ನೋಂದಣಿ ಮಾಡಿಕೊಂಡಿದ್ದ 3200 ಓಟಗಾರರಷ್ಟೇ ಅಲ್ಲದೇ ಸಾರ್ವಜನಿಕರು ಹುಬ್ಬಳ್ಳಿ ಹಾಫ್ ಮ್ಯಾರಥಾನ್‌ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಓಟದ ಆನಂದ ಅನುಭವಿಸಿದರು.

ಹುಬ್ಬಳ್ಳಿ: ದೈಹಿಕ ಆರೋಗ್ಯ ಹಾಗೂ ಫಿಟ್ನೆಸ್​ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಹುಬ್ಬಳ್ಳಿ ಫಿಟ್ನೆಸ್​ ಫೌಂಡೇಷನ್ ವತಿಯಿಂದ ಭಾನುವಾರ ನಗರದ ಗೋಕುಲ ರಸ್ತೆ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಏರ್ಪಡಿಸಿದ್ದ 11ನೇ ಆವೃತ್ತಿಯ ಹುಬ್ಬಳ್ಳಿ ಹಾಫ್​ ಮ್ಯಾರಥಾನ್‌ ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ನೋಂದಣಿ ಮಾಡಿಕೊಂಡಿದ್ದ 3200 ಓಟಗಾರರಷ್ಟೇ ಅಲ್ಲದೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಓಟದ ಆನಂದ ಅನುಭವಿಸಿದರು. 5, 10 ಹಾಗೂ 21 ಕಿ.ಮೀ ವಿಭಾಗದಲ್ಲಿ ಪ್ರತ್ಯೇಕವಾಗಿ ಭಾಗವಹಿಸಿದ ಕ್ರೀಡಾಪಟುಗಳು ಉತ್ಸಾಹ ಪ್ರದಶಿರ್ಸಿದರು. ವಿವಿಧ ಸಂಘಟನೆಗಳು, ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ಮ್ಯಾರಾಥಾನ್​ ನಲ್ಲಿ ಮಕ್ಕಳು, ಹಿರಿಯರು ಎನ್ನದೇ ಎಲ್ಲ ವಯೋಮಾನದ ಪುರುಷ, ಮಹಿಳೆಯರು ಪಾಲ್ಗೊಂಡರು.

ಕಮಲ್​ ಗ್ರುಪ್​ನ ಅನ್ಮೋಲ್​ ಮೆಹತಾ, ದೇಶಪಾಂಡೆ ಫೌಂಡೇಷನ್​ ಸಿಇಒ ಪಿ.ಎನ್​. ನಾಯಕ, ಹುಬ್ಬಳ್ಳಿ ಫಿಟ್ನೆಸ್​ ಫೌಂಡೇಷನ್​ನ ಡಾ. ಎಸ್​.ಪಿ. ಬಳಿಗಾರ, ಡಾ. ಜಿ.ಸಿ. ಪಾಟೀಲ, ಕೆಎಲ್​ಇ ಐಟಿ ಪ್ರಾಚಾರ್ಯ ಮನು ಟಿ.ಎಂ, ಎವಿಎಂ ಗ್ರಾನೈಟ್​ನ ಅಭಿಷೇಕ ಮಲಾನಿ ಸೇರಿದಂತೆ ಇತರರು ಮ್ಯಾರಥಾನ್​ ಓಟಕ್ಕೆ ಚಾಲನೆ ನೀಡಿದರು.

ಬಳ್ಳಾರಿ, ಮೈಸೂರು, ಬೆಂಗಳೂರು, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲದೇ ಹೊರ ರಾಜ್ಯಗಳ ಜನರು ಸಹ ಭಾಗವಹಿಸಿದ್ದರು. ವಿದೇಶಿ ಪ್ರಜೆಗಳು ಸಹ ಕೆಲವರು ಪಾಲ್ಗೊಂಡರು. ಮಲೇಷಿಯಾ ವಿದ್ಯಾರ್ಥಿಗಳು, ಫ್ರೆಂಚ್​ ಪ್ರಜೆ ಸಾಂಚಿಸ್​ ಡಿ. ಅವರ ಹಾಜರಿ ವಿಶೇಷವಾಗಿತ್ತು. 21 ಕಿ.ಮೀ ಓಟದಲ್ಲಿ ಸಾಂಚಿಸ್​ 2ನೇ ಸ್ಥಾನ ಪಡೆದರು.

5 ಕಿ.ಮೀ, 10 ಕಿ.ಮೀ, 21 ಕಿ.ಮೀ. (ಅರ್ಧ ಮ್ಯಾರಥಾನ್​) ಓಟದಲ್ಲಿ ವಿವಿಧ ವಯೋಮಾನದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.