ಸಾರಾಂಶ
ಹುಬ್ಬಳ್ಳಿ: ತಾಲೂಕು ಮತ್ತು ನಗರದಲ್ಲಿ ಗಜಮುಖನನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆ ನಡೆದಿದೆ. ಈಗಾಗಲೇ ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುವ ಪೆಂಡಾಲ್‌ಗಳ ಅಲಂಕಾರದ ಕೆಲಸ ಜೋರಾಗಿದೆ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಅಲಂಕಾರದಲ್ಲಿ ತೊಡಗಿದ್ದು, ಹೂವು-ಹಣ್ಣು, ವಿದ್ಯುತ್ ದೀಪಾಲಂಕಾರದಲ್ಲಿ ತೊಡಗಿದ್ದಾರೆ.
ಈಗಾಗಲೇ ಬೀದಿ ಬೀದಿಗಳಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ದುರ್ಗದಬೈಲ್, ಶೀಲವಂತರ ಓಣಿ, ಗಣೇಶಪೇಟೆ, ಬಾಣಿ ಓಣಿ, ಬಾಬಾಸಾನ ಗಲ್ಲಿ, ವಿದ್ಯಾನಗರ, ತುಮಕೂರು ಓಣಿ, ಚೆನ್ನಪೇಟೆ, ಹೊಸೂರು, ಗೋಕುಲ ರಸ್ತೆ, ಈದ್ಗಾ ಮೈದಾನ ಹೀಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಪೌರಾಣಿಕ ಹಾಗೂ ಸಾಮಾಜಿಕ ಮಾದರಿಗಳ ಮಂಟಪಗಳ ನಿರ್ಮಾಣ ಮಾಡಲಾಗಿದೆ.ಹುಬ್ಬಳ್ಳಿ ನಗರದಲ್ಲಿ 900ಕ್ಕೂ ಹೆಚ್ಚು ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿವೆ. ಹು-ಧಾ ಮಹಾನಗರದಲ್ಲಿ ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ಮೂರು, ಐದು, ಒಂಬತ್ತು, 11 ದಿನಗಳ ಕಾಲ ಪ್ರತಿಷ್ಠಾಪಿಸಿ ಗಣೇಶನ ವಿಸರ್ಜನೆ ಮಾಡಲಾಗುತ್ತದೆ.
ಮ್ಯಾದಾರ ಓಣಿಯ ಸಪ್ತ ಸಾಮ್ರಾಟ, ಮರಾಠ ಗಲ್ಲಿಯಲ್ಲಿ ಹುಬ್ಬಳ್ಳಿ ಕಾ ಮಹಾರಾಜ್, ದಾಜಿಬಾನ್‌ಪೇಟೆಯ ಹುಬ್ಬಳ್ಳಿ ಕಾ ರಾಜಾ, ಗಣೇಶಪೇಟ ಕಾ ರಾಜಾ ಸೇರಿ ವಿವಿಧ ಹೆಸರಿನಲ್ಲಿ ಸಾರ್ವಜನಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. 15ರಿಂದ 25 ಅಡಿಗಳ ವರೆಗೆ ಮೂರ್ತಿಗಳನ್ನು ಈಗಾಗಲೇ ಮಂಟಪಗಳಿಗೆ ತರಲಾಗಿದೆ. ಇಲ್ಲಿಯ ಸರಾಫ್ ಗಲ್ಲಿಯಲ್ಲಿ 121 ಕೆಜಿ ಬೆಳ್ಳಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಿರುವುದು ವಿಶೇಷವಾಗಿದೆ.ಮಾರುಕಟೆಯಲ್ಲಿ ಖರೀದಿ ಬಲುಜೋರು: ತರಹೇವಾರಿ ಅಲಂಕಾರಿಕ ಸಾಮಗ್ರಿಗಳು, ಬಗೆಬಗೆಯ ವಿದ್ಯುತ್ ದೀಪಗಳು, ಪ್ಲಾಸ್ಟಿಕ್‌ನ ಹಾರಗಳು ಮತ್ತು ಅಲಂಕಾರಿಕ ಸಾಮಗ್ರಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಗಣಪತಿ ಕೂಡಿಸುವ ಕಟ್ಟಿಗೆಯ ಮತ್ತು ಬಟ್ಟೆಯ ಮಂಟಪಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಹಣ್ಣು, ಬಾಳೆ ಕಂಬ, ತಳಿರು ತೋರಣಗಳೂ ತುಂಬಿದ್ದು, ಪೇಟೆಗಳಿಗೆ ವಿಶೇಷ ಕಳೆ ಬಂದಿದೆ. ಬಾಳೆಕಾಯಿ ಡಜನ್‌ಗೆ ₹80, ಸೇಬು ಹಣ್ಣು ₹200 ಕೆಜಿ ಚಿಕ್ಕು ₹120ರಿಂದ ₹150, ದಾಳಿಂಬೆ ₹200 ಮೋಸಂಬಿ ₹160ರಿಂದ ₹180ರ ವರೆಗೆ ಮಾರಾಟವಾಗುತ್ತಿದೆ.ಇನ್ನು ಮಂಟಪ ಅಲಂಕರಿಸಲು ಬೇಕಾಗುವ ಬಾಳೆ ಕಂಬ ₹60ರಿಂದ ₹120ರ ವರೆಗೆ ಮಾವಿನ ತೊಳಲುವೊಂದಕ್ಕೆ ₹20ರಿಂದ ₹30, ಸೇವಂತಿ ಮಾರಿಗೆ ₹60, ಮಲ್ಲಿಗೆ ಮಾರಿಗೆ ₹100, ಅಡಿಕೆ ಗೊನೆ ₹50ಗೆ ಎರಡು, ಹೂವಿನ ಮಾಲೆ ₹250ರಿಂದ ₹300, ಪೇರಲ, ಚಿಕ್ಕು, ಸೀತಾಫಲ ಗೊನೆಗೆ ₹20ರಿಂದ ₹40 ರವರೆ ಮಾರಾಟವಾಗುತ್ತಿದೆ. ಇನ್ನು 2 ತರಹದ ಎರಡೆರಡು ಹಣ್ಣುಗಳನ್ನು ₹180ರಿಂದ ₹120ರ ವರೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಿ ಸತೀಶ ತಿಳಿಸಿದರು. ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ರಾತ್ರಿ 10 ಗಂಟೆವರೆಗೆ ಡಿಜೆ: ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ರಾತ್ರಿ 10 ಗಂಟೆವರೆಗೆ ಮಾತ್ರ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಹೀಗಾಗಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಡಿಜೆಗೆ ಅವಕಾಶವಿದೆ.ಬಿಗಿ ಬಂದೋಬಸ್ತ್: ಗಣೇಶ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗೆ ಅವಕಾಶ ಇಲ್ಲದಂತೆ ಹುಬ್ಬಳ್ಳಿಯಾದ್ಯಂತ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ. 3 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 78 ಸೂಕ್ಷ್ಮ ಪ್ರದೇಶ, 26 ಅತೀ ಸೂಕ್ಷ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಇರುವ ನಿರ್ಬಂಧ ಸಡಿಲಗೊಳಿಸಲು ಪೊಲೀಸರಿಗೆ ಮನವಿ ಮಾಡಿದ್ದೇವೆ. ಆಯಾ ಗಣಪತಿ ಮಂಡಳಿಗಳು ಡಿಜೆ ಬಳಸಲು ಅನುಮತಿ ಕೋರುತ್ತವೆ. ಪೊಲೀಸರು ನಿರ್ಬಂಧ ಸಡಿಲಗೊಳಿಸುವ ಭರವಸೆ ಹೊಂದಿದ್ದೇವೆ. ಎಲ್ಲೆಡೆ ಪರಿಸರ ಸ್ನೇಹಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಹೇಳಿದರು.