ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ ಕಾಮಗಾರಿ ಶೇ. 25ರಷ್ಟು ಬಾಕಿ

| Published : Nov 13 2025, 01:00 AM IST

ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ ಕಾಮಗಾರಿ ಶೇ. 25ರಷ್ಟು ಬಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವು ತಾಂತ್ರಿಕ ಕಾರಣಗಳಿಂದ ರಸ್ತೆ ಅಗಲೀಕರಣ ಕಾಮಗಾರಿಯು ವಿಳಂಬವಾಗಿದ್ದು, ಇಷ್ಟಾಗಿಯೂ ಆದಷ್ಟು ಶೀಘ್ರ ಕಾಮಗಾರಿ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಧಾರವಾಡ:

ಕಿಲ್ಲರ್‌ ಬೈಪಾಸ್‌ ಎಂದೇ ಖ್ಯಾತಿ ಪಡೆದಿದ್ದ ಇಲ್ಲಿಯ ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ ಅಗಲೀಕರಣ ಕಾಮಗಾರಿ ಶೇ. 75ರಷ್ಟು ಮುಕ್ತಾಯವಾಗಿದ್ದು ಇನ್ನೂ ಶೇ. 25ರಷ್ಟು ಬಾಕಿ ಇದೆ. 2026ರ ಮಾರ್ಚ್‌ಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಭರವಸೆ ನೀಡಿದರು.

ಬುಧವಾರ ಬೈಪಾಸ್‌ ರಸ್ತೆ ಅಗಲೀಕರಣ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವಿವಿಧೆಡೆ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ತಾಂತ್ರಿಕ ಕಾರಣಗಳಿಂದ ರಸ್ತೆ ಅಗಲೀಕರಣ ಕಾಮಗಾರಿಯು ವಿಳಂಬವಾಗಿದ್ದು, ಇಷ್ಟಾಗಿಯೂ ಆದಷ್ಟು ಶೀಘ್ರ ಕಾಮಗಾರಿ ಮುಕ್ತಾಯಗೊಳಿಸಿ ರಸ್ತೆಯನ್ನು ಸಾರ್ವಜನಿಕಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

₹ 580 ಕೋಟಿ ಯೋಜನೆ:

2023ರ ಮಾರ್ಚ್‌ ತಿಂಗಳಿಂದ ಬೈಪಾಸ್‌ ರಸ್ತೆಯ ಕಾಮಗಾರಿ ಶುರುವಾಗಿದ್ದು, ಒಟ್ಟು ₹ 580 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಮಳೆಗಾಲದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2026ರ ಮಾರ್ಚ್ ವರೆಗೂ ಹೆಚ್ಚುವರಿ ಗಡುವು ಕೇಳಿದ್ದಾರೆ. ಆದರೆ, ಇನ್ನೂ ಒಪ್ಪಿಗೆ ಸಿಕ್ಕಿಲ್ಲ ಎಂದ ಅವರು, ರಸ್ತೆ ಅಗಲೀಕರಣಕ್ಕೆ ಒಟ್ಟು 62 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರ, ರೈತರ ಬೇಡಿಕೆ ಮೇಲೆ ಕೆಲವು ಕಡೆಗಳಲ್ಲಿ ಸರ್ವೀಸ್‌ ರಸ್ತೆ ವಿಸ್ತರಿಸುವ ಉದ್ದೇಶದಿಂದ ಹೆಚ್ಚುವರಿ 23 ಎಕರೆ ಭೂಸ್ವಾಧೀನ ಮಾಡಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.ಗುಣಮಟ್ಟ ಕಾಯ್ದು ಕಾಮಗಾರಿ:

ಹಲವು ವರ್ಷ ಈ ರಸ್ತೆ ಉಳಿಯಬೇಕಾದ ಹಿನ್ನೆಲೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಹೋಗಲು ಈ ವೀಕ್ಷಣೆ ಮಾಡಲಾಗುತ್ತಿದೆ. ಈ ರಸ್ತೆ ಕಾಮಗಾರಿ ವೇಳೆ ಮಳೆ ನೀರು ಬಂದು ರಸ್ತೆ ಕಿತ್ತು ಹೋಗಿರುವ ಹಾಗೂ ಕುಸಿದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಅವುಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿ ಸರಿಪಡಿಸಲಾಗಿದೆ. ಇಷ್ಟಾಗಿಯೂ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಬರದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದರು.

ಈ ವೇಳೆ ತಹಸೀಲ್ದಾರ್‌ ಡಿ.ಎಚ್‌. ಹೂಗಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿದ್ದರು.