ನಾಳೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ: ಶಾಸಕ ಮಹೇಶ ಟೆಂಗಿನಕಾಯಿ

| Published : Mar 15 2025, 01:04 AM IST

ನಾಳೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ: ಶಾಸಕ ಮಹೇಶ ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 13 ವರ್ಷಗಳಿಂದ ಜಗ್ಗಲಗಿ ಹಬ್ಬ ಆಚರಣೆ ಮಾಡುತ್ತ ಬರಲಾಗಿದೆ. ಅದರಂತೆ ಈ ಬಾರಿಯೂ ಚರ್ಮ ವಾದ್ಯ, ಜಗ್ಗಲಗಿಗಳಿಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಈ ಹಬ್ಬ ಆಚರಣೆ ಮಾಡಲಾಗಿದೆ ಎಂದರು.

ಹುಬ್ಬಳ್ಳಿ: ಭಾರತೀಯ ಸಂಪ್ರದಾಯ ಮತ್ತು ಧಾರ್ಮಿಕ ಹಬ್ಬಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋಳಿ ಹಬ್ಬದ ಅಂಗವಾಗಿ ಮಾ.16ರಂದು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ಇಲ್ಲಿನ ಮೂರುಸಾವಿರ ಮಠದ ಮೈದಾನದಿಂದ ಆಯೋಜಿಸಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.

ಕಳೆದ 13 ವರ್ಷಗಳಿಂದ ಜಗ್ಗಲಗಿ ಹಬ್ಬ ಆಚರಣೆ ಮಾಡುತ್ತ ಬರಲಾಗಿದೆ. ಅದರಂತೆ ಈ ಬಾರಿಯೂ ಚರ್ಮ ವಾದ್ಯ, ಜಗ್ಗಲಗಿಗಳಿಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಈ ಹಬ್ಬ ಆಚರಣೆ ಮಾಡಲಾಗಿದೆ ಎಂದರು.

ಅಂದಿನ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂರುಸಾವಿರಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ವಹಿಸಲಿದ್ದು, ನಾಡಿನ ವಿವಿಧ ಮಠಾಧೀಶರು, ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಸಕ್ತ ವರ್ಷದ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಭವ್ಯ ಮೆರವಣಿಗೆಯು ನೂರಾರು ಜಗ್ಗಲಗಿ ಮತ್ತು ವಿವಿಧ ಚರ್ಮವಾದ್ಯಗಳ ಇಂಪಾದ ನಾದಗಳೊಂದಿಗೆ, ಜಾನಪದ ಕಲಾವಿದರ ಸಾರಥ್ಯದಲ್ಲಿ ಮೂರುಸಾವಿರಮಠದ ಮೈದಾನದಿಂದ ಆರಂಭಗೊಂಡು ಎಸ್.ಟಿ. ಭಂಡಾರಿ ರಸ್ತೆ, ಶ್ರೀ ತುಳಜಾಭವಾನಿ ವೃತ್ತ, ನ್ಯೂ ಮ್ಯಾದಾರ ಓಣಿ, ಶಿವಾಜಿ ಚೌಕ್, ಬ್ರಾಡ್ ವೇ, ದುರ್ಗದ ಬಯಲು ವೃತ್ತ, ರಾಧಾಕೃಷ್ಣ ಗಲ್ಲಿ, ಬಾರದಾನ ಸಾಲ, ಜವಳಿ ಸಾಲ, ಬೆಳಗಾಂವ್ ಗಲ್ಲಿ, ಪೆಂಡಾರ್ ಗಲ್ಲಿ, ಶ್ರೀ ತುಳಜಾಭವಾನಿ ವೃತ್ತ, ದಾಜಿಬಾನಪೇಟ ಮಾರ್ಗವಾಗಿ ಮೂರುಸಾವಿರ ಮಠದ ಆವರಣ ತಲುಪಿ ಮುಕ್ತಾಯವಾಗಲಿದೆ ಎಂದರು.

ಹುಬ್ಬಳ್ಳಿ ಜಗ್ಗಲಗಿ ಹಬ್ಬದಲ್ಲಿ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಧಾರವಾಡ, ಅರಳಿಕಟ್ಟಿ, ಅಮರಗೋಳ, ತಾರಿಹಾಳ, ಶಿವಳ್ಳಿ, ಗುಂಡೇನಟ್ಟಿ, ಮರೇವಾಡ, ಬೊಮ್ಮಸಮುದ್ರ, ಅಮ್ಮಿನಬಾವಿ, ಸೋಮನಕೊಪ್ಪ, ಗಂಗಾವತಿ, ಕಣವಿಹೊನ್ನಾಪುರ, ಹಂಚಿನಾಳ ಗ್ರಾಮಗಳಿಂದ ನೂರಾರು ಜಾನಪದ ಕಲಾವಿದರ ತಂಡಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ಇದರ ಜತೆಗೆ ಮಹಿಳೆಯ ಡೊಳ್ಳು ಕುಣಿತದ ತಂಡಗಳು ಭಾಗವಹಿಸಲಿವೆ ಎಂದರು.

ಹೋಳಿ ಹುಣ್ಣಿಮೆ ಆಚರಣೆಯ ಮಹತ್ವ ಸಾರುವ ಹಾನಗಲ್ ಕುಮಾರೇಶ್ವರ ಯುವಕ ಮಂಡಳದ ಸದಸ್ಯರು ಬೇಡರ ವೇಶದಲ್ಲಿ, ಹುಬ್ಬಳ್ಳಿಯ ಸ್ವರ್ಣ ಮಯೂರಿ ತಂಡದ ಸದಸ್ಯರು ಕಾಮಣ್ಣ ಹಾಗೂ ರತಿದೇವಿ ಕಲಾಕೃತಿ ಪ್ರದರ್ಶನ ಮಾಡಲಿದ್ದಾರೆ. ಇದರ ಜತೆಗೆ ಚಿಕ್ಕಮಕ್ಕಳಿಗಾಗಿ ಗೋರಿಲ್ಲಾ ಮತ್ತು ಕರಡಿ ಗೊಂಬೆಗಳ ಮೆರವಣಿಗೆ, ಈ ವರ್ಷ ವಿಶೇಷವಾಗಿ ಬೃಹತ್ ಗಾತ್ರದ ನಂದಿಯ ಮೇಲೆ ಕುಳಿತ ಭೋಲೆನಾಥ ಸವಾರಿಯ ನಾಗಾಸಾಧುಗಳ ವೇಷಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಮೂರುಸಾವಿರಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಕಳೆದ 13 ವರ್ಷಗಳಿಂದ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಭಾರತೀಯ ಕಲೆ, ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡು ಬರುತ್ತಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ಮುಂದಿನ ಪೀಳಿಗೆಯೂ ಆಚರಿಸುವಂತಾಗಲಿ. ಈ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲಿ ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಮೇಯರ್‌ ರಾಮಪ್ಪ ಬಡಿಗೇರ, ವಿಜಯಕುಮಾರ್ ಶೆಟ್ಟರ್, ಸತೀಶ ಶೇಜವಾಡಕರ್, ದತ್ತಮೂರ್ತಿ ಕುಲಕರ್ಣಿ, ಮಂಜುನಾಥ ಕಾಟಕರ್, ರವಿ ನಾಯ್ಕ ಸೇರಿದಂತೆ ಹಲವರಿದ್ದರು.