ಸಾರಾಂಶ
ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಇಲ್ಲಿನ ಜನರು ಈಜುಗೊಳಕ್ಕೆ ಹೋಗಿ ಕೊಂಚಕಾಲ ಬಿಸಿಲಿನಿಂದ ಮುಕ್ತಿ ಪಡೆದುಕೊಂಡರಾಯಿತು ಎಂದು ತೆರಳಿದರೆ ಅಲ್ಲಿಯೂ ಶುಲ್ಕ ಏರಿಕೆಯ ಬಿಸಿ ತಾಗದೇ ಇರದು!
ಕಳೆದ 2-3 ದಿನಗಳಿಂದ ಇಲ್ಲಿನ ಬಸವವನ ಬಳಿ ಇರುವ ಹು-ಧಾ ಮಹಾನಗರ ಪಾಲಿಕೆಯ ಈಜುಗೊಳದ ಪ್ರವೇಶ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಿರುವುದು ಸಾರ್ವಜನಿಕರು, ಈಜುಪ್ರಿಯರ ತಲೆಬಿಸಿಗೆ ಕಾರಣವಾಗಿದೆ. ಈ ಮೊದಲು ದುರಸ್ತಿಯ ನೆಪದಲ್ಲಿ ಈಜುಗೊಳವನ್ನು ದಿಢೀರ್ ಎಂದು ಬಂದ್ ಮಾಡಲಾಗಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಜನರ ಒತ್ತಡಕ್ಕೆ ಮಣಿದ ಪಾಲಿಕೆ ಈಜುಗೊಳವನ್ನು ಪುನಃ ಆರಂಭಿಸಿತ್ತು. ಹಾಗೋ ಹೀಗೋ ಈಜುಗೊಳ ಆರಂಭವಾಯಿತು ಎಂದು ನಿಟ್ಟುಸಿರು ಬಿಟ್ಟಿದ್ದ ಈಜುಪ್ರಿಯರು ಈಗ ಶುಲ್ಕ ಏರಿಕೆಯ ಶಾಕ್‌ಗೆ ಮತ್ತೆ ಕಂಗಾಲಾಗುವಂತೆ ಮಾಡಿದೆ.ಪಾಲಿಕೆಯು ಕಳೆದ ಶುಕ್ರವಾರ (ಏ. 4) ಏಕಾಏಕಿ ದರ ಹೆಚ್ಚಳ ಮಾಡಿ ಈಜುಗೊಳದ ಪ್ರವೇಶದ್ವಾರಕ್ಕೆ ಭಿತ್ತಿಪತ್ರ ಅಂಟಿಸಿದೆ. ಈ ದರ ಏರಿಕೆಯು ಸಾಮಾನ್ಯ ಜನರಿಗೆ, ವಿಶೇಷವಾಗಿ ಮಧ್ಯಮ ವರ್ಗದವರಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ.
ನಿರ್ವಹಣೆ ವೆಚ್ಚದ ನೆಪ: ಈಜುಗೊಳದ ನಿರ್ವಹಣೆ ವೆಚ್ಚದ ಹೆಚ್ಚಳ, ಇದರ ಸ್ವಚ್ಛತೆ, ನೀರಿನ ಗುಣಮಟ್ಟ ಕಾಪಾಡುವುದು, 12 ಸಿಬ್ಬಂದಿಗೆ ಸಂಬಳ ನೀಡುವುದು, ಇತರ ಮೂಲಸೌಕರ್ಯ ಒದಗಿಸುವುದು ಹೆಚ್ಚು ಖರ್ಚುದಾಯಕವಾಗಿದೆ. ಹೀಗಾಗಿ ಶುಲ್ಕ ಹೆಚ್ಚಿಸಲಾಗಿದೆ ಎಂಬುದು ಪಾಲಿಕೆಯ ಅಧಿಕಾರಿಗಳ ಉತ್ತರ.ಯಾರ ಅಭಿಪ್ರಾಯ ಕೇಳಿಲ್ಲ: ಶುಲ್ಕ ಏರಿಕೆ ಮಾಡುವ ಪೂರ್ವದಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳಬೇಕಿತ್ತು. ಆದರೆ, ಇದ್ಯಾವುದು ಆಗಿಲ್ಲ. ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿ ನೀಡದೇ ದಿಢೀರನೇ ದುಪ್ಪಟ್ಟು ಶುಲ್ಕ ಏರಿಕೆ ಮಾಡಿರುವ ಫಲಕವನ್ನು ಅಳವಡಿಸಿದ ಬಳಿಕ ನಮಗೆ ಗೊತ್ತಾಗಿದ್ದು. ಹೀಗೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬ ಅರಿವು ಪಾಲಿಕೆಯವರಿಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಗಂಟೆಗೆ ₹100 ಶುಲ್ಕ: ಈ ಶುಲ್ಕ ಕೇವಲ ಒಂದು ಗಂಟೆಗೆ ಮಾತ್ರ. ಈ ಮೊದಲು ₹50 ನಿಗದಿಗೊಳಿಸಲಾಗಿತ್ತು. ಈಗ ಬರೋಬ್ಬರಿ ₹100 ನಿಗದಿಗೊಳಿಸಲಾಗಿದೆ. 2-3 ದಿನಗಳಿಂದ ಈಜುಗೊಳಕ್ಕೆ ಆಗಮಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ₹50ದೊಂದಿಗೆ ಈಜುಗೊಳಕ್ಕೆ ಬಂದ ಮಕ್ಕಳು ನಿರಾಸೆಯಿಂದ ಮರಳುತ್ತಿದ್ದಾರೆ.ಶುಲ್ಕ ಏರಿಕೆ ಪೂರ್ವದಲ್ಲಿ ಪ್ರತಿನಿತ್ಯ 500ಕ್ಕೂ ಅಧಿಕ ಜನರು ಈಜುಗೊಳಕ್ಕೆ ಆಗಮಿಸುತ್ತಿದ್ದರು. ರಜಾ ದಿನಗಳಲ್ಲಿ 600-700ಕ್ಕೂ ಅಧಿಕ ಜನರು ಆಗಮಿಸುತ್ತಿದ್ದರು. ಈಗ ಬೆಲೆ ಏರಿಕೆಯಾದಾಗಿನಿಂದ ನಿತ್ಯ 200 ಜನರು ಸಹ ಆಗಮಿಸುತ್ತಿಲ್ಲ. ಇದೇ ಸ್ಥಿತಿ ಮುಂದುವರಿದಲ್ಲಿ ಈಜುಗೊಳಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಈಜುಗೊಳಕ್ಕೆ ಆಗಮಿಸಿದ್ದ ಮನೋಹರ ಎಂಬುವವರು "ಕನ್ನಡಪ್ರಭ "ಕ್ಕೆ ತಿಳಿಸಿದರು.
ನಾಳೆ ಬಂದ್‌ನ ಎಚ್ಚರಿಕೆ?: ಪಾಲಿಕೆ ಈಜುಗೊಳದ ಪ್ರವೇಶ ಶುಲ್ಕ ಏರಿಕೆ ಖಂಡನೀಯ. ಇದು ಬಡ ಹಾಗೂ ಮಧ್ಯಮ ವರ್ಗದ ಈಜುಪಟುಗಳಿಗೆ ಮತ್ತು ಹೊಸದಾಗಿ ಈಜು ಕಲಿಯುವವರಿಗೆ ಹೊರೆಯಾಗಲಿದೆ. ಶುಲ್ಕ ಏರಿಕೆಗೂ ಮುನ್ನ ಕೂಲಂಕಷವಾಗಿ ಚರ್ಚಿಸಿ ಅಂತಿಮಗೊಳಿಸಬೇಕು. ಶುಲ್ಕ ಏರಿಕೆ ಖಂಡಿಸಿ ಸಾರ್ವಜನಿಕರು ಬುಧವಾರ ಬೆಳಗ್ಗೆ ಈಜುಗೊಳ ಬಂದ್ ಮಾಡಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.ನಿರ್ವಹಣೆ ಖರ್ಚು ಹೆಚ್ಚಿದೆ: ಈಜುಗೊಳದ ನಿರ್ವಹಣೆ ಖರ್ಚು ಹೆಚ್ಚಾಗುತ್ತಿದೆ. ಅಲ್ಲಿನ ನೀರು, ಆವರಣ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಹೇಳಿದರು.