ಸಾರಾಂಶ
ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಬ್ಬಳ್ಳಿ:
ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ವಿವಿಧ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದಲೇ ರಸ್ತೆಗಿಳಿದ ಪ್ರತಿಭಟನಾಕಾರರು, ಬಸ್ ಸಂಚಾರ ಸ್ಥಗಿತಗೊಳಿಸಿದರು. ಅಲ್ಲಲ್ಲಿ ಓಡಾಡುತ್ತಿದ್ದ ಆಟೋ, ಬೈಕ್, ಕಾರಿನ ಚಕ್ರದ ಗಾಳಿ ತೆಗೆದರು. ಬಳಿಕ ಹಳೇಹುಬ್ಬಳ್ಳಿ, ದುರ್ಗದಬೈಲ್, ಗಬ್ಬೂರ ಕ್ರಾಸ್, ತಾರಿಹಾಳ ಕ್ರಾಸ್ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿದ್ದರಿಂದ ರಸ್ತೆಗಳೂ ಬಿಕೋ ಎನ್ನುತ್ತಿದ್ದವು.
ಶಾಲಾ-ಕಾಲೇಜು, ಚಿತ್ರಮಂದಿರ, ಬ್ಯಾಂಕ್, ಮಾಲ್ ಬಾಗಿಲು ಮುಚ್ಚಿದ್ದವು. ಬಂದ್ ಮಾಹಿತಿ ಅರಿಯದೇ ಬೇರೆ ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಸಂಜೆ ವರೆಗೂ ಕಾಯ್ದರು. ಕೆಲವರು ರೈಲ್ವೆ ನಿಲ್ದಾಣದ ವರೆಗೆ ತೆರಳಿ ರೈಲು ಮೂಲಕ ತಮ್ಮ ಊರಿಗೆ ತೆರಳಿದರು. ಬಸ್ ಮತ್ತು ಹೋಟೆಲ್ ಇಲ್ಲದ ಕಾರಣ ಸಾರ್ವಜನಿಕರು ಪರದಾಡಿದರು.ಕೆಲ ವರ್ತಕರು ಅಂಗಡಿ-ಮುಗ್ಗಟ್ಟು ಬಂದ್ ಮಾಡಿ ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲಿಸಿದರೆ, ಕೆಲವು ಅಂಗಡಿಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದರು. ಅಲ್ಲಲ್ಲಿ ಟೈರ್, ಅಮಿತ್ ಶಾ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಂಬೇಡ್ಕರ್ ನಮ್ಮ ಜೀವ, ಜೀವನ, ಅನ್ನ ಎಂದು ಘೋಷಣೆ ಕೂಗಿದರು.
ವಿವಿಧ ಬಡಾವಣೆಗಳಿಂದ ಮೆರವಣಿಗೆ, ಬೈಕ್ ರ್‍ಯಾಲಿ ಮೂಲಕ ಚೆನ್ನಮ್ಮ ಸರ್ಕಲ್‌ಗೆ ಮಧ್ಯಾಹ್ನ 12ರ ಸುಮಾರಿಗೆ ಆಗಮಿಸಿದ ಪ್ರತಿಭಟನಾಕಾರರು ಬಿಜೆಪಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಮಿತ್ ಶಾ ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಬಹಿರಂಗವಾಗಿ ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಕೇಂದ್ರ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಚೆನ್ನಮ್ಮ ಸರ್ಕಲ್‌ನಲ್ಲಿ ಅಮಿತ್ ಶಾ ಅವರ ಅಣುಕು ಶವಯಾತ್ರೆ ನಡೆಸಿ ಪ್ರತಿಕೃತಿಗೆ ಬೆಂಕಿ ಹಚ್ಚಿದರು.ಸಮಾವೇಶ:
ಚೆನ್ನಮ್ಮ ಸರ್ಕಲ್‌ನಲ್ಲಿ ಬೃಹತ್ ಸಮಾವೇಶ ನಡೆಸಿದ ದಲಿತ ಸಂಘಟನೆಗಳು, ಅಮಿತ್ ಶಾ ಹೇಳಿಕೆ ಖಂಡಿಸಿದರು. ಅಂಬೇಡ್ಕರ್ ವಿಷಯವಾಗಿ ಮಾತನಾಡಬೇಕೆಂದರೆ ನಾಲಿಗಿ ಹಿಡಿತವಿರಬೇಕು. ಇಲ್ಲವೇ ಪರಿಣಾಮ ನೆಟ್ಟಗಿರದು ಎಂಬ ಎಚ್ಚರಿಕೆ ಸಂದೇಶವನ್ನು ಹೋರಾಟಗಾರರು ನೀಡಿದರು.ಅಂಬೇಡ್ಕರ್ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗ ಕರೆ ನೀಡಿದ್ದ ಬಂದ್‌ಗೆ 100ಕ್ಕೂ ಅಧಿಕ ದಲಿತ ಸಂಘಟನೆಗಳು ಬೆಂಬಲಿಸಿದ್ದವು.
ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹೆಸ್ಕಾಂ ಅಧ್ಯಕ್ಷ ಅಜೀಮ್ ಫೀರ್ ಖಾದ್ರಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಶಿವಾನಂದ ಮುತ್ತಣ್ಣವರ, ಬಂಗಾರೇಶ ಹಿರೇಮಠ, ಬಾಬಾಜಾನ ಮುಧೋಳ, ಗುರುನಾಥ ಉಳ್ಳಿಕಾಶಿ, ಮಾರುತಿ ದೊಡ್ಡಮನಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ದೀಪಾ ಗೌರಿ, ಪ್ರಭು ಪ್ರಭಾಕರ, ಸುರೇಶ ಸವಣೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.