ಹುಬ್ಬಳ್ಳಿ-ಬೆಳಗಾವಿ ರೈಲ್ವೆ - ಶೀಘ್ರವೇ ಭೂಮಿ ಹಸ್ತಾಂತರ : ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ

| Published : Dec 09 2024, 12:50 AM IST / Updated: Dec 09 2024, 11:04 AM IST

ಹುಬ್ಬಳ್ಳಿ-ಬೆಳಗಾವಿ ರೈಲ್ವೆ - ಶೀಘ್ರವೇ ಭೂಮಿ ಹಸ್ತಾಂತರ : ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ರೈಲ್‌ ಸೌಧದಲ್ಲಿ ಪ್ರಗತಿಪರಿಶೀಲನೆ ಸಭೆ ನಡೆಸಿದ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಹುಬ್ಬಳ್ಳಿ: ಧಾರವಾಡ- ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕೆ ಜನವರಿ ಒಳಗಾಗಿ ಶೇ. 90 ಭೂಮಿ ಹಸ್ತಾಂತರವಾಗಲಿದೆ. ಜೂನ್ ವೇಳೆಗೆ ಪರಿಷ್ಕೃತ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲು ಸೂಚಿಸಲಾಗಿದೆ. ಹುಬ್ಬಳ್ಳಿ- ಶಿರಸಿ- ತಾಳಗುಪ್ಪ ನೂತನ ರೈಲು ಮಾರ್ಗದ ಸ್ಥಳ ಸಮೀಕ್ಷೆ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಇಲ್ಲಿನ ರೈಲ್‌ ಸೌಧದಲ್ಲಿ ಪ್ರಗತಿಪರಿಶೀಲನೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ 550 ಎಕರೆ ಹಾಗೂ ಧಾರವಾಡ ಜಿಲ್ಲೆಯ 272 ಎಕರೆ ಭೂಮಿಯನ್ನು ಜನವರಿ ಅಂತ್ಯದಲ್ಲಿ ಹಸ್ತಾಂತರಿಸುವುದಾಗಿ ಜಿಲ್ಲಾಡಳಿತಗಳು ಭರವಸೆ ನೀಡಿವೆ. ಇದರೊಂದಿಗೆ ಶೇ. 90ರಷ್ಟು ಭೂಮಿ ದೊರೆತಂತಾಗಲಿದ್ದು, ಪರಿಷ್ಕೃತ ಡಿಪಿಆರ್ ತಯಾರಿಸಿ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಬಳಿಕ ಟೆಂಡರ್‌ ಕರೆದು ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ತಾಳಗುಪ್ಪ- ಹುಬ್ಬಳ್ಳಿ

ಮಲೆನಾಡು ಜನರ ಬಹುಬೇಡಿಕೆಯ ತಾಳಗುಪ್ಪ -ಶಿರಸಿ- ಹುಬ್ಬಳ್ಳಿ ಮಾರ್ಗದ ನಿರ್ಮಾಣ ಸಮೀಕ್ಷೆ ಮುಗಿದಿದೆ. ಸ್ಥಳ ಸಮೀಕ್ಷೆ ನಡೆಸಲಾಗುತ್ತಿದೆ. ಜೂನ್‌- ಜುಲೈನಲ್ಲಿ ಡಿಪಿಆರ್‌ ಸಲ್ಲಿಸುವಂತೆ ತಿಳಿಸಲಾಗಿದೆ. 165 ಕಿಮೀ ಅಂತರದ ಈ ಮಾರ್ಗದಿಂದ, ಉತ್ತರ ಕರ್ನಾಟಕ ಹಾಗೂ ಮಲೆನಾಡು ಸಂಪರ್ಕ ಸಾಧ್ಯವಾಗಲಿದೆ. ಈ ಮಾರ್ಗದಲ್ಲಿ ತಾಳಗುಪ್ಪ, ಕವಚೂರು, ಸಿದ್ದಾಪುರ, ಮಂಡಿಕೊಪ್ಪ, ತಾಳಗುಂಡ, ಬಿದರಹಳ್ಳಿ, ಶಿರಸಿ, ಅಂಚಹಳ್ಳಿ, ಹರಗನಹಳ್ಳಿ, ಪಾಳಾ, ಸಿದ್ದನಕೊಪ್ಫ, ಮುಂಡಗೋಡ, ತಡಸ, ಬೆಳಗಲಿ ಮಾರ್ಗವಾಗಿ ಹುಬ್ಬಳ್ಳಿಗೆ ಜೋಡಣೆಯಾಗಲಿದೆ ಎಂದು ವಿವರಿಸಿದರು.

ರಾಜ್ಯದ ಬಹುತೇಕ ರೈಲ್ವೆ ಕೆಳಸೇತುವೆಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹಗೊಂಡು ಭಾರೀ ಸಮಸ್ಯೆ ತಲೆದೋರುತ್ತಿದೆ. ಇದಕ್ಕೆ ಇತಿಶ್ರೀ ಹಾಡಲು ನೀರು ಹರಿದು ಹೋಗಲು ರೈಲ್ವೆಯಿಂದಲೇ ಪ್ರತ್ಯೇಕ ಯುಜಿಡಿ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ. ಸಮಸ್ಯಾತ್ಮಕ ಕೆಳಸೇತುವೆಗಳ ಪಟ್ಟಿ ಕಾಮಗಾರಿ ವೆಚ್ಚ ಅಂದಾಜಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ-ಅಜ್ಮೀರ ಹೊಸ ರೈಲು

ಹುಬ್ಬಳ್ಳಿ- ಅಜ್ಮೀರ ಮಧ್ಯೆ ಹೊಸ ರೈಲು ಓಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅದೇ ರೀತಿ ವಾರಕ್ಕೊಮ್ಮೆ ಸಂಚರಿಸುವ ಹುಬ್ಬಳ್ಳಿ-ವಾರಾಣಸಿ ರೈಲನ್ನು ವಾರಕ್ಕೆರಡು ಬಾರಿ ಸಂಚಾರಕ್ಕೆ ಅವಕಾಶ ಕೊಡಲು ಸೂಚಿಸಲಾಗಿದೆ. ಆಮೆವೇಗದ ಅಣ್ಣಿಗೇರಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಚುರುಕುಗೊಳಿಸಲು ತಿಳಿಸಲಾಗಿದೆ ಎಂದರು.

ಮೆಮೊ ಟ್ರೇನ್

ರೈಲು ಮಾರ್ಗವನ್ನು ಬ್ರಾಡ್‌ಗೇಜ್ ಪರಿವರ್ತಿಸಿದ ಬಳಿಕ ಸ್ಥಳೀಯ ಪ್ಯಾಸೆಂಜರ್ ಟ್ರೇನ್‌ಗಳ ಸಂಚಾರ ಬಹುತೇಕ ನಿಂತು ಹೋಗಿವೆ. ಇದರಿಂದ ನಗರ, ಪಟ್ಟಣ, ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ತೊಂದರೆಯಾಗಿದೆ ಎಂಬುದು ಗಮನಕ್ಕೆ ಬಂದಿದೆ. ಹುಬ್ಬಳ್ಳಿ-ಧಾರವಾಡ ಮಧ್ಯೆಯೂ ಮೆಮೋ ಟ್ರೈನ್‌ ಓಡಿಸುವಂತೆ ಇಲ್ಲಿನ ಜನಪ್ರತಿನಿಧಿಗಳು ತಿಳಿಸಿದ್ದಾರೆ. ಅದೇ ರೀತಿ ಗದಗ- ಧಾರವಾಡ ಹೀಗೆ ವಿವಿಧೆಡೆ ಮೆಮೋ ರೈಲುಗಳ ಓಡಾಟಕ್ಕೆ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಲು ಮೆಮೋ ಟ್ರೇನ್‌ಗಳನ್ನು ಓಡಿಸುವ ಕುರಿತಾಗಿ ಕಾರ್ಯಸಾಧ್ಯತೆಗಳ ವರದಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವರದಿಯನ್ನು ಶೀಘ್ರ ರೈಲ್ವೆ ಮಂಡಳಿಗೆ ಸಲ್ಲಿಸುವಂತೆಯೂ ತಿಳಿಸಲಾಗಿದೆ ಎಂದು ಹೇಳಿದರು.

ಶೀಘ್ರದಲ್ಲೇ ವಂದೇ ಭಾರತ್ ರೈಲ್‌ನಲ್ಲಿ ಸ್ಲೀಪರ್ ಕೋಚ್‌ಗಳ ಒಳಗೊಂಡ ರೈಲನ್ನು ಪರಿಚಯಿಸಲಾಗುತ್ತಿದೆ ಎಂದು ಸ್ಪಷ್ಪಪಡಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರವಿಂದ ಬೆಲ್ಲದ, ಎಂ.ಆರ್‌.ಪಾಟೀಲ, ಮಹೇಶ ಟೆಂಗಿನಕಾಯಿ, ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಹುಬ್ಬಳ್ಳಿ- ಅಂಕೋಲಾ

ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಕುರಿತಂತೆ ಬಹುತೇಕ ಎಲ್ಲ ತಾಂತ್ರಿಕ ಅಡೆತಡೆಗಳು ಶೀಘ್ರದಲ್ಲೇ ಬಗೆಹರಿಯಲಿವೆ. ಅದಕ್ಕಾಗಿ ಈ ಯೋಜನೆಗೆ ಸಂಬಂಧಪಟ್ಟಂತೆಯೂ ಡಿಪಿಆರ್‌ ಸಿದ್ಧಪಡಿಸಲು ಸೂಚಿಸಲಾಗಿದೆ. ವನ್ಯಜೀವಿಗಳ ಓಡಾಟಕ್ಕೆ ಸಂಬಂಧಪಟ್ಟಂತೆ ವನ್ಯಜೀವಿ ಮಂಡಳಿಯಿಂದ ವರದಿ ಕೇಳಿದ್ದು, ಅದನ್ನು ಕೊಡಲಾಗುವುದು. ಶೀಘ್ರದಲ್ಲೇ ಹುಬ್ಬಳ್ಳಿ- ಅಂಕೋಲಾ ಮಾರ್ಗ ನಿರ್ಮಾಣದ ಸಮಸ್ಯೆಯೂ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.