ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸದ್ಗುರು ಶ್ರೀ ಸಿದ್ಧಾರೂಢರ ಹೆಸರಿನಿಂದಲೇ ಇಂದು ಹುಬ್ಬಳ್ಳಿ ವಿಶ್ವವಿಖ್ಯಾತಿಯಾಗಿದೆ. ಆರೂಢರ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇರಿಸುವ ಮೂಲಕ ಕೇಂದ್ರ ಸರ್ಕಾರ ಹುಬ್ಬಳ್ಳಿಗೆ ಮೆರಗು ತಂದಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.ಮಂಗಳವಾರ ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಶಾಂತಾಶ್ರಮದ ಸಮಾಧಿ ಮಂದಿರ, ಮಹಾದ್ವಾರ, ಶಿವಪುತ್ರ ಶ್ರೀಗಳ ಹಾಗೂ ಅಭಿನವ ಶಿವಪುತ್ರ ಶ್ರೀಗಳ ಅಮೃತಶಿಲಾ ಮೂರ್ತಿ ಸ್ಥಾಪನೆ. ಸಮಗ್ರ ಟೀಕಾ ಸಾಹಿತ್ಯ, ಕಲಾನಿಕೇತನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ಧಾರೂಢರು ಭಕ್ತರ ಉದ್ಧಾರದಲ್ಲಿಯೇ ದೇವರನ್ನು ಕಂಡವರು. ಅವರ ತತ್ವ, ಆದರ್ಶಗಳನ್ನು ಇಂದಿನ ಯುವಪೀಳಿಗೆ ಅರ್ಥೈಸಿಕೊಳ್ಳುವ ಕಾರ್ಯವಾಗಬೇಕಿದೆ. ಹಾಗೆಯೇ ಆರೂಢರ ಪರಂಪರೆಯನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿರುವ ಶಿವತ್ರಯರಾದ ಶಾಂತಾಶ್ರಮದ ಶಿವಪುತ್ರ ಶ್ರೀಗಳ, ಅಭಿನವ ಶಿವಪುತ್ರ ಶ್ರೀಗಳು, ಬಿದರಿನ ಚಿದಂಬರಾಶ್ರಮದ ಡಾ. ಶಿವಕುಮಾರ ಶ್ರೀಗಳು ಹಾಗೂ ಅಭಿನವ ಸಿದ್ಧಾರೂಢ ಶ್ರೀಗಳ ಕಾರ್ಯ ಮಾದರಿಯಾದುದು ಎಂದರು.ಗುರುವಿನ ಮಾತು ಮಂತ್ರವಿದ್ದಂತೆ. ಶಿಷ್ಯರು, ಭಕ್ತರು ಗುರುಗಳು ಹೇಳುವ ಮಾತುಗಳನ್ನು ಆಲಿಸುವುದರೊಂದಿಗೆ ಅದರ ಪಾಲನೆಗೆ ಒತ್ತು ನೀಡಬೇಕು. ಪ್ರತಿಯೊಬ್ಬರೂ ಆರೂಢರ ಆದರ್ಶಗಳ ಕುರಿತು ಅರಿತುಕೊಳ್ಳುವ ಮೂಲಕ ಅವರ ಸಂದೇಶವನ್ನು ಪ್ರಚಾರ ಮಾಡುವ ಕಾರ್ಯ ನಡೆಯಲಿ ಎಂದರು.
ಸಮಾಧಿ ಮಂದಿರ ಲೋಕಾರ್ಪಣೆಗೊಳಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದ ಶ್ರೀಗಳು ಆಶೀರ್ವಚನ ನೀಡಿ, ಬದುಕಿನಲ್ಲಿ ಜ್ಞಾನ ಬರಬೇಕಾದರೆ ಶಿಸ್ತು ಅತ್ಯವಶ್ಯ. ಶಿವಪುತ್ರ ಶ್ರೀಗಳು ಭಕ್ತರು ಹೇಗಿರಬೇಕು ಎಂಬ ಶಿಸ್ತು ಕಲಿಸಿದವರು. ಅದೇ ಕಾರಣಕ್ಕಾಗಿ ಇಂದು ಸಾವಿರಾರು ಸಂಖ್ಯೆಯ ಭಕ್ತರು ಈ ಕಾರ್ಯಕ್ರಮಕ್ಕೆ ಸೇರಿರುವುದೇ ಸಾಕ್ಷಿ. ಉದ್ಘಾಟನಾ ಕಾರ್ಯಕ್ರಮದ ಹೆಸರಿನಲ್ಲಿ ನಾಡಿನ ಹಲವು ಶ್ರೀಗಳನ್ನು ಒಂದೆಡೆ ಸೇರಿಸಿ ಧರ್ಮಸಂದೇಶ ನೀಡುವ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹವಾಗಿದೆ ಎಂದರು.ಮಹಾದ್ವಾರ ಲೋಕಾರ್ಪಣೆಗೊಳಿಸಿದ ಸುತ್ತೂರು ಮಠದ ಡಾ. ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಆಶೀರ್ವಚನ ನೀಡಿ, ಆಧ್ಯಾತ್ಮಿಕ ಬದುಕು ಸಾಗಿಸಲು ಗುರುವಿನ ಆಶ್ರಯ ಅವಶ್ಯಕವಾದುದು. ಇಂದು ಮನುಷ್ಯನು ಒಂದೇ ದೇಹದಲ್ಲಿ ಒಂದಕ್ಕಿಂತ ಹೆಚ್ಚು ಆಸೆ, ಉದ್ದೇಶಗಳನ್ನು ಹೊಂದಿದರೆ ಅಂತಹ ಮನಸ್ಸುಗಳಿಗೆ ಧರ್ಮಸಂದೇಶ ನೀಡಿದರೆ ಹೇಗೆ ಉದ್ಧರಿಸಲು ಸಾಧ್ಯ. ಹಾಗಾಗಿ ಮೊದಲು ನಮ್ಮ ಮನಸ್ಸುಗಳನ್ನು ಶುದ್ಧವಾಗಿಸಿಕೊಳ್ಳಬೇಕು. ನಂತರ ಮಹನೀಯರ ಸಂದೇಶಗಳನ್ನು ಆಲಿಸಿ ಅದರಂತೆ ಜೀವನದಲ್ಲಿ ಬಾಳಲು ಕರೆ ನೀಡಿದರು.
ಸಮಗ್ರ ಸಾಹಿತ್ಯ ಲೋಕಾರ್ಪಣೆಗೊಳಿಸಿದ ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಶ್ರೀಗಳು, ಶಾಂತಿಕುಂಜ ಲೋಕಾರ್ಪಣೆಗೊಳಿಸಿದ ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಡಾ. ಷಡಕ್ಷರಿ ಮುರುಘರಾಜೇಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಶ್ರೀಗಳ ನೇತೃತ್ವದಲ್ಲಿ ಎಲ್ಲ ಮಠಾಧೀಶರಿಗೆ ಪಾದಪೂಜೆ, ಸನ್ಮಾನ ಕಾರ್ಯಕ್ರಮ ನೆರವೇರಿತು.7ಎಚ್‌ಯುಬಿ32, 33, 34ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಮಠಾಧೀಶರಿಗೆ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಶ್ರೀಗಳ ನೇತೃತ್ವದಲ್ಲಿ ಪಾದಪೂಜೆ ನೆರವೇರಿತು.7ಎಚ್‌ಯುಬಿ35
ಹುಬ್ಬಳ್ಳಿಯ ಸಿದ್ಧಾರೂಢ ಮಠದ ಶಾಂತಾಶ್ರಮದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತಸಮೂಹ.