ಹುಬ್ಬಳ್ಳಿ:

ಹೆಸರಿಗಷ್ಟೇ ಪ್ರತ್ಯೇಕ ತಾಲೂಕು. ಇರುವುದೆಲ್ಲವೂ ಒಂದೇ ಕಟ್ಟಡದಲ್ಲೇ. ಬಹುತೇಕ ಎಲ್ಲ ಅಧಿಕಾರಿ ವರ್ಗವೂ ಒಂದೇ.

ಇದು ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ನಗರ ತಾಲೂಕುಗಳ ಪರಿಸ್ಥಿತಿ. ತಹಸೀಲ್ದಾರ್‌ರಷ್ಟೇ ಬೇರೆ ಬೇರೆ. ಉಳಿದಂತೆ ಉಳಿದ ಎಲ್ಲ ಇಲಾಖೆಗಳ ಅಧಿಕಾರಿ ವರ್ಗ ಮಾತ್ರ ಒಂದೇ. ಕಟ್ಟಡ ಕೂಡ ಪ್ರತ್ಯೇಕವಾಗಿಲ್ಲ. ಎರಡು ತಾಲೂಕುಗಳ ಕೆಲಸವೆಲ್ಲ ಒಂದೇ ಕಟ್ಟಡದಲ್ಲೇ. ಆ ಕಟ್ಟಡವಾದರೂ ಸ್ವಚ್ಛ, ಶುಚಿಯಾಗಿ ಇದೆಯಾ ಎಂದರೆ ಅದು ಇಲ್ಲ..! 2018ರಲ್ಲಿ ಆಡಳಿತ ವ್ಯವಸ್ಥೆಗೆ ಅನುಕೂಲವಾಗಲೆಂಬ ಉದ್ದೇಶದಿಂದ ಹುಬ್ಬಳ್ಳಿ ಅಷ್ಟೇ ಇದ್ದಂತಹ ತಾಲೂಕನ್ನು ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ನಗರ ಎಂದು ಪ್ರತ್ಯೇಕ ತಾಲೂಕುಗಳನ್ನು ಸರ್ಕಾರ ಘೋಷಿಸಿತು. ಆದರೆ, ಮಿನಿವಿಧಾನಸೌಧ ಕಟ್ಟಡದಲ್ಲೇ ನಗರ ತಹಸೀಲ್ದಾರ್‌ಗೆ ಒಂದು ಪ್ರತ್ಯೇಕ ಕೊಠಡಿ ನೀಡಿ ತಹಸೀಲ್ದಾರ್‌ ಕಚೇರಿ ಎಂದು ಬೋರ್ಡ್‌ ಹಾಕಿದೆ. ಅದೇ ಕಟ್ಟಡದಲ್ಲೇ ಹುಬ್ಬಳ್ಳಿ ತಹಸೀಲ್ದಾರ್‌ ಕಚೇರಿಯೂ ಇದೆ.

ಹುಬ್ಬಳ್ಳಿ ತಹಸೀಲ್‌ ವ್ಯಾಪ್ತಿಯಲ್ಲಿ ಸರಿಸುಮಾರು 46 ಹಳ್ಳಿಗಳು ಬರುತ್ತವೆ. ಇದು ಮೊದಲಿನಿಂದಲೂ ಇದ್ದಂತಹ ತಾಲೂಕು. ಅದು ಯಥಾಪ್ರಕಾರ ನಡೆಯುತ್ತಿದೆ. ಆಡು ಭಾಷೆಯಲ್ಲಿ ಇದನ್ನು ಗ್ರಾಮೀಣ ತಹಸೀಲ್ದಾರ್‌ ಎಂದು ಕರೆಯಲಾಗುತ್ತಿದೆ. ಆದರೆ, ಹುಬ್ಬಳ್ಳಿ ತಾಲೂಕು ಎಂಬುದು ನಿಜ ಹೆಸರು

ಹುಬ್ಬಳ್ಳಿ ನಗರ:


ಇನ್ನು ಮೊದಲು ಹುಬ್ಬಳ್ಳಿ ತಾಲೂಕಿನಲ್ಲೇ ಇದ್ದಂತಹ ನಗರ ಪ್ರದೇಶವನ್ನು ಪ್ರತ್ಯೇಕಿಸಿ ಹುಬ್ಬಳ್ಳಿ ನಗರ ತಾಲೂಕು ಎಂದು ಘೋಷಿಸಿತು. ಆದರೆ, ಇದಕ್ಕೆ ಪ್ರತ್ಯೇಕ ಕಟ್ಟಡ ನೀಡಲೇ ಇಲ್ಲ. ಮಿನಿವಿಧಾನಸೌಧದಲ್ಲೇ ಒಂದು ಕೊಠಡಿಯಲ್ಲಿ ತಹಸೀಲ್ದಾರ್‌ ಕಚೇರಿ ನೀಡಲಾಯಿತು. ಕೃಷಿ ಇಲಾಖೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳೇನೋ ಇವೆ. ಆದರೆ, ಅವುಗಳಿಗೆಲ್ಲ ಪ್ರತ್ಯೇಕ ಅಧಿಕಾರಿಗಳೇ ಇಲ್ಲ. ಯಾವುದೋ ತಾಲೂಕಿನೊಂದಿಗೆ ಹೆಚ್ಚುವರಿ ಕೆಲಸವಾಗಿ ಇಲ್ಲಿನ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಅಧಿಕಾರಿಗಳು ಸರಿಯಾಗಿ ಸಿಗುವುದಿಲ್ಲ. ತಹಸೀಲ್ದಾರರು ಮಾತ್ರ ಲಭ್ಯವಾಗುತ್ತಾರೆ.

ಇನ್ನು ಮಹಾನಗರ ಪಾಲಿಕೆ ಇಲ್ಲೇ ಇರುವುದರಿಂದ ಆಶ್ರಯ ಮನೆ ವಿತರಣೆ ಸೇರಿದಂತೆ ಬಹುತೇಕ ಎಲ್ಲ ಜವಾಬ್ದಾರಿಗಳನ್ನು ಪಾಲಿಕೆಯೇ ನಿರ್ವಹಿಸುತ್ತದೆ. ಹೀಗಾಗಿ ತಾಲೂಕಾಡಳಿತಕ್ಕೆ ಹೆಚ್ಚಿನ ಕೆಲಸವಿರಲಿಲ್ಲ. ಇನ್ನು ನಗರ ಪ್ರದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್‌ ಆಯುಕ್ತಾಲಯ ಇರುವುದರಿಂದ ಇಲ್ಲೂ ಕೂಡ ತಹಸೀಲ್ದಾರ್‌ರಿಗೆ ಈ ಜವಾಬ್ದಾರಿಯೂ ಇಲ್ಲ. ಹೀಗಾಗಿ ನಗರ ತಹಸೀಲ್ದಾರ್‌ಗೆ ಹೆಚ್ಚಿನ ಜವಾಬ್ದಾರಿಯೂ ಇಲ್ಲ. ಹೆಚ್ಚಿನ ಅಧಿಕಾರವೂ ಇಲ್ಲ.

ಪ್ರತ್ಯೇಕ ಕಟ್ಟಡ ನೀಡಿ:

ಹುಬ್ಬಳ್ಳಿ ನಗರ ತಾಲೂಕಿಗೆ ಪ್ರತ್ಯೇಕ ಕಟ್ಟಡ ನೀಡಬೇಕು. ಜತೆಗೆ ಎಲ್ಲ ಇಲಾಖೆಗಳ ಕಚೇರಿಗಳನ್ನು ತೆರೆಯಬೇಕು. ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಅಂದಾಗ ನಗರ ತಾಲೂಕು ಪ್ರತ್ಯೇಕ ಮಾಡಿರುವುದು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಆಗ್ರಹ.

ಗಬ್ಬೆದ್ದು ನಾರುತ್ತಿವೆ ಕಟ್ಟಡ:

ಇನ್ನು ಎರಡು ಪ್ರತ್ಯೇಕ ತಾಲೂಕುಗಳ ಕಚೇರಿಗಳನ್ನು ಹೊಂದಿದ್ದರೂ ಮಿನಿವಿಧಾನಸೌಧದಲ್ಲಿ ಮೂಲಸೌಲಭ್ಯಗಳು ಮಾತ್ರ ಇಲ್ಲವೇ ಇಲ್ಲ. ಶೌಚಾಲಯವಂತೂ ಹೇಳುವಂತಿಲ್ಲ. ಯಾವುದೋ ಹಳ್ಳಿಯಲ್ಲಿನ ಬಸ್‌ ನಿಲ್ದಾಣದಲ್ಲಿನ ಶೌಚಾಲಯ ಕೂಡ ಅಷ್ಟೊಂದು ಗಲೀಜು ಇರುವುದಿಲ್ಲ. ಕಟ್ಟಡದಲ್ಲಿ ಎಲ್ಲಿ ನೋಡಿದರೂ ಬರೀ ಎಲೆ ಅಡಕೆ ಹಾಕಿ ಉಗುಳಿರುವುದು, ಗೋಡೆಗಳ ಮೇಲೆ ಗುಟುಕಾ ತಿಂದು ಚಿತ್ರ ಬಿಡಿಸಿರುವ ದೃಶ್ಯಗಳೇ ಕಣ್ಣಿಗೆ ರಾಚುತ್ತವೆ. ಲಿಫ್ಟ್‌ನಲ್ಲೂ ಗುಟುಕಾ ಚೀಟಿ ಕಾಣುತ್ತವೆ. ಇಬ್ಬಿಬ್ಬರು ತಹಸೀಲ್ದಾರ್‌ ಇರುವ ಕಟ್ಟಡದಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಇಡೀ ಕಟ್ಟಡವೇ ಗಬ್ಬೆದ್ದು ನಾರುತ್ತಿದ್ದು, ಇನ್ನಾದರೂ ಸ್ವಚ್ಛತೆಗೆ ಕೊಂಚ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.ನಗರ ತಾಲೂಕು ಎಂದು 2018ರಲ್ಲೇ ಸರ್ಕಾರ ಮಾಡಿದೆ. ಆದರೆ, ತಹಸೀಲ್ದಾರ್‌ ಕಚೇರಿ ಬಿಟ್ಟರೆ ಪ್ರತ್ಯೇಕ ಕಚೇರಿಗಳೇ ಇಲ್ಲ. ಉಳಿದ ಇಲಾಖೆಗಳಿಗೆ ಹೆಚ್ಚುವರಿ ಜವಾಬ್ದಾರಿ ಇರುವ ಅಧಿಕಾರಿಗಳೇ ಇದ್ದಾರೆ. ಹೀಗಾಗಿ ಸಾರ್ವಜನಿಕರ ಕೈಗೆ ಸಿಗುವುದೇ ಇಲ್ಲ. ಇನ್ನೂ ಇಡೀ ಕಟ್ಟಡ ಎನ್ನುವುದು ಗಬ್ಬೆದ್ದು ನಾರುತ್ತಿದೆ.

ಪ್ರಕಾಶ ಪಾಟೀಲ, ಸಾರ್ವಜನಿಕ