ಹುಬ್ಬಳ್ಳಿ ಹೂವಿನ ಮಾರುಕಟ್ಟೆಗೆ ಹೊಸ ಮಳಿಗೆ, ಶೆಡ್‌ಗಳಿಂದ ಮುಕ್ತಿ

| Published : Jul 02 2025, 12:20 AM IST

ಹುಬ್ಬಳ್ಳಿ ಹೂವಿನ ಮಾರುಕಟ್ಟೆಗೆ ಹೊಸ ಮಳಿಗೆ, ಶೆಡ್‌ಗಳಿಂದ ಮುಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ಅಮರಗೋಳ ಎಪಿಎಂಸಿಯಲ್ಲಿ ನಿರ್ಮಿಸಿರುವ ಹೊಸ ಮಳಿಗೆಗಳಲ್ಲೇ ಇನ್ನು ಮುಂದೆ ಹೂವಿನ ವ್ಯಾಪಾರ ನಡೆಯಲಿದ್ದು, ದಶಕಗಳಿಂದ ಶೆಡ್‌ಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು ಹಲವು ಸಮಸ್ಯೆಗಳಿಂದ ಮುಕ್ತರಾಗಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿಯಲ್ಲಿ ನಿರ್ಮಿಸಿರುವ ಹೊಸ ಮಳಿಗೆಗಳಲ್ಲೇ ಇನ್ನು ಮುಂದೆ ಹೂವಿನ ವ್ಯಾಪಾರ ನಡೆಯಲಿದ್ದು, ದಶಕಗಳಿಂದ ಶೆಡ್‌ಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು ಹಲವು ಸಮಸ್ಯೆಗಳಿಂದ ಮುಕ್ತರಾಗಿದ್ದಾರೆ.

ಸೋಮವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಹೊಸ ಮಳಿಗೆಗಳನ್ನು ವ್ಯಾಪಾರಸ್ಥರ ಇಚ್ಛಿಯಂತೆ ಉದ್ಘಾಟಿಸಿದ್ದಾರೆ. ಎರಡ್ಮೂರು ದಿನಗಳಲ್ಲೇ ಮಳಿಗೆಗಳಿಗೆ ಹೂವಿನ ವ್ಯಾಪಾರ ಸ್ಥಳಾಂತರವಾಗಲಿದೆ.

ಎಪಿಎಂಸಿಯಲ್ಲಿ ದಶಕಗಳ ಹಿಂದೆಯೇ ಹೂವಿನ ವ್ಯಾಪಾರಸ್ಥರಿಗೆ ಜಾಗ ನೀಡಲಾಗಿದ್ದು, ಅವೆರಲ್ಲ ತಗಡಿನ ಶೆಡ್‌ಗಳನ್ನು ಹಾಕಿಕೊಂಡು ಅಲ್ಲೇ ವ್ಯಾಪಾರ ಮಾಡುತ್ತಿದ್ದರು. ಶೆಡ್‌ಗಳಿರುವ ಜಾಗ ತಗ್ಗು ಪ್ರದೇಶದಲ್ಲಿದ್ದು, ಮಳೆ ಬಂದರೆ ಸಾಕು ಅಲ್ಲೆಲ್ಲಾ ನೀರು ನಿಲ್ಲುತ್ತಿತ್ತು. ಹೂವು ಹೊತ್ತು ತಂದ ಗಾಡಿಗಳನ್ನು ನಿಲ್ಲಿಸಲು ಜಾಗವಿರಲಿಲ್ಲ. ಹೂವುಗಳ ಸಂರಕ್ಷಣೆ ಸಹ ಕಷ್ಟದಾಯಕವಾಗಿತ್ತು. ಹೀಗಾಗಿ ಸುಸಜ್ಜಿತ ಮಳಿಗೆಗಳ ನಿರ್ಮಿಸಿಕೊಡುವಂತೆ ದಶಕಗಳಿಂದ ಬೇಡಿಕೆ ಇತ್ತು. ದಶಕಗಳಿಂದ ಎಪಿಎಂಸಿಗೆ ಕರ ಕಟ್ಟುತ್ತ ಬಂದಿರುವ 12 ವ್ಯಾಪಾರಸ್ಥರಿಗೆ ಅವರು ಕರ ಕಟ್ಟಿರುವುದನ್ನು ಆಧರಿಸಿ ಹೊಸ ಜಾಗ ನೀಡಲಾಗಿದ್ದು, ವ್ಯಾಪಾರಸ್ಥರು ಮಳಿಗೆ ನಿರ್ಮಿಸಿಕೊಂಡಿದ್ದಾರೆ. ಆದರೆ, 20 ಹೂವು ಮಾರಾಟದ ವ್ಯಾಪಾರಸ್ಥರಿದ್ದು, ಇನ್ನು 8 ವ್ಯಾಪಾರಸ್ಥರಿಗೆ ಜಾಗ ಕೊರತೆಯಿಂದ ಮಳಿಗೆ ನಿರ್ಮಾಣ ಆಗಿಲ್ಲ.

ಮಳಿಗೆ ಸಿಗದ ವ್ಯಾಪಾರಸ್ಥರಿಗೆ ಸದ್ಯ ಶೆಡ್‌ಗಳಲ್ಲೇ ವ್ಯಾಪಾರ ಮಾಡಲು ಹೇಳಿದ್ದೇವೆ. ಆದರೆ, ಎರಡೆರಡು ಕಡೆ ಹೂವು ಮಾರಾಟಕ್ಕೆ ಸಮಸ್ಯೆಯಾದರೆ, ಹೊಸ ಮಳಿಗೆಗಳ ಜಾಗದಲ್ಲೇ ಮಳಿಗೆ ಸಿಗದ ವ್ಯಾಪಾರಸ್ಥರಿಗೆ ಅಗತ್ಯವಾದ ಸಹಾಯ ಮಾಡುತ್ತೇವೆ ಎಂದು ಹೇಳುತ್ತಾರೆ ಹೂವಿನ ವ್ಯಾಪಾರಸ್ಥರ ಸಂಘದ ಮುಖಂಡರು.ಮಾರುಕಟ್ಟೆಯಲ್ಲಿ ನಿತ್ಯ ಮಲ್ಲಿಗೆ ಪರಿಮಳ

ಹುಬ್ಬಳ್ಳಿ ಹೂವಿನ ಮಾರುಕಟ್ಟೆಗೆ ರಾಣಿಬೆನ್ನೂರು, ಸವಣೂರು, ಹೂವಿನಹಡಗಲಿ, ಗದುಗಿನ ಲಕ್ಕುಂಡಿಯಿಂದ ಮಲ್ಲಿಗೆ ಹೂವು ಆಗಮಿಸುತ್ತದೆ. ದಿನವೊಂದಕ್ಕೆ 2 ಕ್ವಿಂಟಲ್‌ ವರೆಗೂ ಮಲ್ಲಿಗೆ ವಹಿವಾಟು ನಡೆಯುವುದು ವಿಶೇಷ.

ಗದಗ ತಾಲೂಕಿನ ಕದಾಂಪುರ, ಕಣವಿಹೊಸೂರು, ಲಕ್ಕುಂಡಿ, ಸಂಭಾಪುರ, ಪಾಪನಾಶಿ, ಹುಬ್ಬಳ್ಳಿ ಹಾಗೂ ಧಾರವಾಡ ತಾಲೂಕಿನಿಂದಲೂ ಹುಬ್ಬಳ್ಳಿಗೆ ನಿತ್ಯ ಸೇವಂತಿಗೆ, ಚೆಂಡುಹೂವು, ಗುಲಾಬಿ ಹೂವು, ಬಟನ್‌ ಗುಲಾಬಿ ಹೀಗೆ ತರಹೇವಾರಿ ಹೂವು ಆಗಮಿಸುತ್ತಿದ್ದು, ಸ್ಥಳೀಯವಾಗಿ ಹಾಗೂ ಬೇರೆ ಬೇರೆ ಕಡೆ ಸಂತೆ ಮಾರುಕಟ್ಟೆಯ ಮಾರಾಟಗಾರರು ಇಲ್ಲಿಂದಲೇ ಹೂವು ಖರೀದಿಸುತ್ತಾರೆ. ಇಲ್ಲಿಗೆ ಹೂವು ಬರುವ ಆಯಾ ಪ್ರದೇಶದಲ್ಲಿ ಸ್ಥಳೀಯವಾಗಿ ಹೂವಿನ ಮಾರುಕಟ್ಟೆಗಳು ಇವೆಯಾದರೂ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯದ ಕಾರಣ ಬೆಳೆಗಾರರು ಹುಬ್ಬಳ್ಳಿ ಮಾರುಕಟ್ಟೆಯನ್ನು ಆಶ್ರಯಿಸಿದ್ದಾರೆ.

ಬೆಂಗಳೂರಿನಿಂದ ನಿತ್ಯ ಹೂವು ಬರುತ್ತದೆ. ದಿನವೊಂದಕ್ಕೆ 8ರಿಂದ 10 ಟನ್‌ ಹೂವು ಇಲ್ಲಿ ವಹಿವಾಟು ನಡೆಯುತ್ತದೆ. ನೂರಕ್ಕೂ ಅಧಿಕ ರೈತರು ಇಲ್ಲಿ ಹೂವು ಮಾರಾಟಕ್ಕೆ ಬರುತ್ತಾರೆ. ವ್ಯಾಪಾರಸ್ಥರು ಎಷ್ಟೇ ಹೂವು ಬಂದರೂ ವಿಲೇವಾರಿ ಮಾಡುತ್ತಾರೆ.

ಹೂವಿನ ಮಾರುಕಟ್ಟೆ ವ್ಯಾಪಾರಸ್ಥರಿಗೆ ಲೀಸ್‌ ಮೇಲೆ ಜಾಗ ನೀಡಲಾಗಿದೆ. ವ್ಯಾಪಾರಸ್ಥರೇ ಮಳಿಗೆ ನಿರ್ಮಿಸಿಕೊಂಡಿದ್ದಾರೆ. 12 ಮಳಿಗೆ ಇವೆ. 20 ವ್ಯಾಪಾರಸ್ಥರು ಇದ್ದು, ಇನ್ನು 8 ಮಳಿಗೆ ರೆಡಿಯಾಗಬೇಕು ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ದಶಕಗಳಿಂದ ಶೆಡ್‌ಗಳನ್ನು ಹಾಕಿಕೊಂಡು ಹೂವಿನ ವ್ಯಾಪಾರ ಮಾಡಿದ್ದೇವೆ. ಹೂವು ತರುವ ವಾಹನಗಳಿಗೆ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇರಲಿಲ್ಲ. ಮಳೆ ಬಂದರೆ ತಗ್ಗುಪ್ರದೇಶವಿರುವುದರಿಂದ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿತ್ತು. ರೈತರಿಗೆ ಕುಳಿತಕೊಳ್ಳಲು ಸರಿಯಾದ ಜಾಗ ಇರಲಿಲ್ಲ. ಈಗ ಇಂಥ ಸಮಸ್ಯೆಗಳಿಗೆ ಮುಕ್ತಿ ದೊರೆತಿದೆ ಎಂದು ಹುಬ್ಬಳ್ಳಿ ಹೂವಿನ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಯೂಸುಫ ಶಿರಹಟ್ಟಿ ಹೇಳಿದರು.