ಆರವ್ ಹಿರೇಮಠ, ಸ್ವಯಂ ಹಿರೇಮಠ, ಅಕ್ಷಯ ಶೆಟ್ಟಿ, ಸಂಪ್ರಿತ್ ಶೆಟ್ಟಿ, ನಕ್ಷ ಖೋಡೆ ಸೇರಿದಂತೆ ಹಲವು ಮಕ್ಕಳು ಈ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಕಾಲನಿಯಲ್ಲಿ ಅಲ್ಲಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದರು. ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಸ್ನೇಹಿತರೆಲ್ಲರೂ ಸೇರಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ನಿರ್ಧರಿಸಿದೆವು. ಈ ಕಾರ್ಯಕ್ಕೆ ಪಾಲಕರು, ನಿವಾಸಿಗಳೆಲ್ಲ ಕೈಜೋಡಿಸಿದ್ದಾರೆ. ಸ್ವಚ್ಛತೆಯಿಂದ ಕೂಡಿರುವ ನಮ್ಮ ಕಾಲನಿ ನೋಡಿದರೆ ಸಂತಸವಾಗುತ್ತದೆ ಎನ್ನುತ್ತಾರೆ ಶ್ರಮದಾನ ಮಾಡುವ ಚಿಣ್ಣರಾದ ಪ್ರತೀಕ ತಾಳಿಪಟ್ಟಿ, ವಿಹಾನ್ ನೂಲ್ವಿ.)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))