ಹುಬ್ಬಳ್ಳಿ:
ವಾಣಿಜ್ಯ ನಗರಿಯಲ್ಲಿ ಶನಿವಾರ ನಡೆಯುವ ರಂಗ ಪಂಚಮಿಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು ಬಣ್ಣದೋಕುಳಿಗೆ ಕ್ಷಣಗಣನೆ ಶುರುವಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹು-ಧಾ ಪೊಲೀಸ್ ಕಮೀಷನರೇಟ್ ಹೆಚ್ಚುವರಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಿದೆ.ಪ್ರತಿ ವರ್ಷವೂ ಹೋಳಿ ಹುಣ್ಣಿಮೆಯ 5ನೇ ದಿನದಂದು ನಗರದಲ್ಲಿ ಹೋಳಿಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಗರದ ಹಲವೆಡೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮರಾಠಗಲ್ಲಿ, ಬಾನಿ ಓಣಿ, ಕಮರಿಪೇಟೆ, ದುರ್ಗದಬೈಲ್, ಚನ್ನಪೇಟೆ, ತೋಳನಕೆರೆ ಸೇರಿದಂತೆ ಹಲವೆಡೆ ಸ್ಥಳೀಯ ಯುವಕರ ಸಂಘಟನೆಗಳು ರೇನ್ ಡ್ಯಾನ್ಸ್, ಡಿಜೆ, ಗಡಿಗೆ ಒಡೆಯುವ ಸ್ಫರ್ಧೆ ಸೇರಿದಂತೆ ಹತ್ತಾರು ಬಗೆಯ ಕಾರ್ಯಕ್ರಮ ಆಯೋಜಿಸಿವೆ.
ನಗರದ ಹೋಟೆಲ್‌ಗಳಲ್ಲಿ ಹೋಳಿ ಹಬ್ಬದಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಜನರು ಟಿಕೆಟ್ ಬುಕ್ಕಿಂಗ್ ಮಾಡಿ ಬಣ್ಣದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ದುರ್ಗದಬೈಲ್, ಗಾಂಧಿ ಮಾರ್ಕೆಟ್, ದಾಜಿಬಾನ್‌ಪೇಟೆ ಮಾರ್ಕೆಟ್‌ನಲ್ಲಿ ಬಗೆ-ಬಗೆಯ ಬಣ್ಣದ ಪಿಚಕಾರಿ, ವಿವಿಧ ಬಣ್ಣ, ಹಲಗೆಗಳ ಮಾರಾಟ, ಭರ್ಜರಿಯಾಗಿ ನಡೆಯಿತು.350 ರತಿ-ಮನ್ಮಥರು:
ಹುಬ್ಬಳ್ಳಿಯಲ್ಲಿ 350ಕ್ಕೂ ಅಧಿಕ ರತಿ-ಮನ್ಮಥರ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿದ್ದು ಕೆಲವೆಡೆ ಹುಣ್ಣಿಮೆ ಮರು ದಿನವೇ ದಹನ ಮಾಡಲಾಗಿದೆ. ಶನಿವಾರ 130ಕ್ಕೂ ಅಧಿಕ ಮೂರ್ತಿಗಳ ಮೆರವಣಿಗೆ ಹಾಗೂ ದಹನ ನೆರವೇರಿಸಲಾಗುತ್ತಿದೆ.
ಪೊಲೀಸ್ ಸರ್ಪಗಾವಲು:
ಕೌಲಪೇಟ್ ಜಾಮೀಯಾ ಮಸೀದಿ, ಕಮರಿಪೇಟ್ ಮಸೀದಿ, ದರ್ಗಾ, ಕೌಲ್‌ಪೇಟ್ ಮಸೀದಿಗಳಿದ್ದು ಶನಿವಾರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರ ವರೆಗೆ ಕಾಳಮ್ಮನ ಅಗಸಿಯಿಂದ ಡಾಕಪ್ಪ ಸರ್ಕಲ್, ಡಾಕಪ್ಪ ಸರ್ಕಲ್‌ನಿಂದ ಕೌಲಪೇಟ ಕ್ರಾಸ್, ಡಾಕಪ್ಪ ಸರ್ಕಲ್‌ನಿಂದ ಹಳೇ ಕೆಇಬಿ ಆಫೀಸ್‌ನ ಮೂರು ಕಡೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.ಅಗತ್ಯ ಸಿದ್ಧತೆ ಕುರಿತು ಸಭೆ:
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉಡುಪಿ, ಕಲಬುರಗಿ, ಚನ್ನಪಟ್ಟಣ ಸೇರಿದಂತೆ ಹಲವು ಜಿಲ್ಲೆಗಳಿಂದ ಕೆಎಸ್‌ಆರ್‌ಪಿ, ಸಿಎಆರ್ ಸೇರಿದಂತೆ ಒಟ್ಟು 2500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜತೆಗೆ ಆಯಕಟ್ಟಿನ 30 ಕಡೆಗಳಲ್ಲಿ ಪೊಲೀಸ್ ಇಲಾಖೆಯಿಂದ 30 ಹಾಗೂ ಪಾಲಿಕೆಯಿಂದ 60ಕ್ಕೂ ಅಧಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 5 ಡ್ರೋನ್ ಕ್ಯಾಮೆರಾಗಳ ಕಣ್ಗಾವಲು ಇರಲಿದೆ ಎಂದು ಕಮಿಷನರೇಟ್ ತಿಳಿಸಿದೆ. ಈ ನಡುವೆ ನಗರದಲ್ಲಿ ಕಮಿಷನರೇಟ್‌ನಿಂದ ಪಥಸಂಚಲನ ನಡೆಸಲಾಗಿದೆ.