ಸಾರಾಂಶ
ಧಾರವಾಡ:
ಹುಬ್ಬಳ್ಳಿ-ಧಾರವಾಡ ಮಧ್ಯೆದ ಬೈಪಾಸ್ ರಸ್ತೆಯನ್ನು ಕಿಲ್ಲರ್ ಬೈಪಾಸ್ ಎಂದೇ ಕರೆಯುತ್ತಿದ್ದು, ಸಾರ್ವಜನಿಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಸ್ತೆ ಅಗಲೀಕರಣ ನಡೆಯುತ್ತಿದೆ. ಆದರೆ, ಮಳೆಯಿಂದಾಗಿ ಹೊಸ ರಸ್ತೆಯೇ ಕುಸಿತ ಕಂಡಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆಯೇ ಅನುಮಾನ ಶುರುವಾಗಿದೆ.ಅವಳಿ ನಗರದ ನಡುವಿನ ಬೈಪಾಸ್ ರಸ್ತೆ 30 ಕಿಮೀ ಉದ್ದ. ಬರೀ ಎರಡು ಪಥಗಳು ಇರುವ ಕಾರಣ ಇಲ್ಲಿ ಸಾಕಷ್ಟು ಅಪಘಾತಗಳಾಗಿ ಕಳೆದ 25 ವರ್ಷಗಳ ಅವಧಿಯಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಕೊನೆಗೂ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಈಗಿರುವ ರಸ್ತೆಯನ್ನು ಆರು ಪಥಗಳ ರಸ್ತೆಯನ್ನಾಗಿ ಮಾಡಲು ಕಳೆದ ವರ್ಷದಿಂದ ಅಗಲೀಕರಣ ಕಾಮಗಾರಿ ಆರಂಭಿಸಿದೆ. ಕಳೆದೊಂದು ವರ್ಷದಿಂದ ನಡೆಯುತ್ತಿರುವ ಕಾಮಗಾರಿ 2026ರಲ್ಲಿ ಮುಕ್ತಾಯವಾಗಲಿದೆ. ಆದರೆ, ಇದೀಗ ಸುರಿದಿರುವ ಸಾಮಾನ್ಯ ಮಳೆಗೆ ಅಲ್ಲಲ್ಲಿ ರಸ್ತೆ ಕುಸಿಯುತ್ತಿದೆ. ಮನಸೂರು-ಯರಿಕೊಪ್ಪ ಗ್ರಾಮಗಳ ನಡುವೆ ಎರಡು ಕಡೆಗಳಲ್ಲಿ ರಸ್ತೆ ಕುಸಿದು ಹೋಗಿದ್ದು, ಆತಂಕವನ್ನು ಸೃಷ್ಟಿಸಿದೆ.
ಈ ಕಾಮಗಾರಿಯ ಗುತ್ತಿಗೆ ಆರ್ ಆ್ಯಂಡ್ ಸಿ ಕಂಪನಿಗೆ ಸಿಕ್ಕಿದೆ. ಕೆಲಸವೂ ವೇಗವಾಗಿ ನಡೆದಿದೆ. ಆದರೆ ಇದೀಗ ಆರಂಭದ ಹಂತದಲ್ಲಿಯೇ ಸಣ್ಣ ಮಳೆಗೆ ಈ ರೀತಿ ರಸ್ತೆ ಕುಸಿದು ಬಿದ್ದರೆ ಮುಂದೆ ಹೇಗೆ ಎನ್ನುವುದು ಸ್ಥಳೀಯರ ಪ್ರಶ್ನೆ. ಅಲ್ಲದೇ ರಸ್ತೆ ಮೇಲೆ ಬಿದ್ದ ನೀರು ಹರಿದು ಹೋಗಲು ನಿರ್ಮಿಸಿರುವ ಚರಂಡಿ ಕೂಡ ಕಿತ್ತು ಹೋಗಿದೆ. ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಸ್ಥಳೀಯರಲ್ಲಿ ಮೂಡಿವೆ. ಜತೆಗೆ ಕಳಪೆ ಕಾಮಗಾರಿ ಹಾಗೂ ಅವೈಜಾನಿಕ ಕಾಮಗಾರಿ ಎಂದು ಸ್ಥಳೀಯರಾದ ಮನಸೂರಿನ ಮಡಿವಾಳಪ್ಪ ಕಲ್ಲೂರ ಆರೋಪಿಸುತ್ತಾರೆ.ಎಲ್ಲೆಲ್ಲಿ ರಸ್ತೆ ಕುಸಿದಿದೆಯೊ ಅಲ್ಲೆಲ್ಲ ಮೊದಲು ನೀರು ಹೋಗುವ ಮಾರ್ಗಗಳಿದ್ದವು. ಅವುಗಳನ್ನು ಬಂದ್ ಮಾಡಿ ಬೇರೆಡೆ ನೀರು ಹರಿದು ಹೋಗಲು ಪೈಪ್ ಅಳವಡಿಸಿದ್ದೇ ಈ ಸಮಸ್ಯೆಗೆ ಕಾರಣ ಎಂಬ ಮಾಹಿತಿ ಇದೆ. ಅಲ್ಲದೇ ಅಚ್ಚರಿಯ ಸಂಗತಿ ಎಂದರೆ, ಈ ಕುಸಿತ ಆಗಿರುವುದು ಹೊಸ ರಸ್ತೆಯಲ್ಲಿಯೇ ಎನ್ನುವುದು. ಹಳೆಯ ರಸ್ತೆಯಲ್ಲಿ ಆ ರೀತಿ ಕುಸಿತ ಕಂಡು ಬಂದಿಲ್ಲ. ಹೀಗಾಗಿ ಕಳಪೆ ಕಾಮಗಾರಿ ಆಗಿದೆ ಅನ್ನೋದಕ್ಕೆ ಇದೇ ಸಾಕ್ಷಿ ಎನ್ನುವುದು ಸ್ಥಳೀಯರ ಆರೋಪ.
ಇನ್ನೇನು ಒಂದೂವರೆ ವರ್ಷದಲ್ಲಿ ಈ ಕಾಮಗಾರಿ ಮುಗಿಯಬೇಕಿದೆ. ಅನೇಕ ಕಡೆ ಇನ್ನೂ ಒಂದಷ್ಟು ಕೆಲಸ ಆಗಬೇಕಿದ್ದು, ಈ ರಸ್ತೆಯ ಮೇಲೆ ಇನ್ನೂ ವಾಹನಗಳ ಓಡಾಟ ಆರಂಭಿಸಿಲ್ಲ. ಒಂದು ವೇಳೆ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದರೆ ಅನಾಹುತ ಸೃಷ್ಟಿಯಾಗಲಿದೆ ಎಂಬ ಭಯವೂ ಇದೆ. ಕೂಡಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕಿದೆ.