ಸಾರಾಂಶ
ಬೆಂಗಳೂರು : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿನ 82 ವಾರ್ಡ್‌ಗಳ ಪೈಕಿ 1 ರಿಂದ 26 ವರೆಗೆ ಧಾರವಾಡ ಮಹಾನಗರ ಪಾಲಿಕೆ ರಚಿಸಲು ತೀರ್ಮಾನಿಸಲಾಗಿದೆ. ಉಳಿದಂತೆ 27ನೇ ವಾರ್ಡ್‌ನಿಂದ 82ರವರೆಗಿನ ಪ್ರದೇಶಗಳನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆಯಾಗಿ ಮುಂದುವರೆಸಲು ಸಂಪುಟದಲ್ಲಿ ನಿರ್ಧರಿಸಲಾಗಿದೆ.
ಇದರಿಂದ ಮಹಾನಗರ ಪಾಲಿಕೆ ಎರಡು ಮಹಾನಗರ ಪಾಲಿಕೆಗಳಾಗಿ ವಿಭಜನೆಯಾಗಲಿದೆ. ಧಾರವಾಡ ನಗರದ ಮಹಾನಗರ ಪಾಲಿಕೆಯು 120.94 ಚ.ಕಿ.ಮೀ. ವಿಸ್ತೀರ್ಣ ಇರಲಿದೆ. ಈ ವ್ಯಾಪ್ತಿಯಲ್ಲಿ ಪ್ರತಿ ಚ.ಕಿ.ಮೀ.ಗೆ 2,277 ಜನಸಾಂದ್ರತೆಯಂತೆ 2.75 ಲಕ್ಷ ಜನಸಂಖ್ಯೆ ಇರಲಿದೆ. ಇನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆಯ ಜನಸಂಖ್ಯೆಯು 6.68 ಲಕ್ಷ ಇರಲಿದೆ. 127.05 ಚ.ಕಿ.ಮೀ. ವಿಸ್ತೀರ್ಣದ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಜನಸಾಂದ್ರತೆ 5,261 ಆಗಲಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ವಿದ್ಯಾಕಾಶಿ ಎಂದೇ ಹೆಸರಾಗಿರುವ ಧಾರವಾಡ ಭಾಗದ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಲಿದೆ. ತಕ್ಷಣದಿಂದ ಅನ್ವಯವಾಗುವಂತೆ ಎರಡು ಮಹಾನಗರ ಪಾಲಿಕೆಗಳು ಪ್ರತ್ಯೇಕವಾಗಿ ಅನುಷ್ಠಾನಕ್ಕೆ ಬರಲಿವೆ ಎಂದು ಹೇಳಿದರು.