ಹುಬ್ಬಳ್ಳಿ ಕಾ ಮಹಾರಾಜಾನಿಗೆ ಬಂಗಾಳಿ ಕಲಾವಿದರ ಸ್ಪರ್ಶ

| Published : Aug 12 2025, 12:30 AM IST

ಸಾರಾಂಶ

ಮೂರ್ತಿ ತಯಾರಿಕೆಗೆ ಇ‍ವರು ಗಂಗಾ ನದಿಯ ಮರಳನ್ನೇ ಬಳಸುತ್ತಾರೆ. ಮೊದಲು ಸ್ಥಳೀಯ ಮಣ್ಣನ್ನು ಬಳಸಿ ಮೂರ್ತಿಗೆ ರೂಪ ನೀಡಲಾಗುತ್ತದೆ. ಈ ಭಾಗದಿಂದಲೇ ಜೇಡಿಮಣ್ಣನ್ನು ಸಂಗ್ರಹಿಸಿದ್ದೇವೆ. ಮರದ ಕೋಲು, ಬಿದುರು, ಒಣಗಿದ ಹುಲ್ಲು ಬಳಸಿ ವಿಗ್ರಹಗಳ ಮೂಲ ಆಕಾರವನ್ನು ತಯಾರಿಸುತ್ತೇವೆ. ನಂತರ ಗಂಗಾನದಿಯಿಂದ ತಂದ ಮಣ್ಣಿನಿಂದ ಅಂತಿಮ ರೂಪ ನೀಡಲಾಗುತ್ತದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಮೂಷಿಕ ವಾಹನ ಹೊಂದಿದ ಗಣೇಶನ ಸ್ವಾಗತಕ್ಕೆ ಎಲ್ಲಡೆ ಭರ್ಜರಿ ಸಿದ್ಧತೆ ನಡೆದಿದೆ. ಈ ಪೈಕಿ ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಹುಬ್ಬಳ್ಳಿ ಕಾ ರಾಜಾ ಗಣೇಶನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಹುಬ್ಬಳ್ಳಿ ಕಾ ಮಹಾರಾಜಾ ಮೂರ್ತಿ ತಯಾರಿಕೆ ಹೊಣೆಯನ್ನು ಪಶ್ಚಿಮ ಬಂಗಾಳದ ಅಪ್ಪು ಪಾಲ್ ಅವರ ಸಹೋದರ ಸ್ವಪನ್ ಪಾಲ್ ವಹಿಸಿದ್ದಾರೆ. ಪ್ರತಿಬಾರಿ ಅಪ್ಪು ಪಾಲ್‌ ಮುಂದೆ ನಿಂತು ಮೂರ್ತಿ ತಯಾರಿಸುತ್ತಿದ್ದರು. ಈ ಬಾರಿ ಅನಾರೋಗ್ಯದಿಂದಾಗಿ ಅವರು ಆಗಮಿಸಿಲ್ಲ. ಆದರೆ, ಮೊಬೈಲ್‌ ಮೂಲಕ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಹುಬ್ಬಳ್ಳಿಯೊಂದಿಗೆ ಸುಮಾರು 30 ವರ್ಷಗಳಿಂದ ನಂಟು ಹೊಂದಿರುವ ಈ ಪಾಲ್ ಸಹೋದರರು ಪ್ರತಿ ವರ್ಷ ನಾಲ್ಕೈದು ತಿಂಗಳು ಮೊದಲೇ ಮೂರ್ತಿ ತಯಾರಿಗೆಂದೇ ನಗರಕ್ಕೆ ಆಗಮಿಸುತ್ತಾರೆ. ಬೃಹತ್ ಮೂರ್ತಿಗಳನ್ನು ರೂಪಿಸುವುದರಲ್ಲಿ ನಿರತರಾದ ಇವರು ಪ್ರತಿ ಸಲವೂ ಬೇರೆ ಬೇರೆ ವಿನ್ಯಾಸಗಳಿಗೆ ಆದ್ಯತೆ ನೀಡುತ್ತಾರೆ.

ನಗರದಲ್ಲೇ ಮೂರ್ತಿ ತಯಾರಿಕೆ:

ಮೂರ್ತಿ ತಯಾರಿಕೆಗೆ ಇ‍ವರು ಗಂಗಾ ನದಿಯ ಮರಳನ್ನೇ ಬಳಸುತ್ತಾರೆ. ಮೊದಲು ಸ್ಥಳೀಯ ಮಣ್ಣನ್ನು ಬಳಸಿ ಮೂರ್ತಿಗೆ ರೂಪ ನೀಡಲಾಗುತ್ತದೆ. ಈ ಭಾಗದಿಂದಲೇ ಜೇಡಿಮಣ್ಣನ್ನು ಸಂಗ್ರಹಿಸಿದ್ದೇವೆ. ಮರದ ಕೋಲು, ಬಿದುರು, ಒಣಗಿದ ಹುಲ್ಲು ಬಳಸಿ ವಿಗ್ರಹಗಳ ಮೂಲ ಆಕಾರವನ್ನು ತಯಾರಿಸುತ್ತೇವೆ. ನಂತರ ಗಂಗಾನದಿಯಿಂದ ತಂದ ಮಣ್ಣಿನಿಂದ ಅಂತಿಮ ರೂಪ ನೀಡಲಾಗುತ್ತದೆ. ಗಂಗಾ ನದಿಯ ಮಣ್ಣು ಬಳಸಿದರೆ ಮೂರ್ತಿ ಪವಿತ್ರ್ಯವಾಗುತ್ತದೆ ಎನ್ನುತ್ತಾರೆ ಸ್ವಪನ್ ಪಾಲ್‌.

ಮೇ ತಿಂಗಳಲ್ಲೇ ಬಂಗಾಳದಿಂದ ಆಗಮಿಸಿರುವ 12 ಕಾರ್ಮಿಕರು ರಾತ್ರಿ, ಹಗಲು ಎನ್ನದೇ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದ ಸ್ಪಪನ್ ಪಾಲ್ ಅವರು ಮರಾಠಗಲ್ಲಿಯ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ವಿವಿಧ ಗಾತ್ರದ ಸುಮಾರು 40 ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ.

3 ರಿಂದ 25 ಅಡಿ ಎತ್ತರದ ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ಹುಬ್ಬಳ್ಳಿಯಲ್ಲಿ ಮೂರ್ತಿಗಳನ್ನು ತಯಾರಿಸುವುದು ನಮಗೆ ಖುಷಿ ತರುತ್ತದೆ. ನಾವು ತಯಾರು ಮಾಡಿರುವ ಗಣಪತಿಗಳನ್ನು ವಿವಿಧ ಜಿಲ್ಲೆಗಳ ಗಣೇಶೋತ್ಸವ ಮಂಡಳಿಯವರು ಒಯ್ದು ಪ್ರತಿಷ್ಠಾಪಿಸುತ್ತಾರೆ. ಈ ಬಾರಿ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿದೆ. ಇದರಿಂದಾಗಿ ಮೂರ್ತಿ ತಯಾರಿಕಾ ವೆಚ್ಚ ಪ್ರತಿಬಾರಿಗಿಂತ ಹೆಚ್ಚಾಗಿದೆ. ನಾವು ತಯಾರಿಸಿದ ಮೂರ್ತಿಗಳನ್ನು ಇಲ್ಲಿನ ಜನ ಖುಷಿಯಿಂದ ಖರೀದಿಸುತ್ತಾರೆ, ಪೂಜಿಸುತ್ತಾರೆ. ಇದು ನಮಗೆ ಖುಷಿ ಕೊಡುತ್ತದೆ ಎನ್ನುತ್ತಾರೆ ಸ್ಪಪನ್ ಪಾಲ್.

25 ಅಡಿಯ ಮೂರ್ತಿ: ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗುವ ಗಜಕಾಯದ ಗಣಪತಿಯು 25 ಅಡಿ ಎತ್ತರವಿದೆ. ಸಂಪೂರ್ಣ ಮಣ್ಣಿನಿಂದ ತಯಾರಿಸಿದ ಮೂರ್ತಿ ಇದಾಗಿದ್ದು, ಪರಿಸರ ಸ್ನೇಹಿಯಾಗಿದೆ.

ನಮ್ಮದು ಕಲಾವಿದರ ಕುಟುಂಬ. ಮೂವರು ಸಹೋದರರಿದ್ದೇವೆ. ಮೂವರೂ ಮೂರ್ತಿ ತಯಾರಿಕೆಯಲ್ಲೇ ತೊಡಗಿಸಿಕೊಂಡಿದ್ದೇವೆ. ನನ್ನ ತಂದೆ ಕೂಡ ಪ್ರಸಿದ್ಧ ವಿಗ್ರಹ ತಯಾರಕರಾಗಿದ್ದರು. ಈ ಬಾರಿ ಸಹೋದರ ಅಪ್ಪು ಪಾಲ್‌ ಅನಾರೋಗ್ಯದಿಂದಾಗಿ ಹೆಚ್ಚಿನ ವಿಗ್ರಹಗಳಿಗೆ ಬೇಡಿಕೆ ಇದ್ದರೂ ನಮಗೆ ಮಾಡಲು ಸಾಧ್ಯವಾಗಿಲ್ಲ ಎಂದು ಮೂರ್ತಿ ತಯಾರಕ ಸ್ವಪನ್ ಪಾಲ್ ಹೇಳಿದರು.