ಹುಬ್ಬಳ್ಳಿ: ಮತ್ತೆ ಮೊಳಗಿದ ಗುಂಡಿನ ಸದ್ದು

| Published : Aug 03 2024, 12:30 AM IST

ಸಾರಾಂಶ

ದರೋಡೆ ಪ್ರಕರಣದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಮಹಜರು ಮಾಡಲು ಕರೆದುಕೊಂಡು ಹೋದ ವೇಳೆ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್‌ ಫೈರಿಂಗ್‌

ಹುಬ್ಬಳ್ಳಿ:

ಕಳೆದ ವಾರವಷ್ಟೇ ದರೋಡೆಕೋರನ ಮೇಲೆ ಗುಂಡು ಹಾರಿಸಿದ್ದ ಬೆನ್ನಲ್ಲೇ ಮತ್ತೊಂದು ಅಂಥ ಪ್ರಕರಣ ಶುಕ್ರವಾರ ಬೆಳಗಿನ ಜಾವ ನಗರದಲ್ಲಿ ನಡೆದಿದೆ. ದರೋಡೆ ಪ್ರಕರಣದ ಮಹಜರು ನಡೆಸಲು ಹೋಗಿದ್ದ ವೇಳೆ ಪೊಲೀಸರ ಮೇಲೆಯೇ ಕಲ್ಲು ತೂರಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಈ ಘಟನೆಯಲ್ಲಿ ಆರೋಪಿ ಬಲಗಾಲಿಗೆ ಗುಂಡೇಟು ತಗುಲಿದರೆ, ಈತನ ಹಲ್ಲೆಯಿಂದ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು ಮೂವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ದರೋಡೆ ಮತ್ತು ಸುಲಿಗೆ ಪ್ರಕರಣದ ಆರೋಪಿ ಹುಬ್ಬಳ್ಳಿ ನೇಕಾರನಗರದ ಅರುಣ ಅಲಿಯಾಸ್‌ ಸೋನು ನಾಯ್ಕ ಗುಂಡೇಟು ತಿಂದ ಆರೋಪಿ. ಉಪನಗರ ಠಾಣೆ ವ್ಯಾಪ್ತಿಯ ಚೆನ್ನಮ್ಮ ವೃತ್ತದ ಬಳಿ ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಲದ ವ್ಯಕ್ತಿಯ ಚೈನು, ಉಂಗುರ, ಪೋನ್‌, ಹಣ ದರೋಡೆ ಮಾಡಿದ ಪ್ರಕರಣ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಉಪನಗರ ಠಾಣೆಯ ಪೊಲೀಸರು, ಒಬ್ಬಾತನನ್ನು ಬಂಧಿಸಿದ್ದರು.

ಪ್ರಕರಣದಲ್ಲಿ ಮತ್ತೆ ಕೆಲವರು ಭಾಗಿಯಾಗಿರುವ ಮಾಹಿತಿಯನ್ನು ಆರೋಪಿ ನೀಡಿದ್ದ. ಆತನನ್ನು ಮಹಜರಿಗಾಗಿ ಎಂಟಿಎಸ್‌ ಕಾಲನಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸರ ಗಮನ ಬೇರೆಡೆ ಸೆಳೆದು ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಇನ್‌ಸ್ಪೆಕ್ಟರ್‌ ಎಂ.ಎಸ್‌. ಹೂಗಾರ ಅವರು ಮೊದಲಿಗೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಮತ್ತೆ ಎರಡು ಸುತ್ತು ಆತನಿಗೆ ನೇರವಾಗಿ ಗುಂಡು ಹೊಡೆದಿದ್ದಾರೆ. ಒಂದು ಗುಂಡು ಈತನ ಬಲಗಾಲಿಗೆ ಬಿದ್ದಿದೆ. ಆ ಬಳಿಕ ಆತನನ್ನು ಬಂಧಿಸಿದ್ದಾರೆ. ಈತನ ಹಲ್ಲೆಯಿಂದ ಪೊಲೀಸ್‌ ಸಿಬ್ಬಂದಿಗಳಾದ ಡಿ.ಆರ್. ಪಮ್ಮಾರ, ತರುಣ ಗಡ್ಡದವರ ಎಂಬಿಬ್ಬರಿಗೆ ಗಾಯಗಳಾಗಿವೆ. ಆರೋಪಿ ಅರುಣ ಹಾಗೂ ಪೊಲೀಸ್‌ ಸಿಬ್ಬಂದಿಗಳನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಏನಿದು ಘಟನೆ:

ಪಶ್ಚಿಮ ಬಂಗಾಳದ ಪ್ರಣವ ಸವದತ್ತಿಯಲ್ಲಿ ಚಿನ್ನಾಭರಣ ಮಾಡುವ ವೃತ್ತಿ ಮಾಡಿಕೊಂಡಿದ್ದ. ಈತ ಪಶ್ಚಿಮ ಬಂಗಾಳಕ್ಕೆ ಆಗಾಗ ಹೋಗಿ ಬರುತ್ತಿದ್ದ. ಇತ್ತೀಚಿಗೆ ಕೂಡ ಈತ ತಮ್ಮ ತವರಿಗೆ ರೈಲಿನಲ್ಲಿ ಹೋಗಲು ಹುಬ್ಬಳ್ಳಿಗೆ ಆಗಮಿಸಿದ್ದ. ಈ ವೇಳೆ ಅರುಣ ಸೇರಿದಂತೆ ನಾಲ್ವರು ಆಟೋದಲ್ಲಿ ಬಂದು ಆತನಿಗೆ ಹೆಣ್ಮಕ್ಕಳನ್ನು ಕೊಡಿಸುತ್ತೇವೆ ಬೇಕಾ ಎಂದು ಕೇಳಿದ್ದಾರೆ. ಅದಕ್ಕೆ ಆತ ಕೂಡ ಒಪ್ಪಿಗೆ ಸೂಚಿಸಿದ್ದಾನೆ. ಆತನನ್ನು ಲಾಡ್ಜ್‌ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೇಶ್ಯೆಯ ದರ ಹೆಚ್ಚಾಗಿದ್ದರಿಂದ ಈತ ಲಾಡ್ಜ್‌ನಿಂದ ಹೊರ ಬಂದಿದ್ದಾನೆ. ಜತೆಗೆ ಊರ ಹೊರವಲಯದಲ್ಲಿ ನೀವು ಹೇಳಿದ ದರಕ್ಕೆ ವೇಶ್ಯೆಯನ್ನು ಕೊಡಿಸಲಾಗುವುದು ಎಂದು ಹೇಳಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ಆತನಿಗೆ ಚಾಕುವಿನಿಂದ ಹೆದರಿಸಿ ಹಲ್ಲೆ ನಡೆಸಿ ಆತನ ಬಳಿ ಇದ್ದ ಬಂಗಾರ ಚೈನು, ಉಂಗುರ, ಮೊಬೈಲ್‌, ₹ 10 ಸಾವಿರ ನಗದು ಕಸಿದುಕೊಂಡು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಆಗ ಪ್ರಣವ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಪ್ರಕರಣದ ತನಿಖೆ ನಡೆಸಿ ಅರುಣ ಅಲಿಯಾಸ್‌ ಸೋನು ನಾಯ್ಕನನ್ನು ಪೊಲೀಸರು ಬಂಧಿಸಿದ್ದರು.

ಮತ್ತೊಬ್ಬನ ಬಂಧನ:

ಈ ಪ್ರಕರಣದಲ್ಲಿ ದರೋಡೆ ಮಾಡಿದ ಇನ್ನೂ ಮೂವರ ಪೈಕಿ ಮತ್ತೊಬ್ಬನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಜತೆಗೆ ಇವರು ಯಾವ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದರೋ ಆ ಲಾಡ್ಜ್‌ನ ಮ್ಯಾನೇಜರ್‌ ಹಾಗೂ ಒಬ್ಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

13 ಪ್ರಕರಣ:

ಪೊಲೀಸರ ಗುಂಡೇಟು ತಿಂದು ಗಾಯಗೊಂಡಿರುವ ಅರುಣನ ಮೇಲೆ ಕಮರಿಪೇಟೆ, ಹಳೇಹುಬ್ಬಳ್ಳಿ, ಕಸಬಾಪೇಟೆ, ಉಪನಗರ ಸೇರಿದಂತೆ 5 ಠಾಣೆಗಳಲ್ಲಿ ಒಟ್ಟು 13 ಪ್ರಕರಣ ದಾಖಲಾಗಿವೆ. ಇವರದೊಂದು ದೊಡ್ಡ ಜಾಲವೇ ಇದೆ. ಪರಸ್ಥಳದಿಂದ ಬಂದು ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಅಡ್ಡಾಡುತ್ತಿದ್ದವರೇ ಇವರಿಗೆ ಟಾರ್ಗೇಟ್‌. ಅವರಿಗೆ ಹೆಣ್ಮಕ್ಕಳನ್ನು ಕೊಡಿಸುತ್ತೇವೆ ಎಂದ್ಹೇಳಿ ಕರೆದುಕೊಂಡು ಬಂದು ಲಾಡ್ಜ್‌ಗೆ ಬಿಡುತ್ತಿದ್ದರೆನ್ನಲಾಗಿದೆ. ದುಡ್ಡು ಇದೆ ಎಂದು ಗೊತ್ತಾಗುತ್ತಿದ್ದಂತೆ ದೂರ ಕರೆದುಕೊಂಡು ಹೋಗಿ ಹೆದರಿಸಿ ದುಡ್ಡು, ಚಿನ್ನಾಭರಣ ಸುಲಿಗೆ ಮಾಡುತ್ತಿದ್ದರು. ಇದನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದರಂತೆ. ಒಂದೇ ತಿಂಗಳಲ್ಲಿ ಆರೇಳು ಇದೇ ರೀತಿ ಕೃತ್ಯಗಳನ್ನು ಎಸಗಿದ್ದಾರಂತೆ.ವೇಶ್ಯಾವಾಟಿಕೆ ಹೆಸರಿನಲ್ಲಿ ದರೋಡೆ ಮತ್ತು ಸುಲಿಗೆ ನಡೆಸುತ್ತಿದ್ದ ಗ್ಯಾಂಗ್‌ ಇದು. ಆರೋಪಿ ಅರುಣ ಬಂಧಿಸಿದಾಗ ಆತ ಪೊಲೀಸರ ಮೇಲೆಯೇ ದಾಳಿ ಮಾಡಿದ್ದಾನೆ. ಆಗ ಆತನ ಮೇಲೆ ಫೈರಿಂಗ್‌ ಮಾಡಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಯಾರ್‍ಯಾರಿದ್ದಾರೆ ಎಲ್ಲರನ್ನು ಬಂಧಿಸಲಾಗುವುದು ಎಂದು ಪೊಲೀಸ್‌ ಕಮಿಷನರ್ ಎನ್‌. ಶಶಿಕುಮಾರ ಹೇಳಿದ್ದಾರೆ.