ಸಾರಾಂಶ
ಮಾ. 16ರಂದು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿ: ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಪ್ರತಿವರ್ಷ ಹಮ್ಮಿಕೊಂಡು ಬಂದಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬದ 12ನೇ ವರ್ಷದ ಆಚರಣೆಯ ಪೂರ್ವಭಾವಿ ಸಭೆಯು ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ನಡೆಯಿತು.
ಸಭೆಯ ನೇತೃತ್ವ ವಹಿಸಿದ್ದ ಜಗ್ಗಲಗಿ ಹಬ್ಬದ ಆಯೋಜಕ, ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಮಾ. 16ರಂದು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಕಳೆದ 11 ವರ್ಷಗಳಿಂದ ಆಚರಿಸುತ್ತಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಇಡೀ ರಾಜ್ಯದ ಗಮನ ಸೆಳೆದಿದೆ. ಮಹಾಕುಂಭ ಮೇಳದಂತೆ ಹುಬ್ಬಳ್ಳಿ ಜಗ್ಗಲಗಿ ಹಬ್ಬವೂ ಪ್ರಸಿದ್ದಿ ಪಡೆಯಲಿ. ಹಿಂದು ಸಮಾಜವನ್ನು ಒಗ್ಗೂಡಿಸುವ ಕೆಲಸ ಈ ಹಬ್ಬದಿಂದ ಆಗುತ್ತಿದೆ. ಜಗ್ಗಲಿಗೆ ಪ್ರಯುಕ್ತ ಈ ಬಾರಿ ಮೊದಲ ಬಾರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಲು ನಿರ್ಧರಿಸಲಾಗಿದೆ. 35ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳುವರು ಎಂದರು.ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ, ನಾರಾಯಣ ಜರತಾರಘರ ಮಾತನಾಡಿ, ಜಗ್ಗಲಗಿ ಹಬ್ಬ ಕೇವಲ ಹುಬ್ಬಳ್ಳಿ- ಧಾರವಾಡ ಅಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಪ್ರಸಿದ್ದಿ ಪಡೆಯಲಿ. ಈ ಬಾರಿ ಜಗ್ಗಲಗಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವಂತೆ ಕರೆ ನೀಡಿದರು.
ಈ ವೇಳೆ ಬಿಜೆಪಿ ಪೂರ್ವ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟ್ಕರ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಚಂದ್ರಿಕಾ ಮೇಸ್ತ್ರಿ, ಶಿವು ಮೆಣಸಿನಕಾಯಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಸುಭಾಷಸಿಂಗ್ ಜಮಾದಾರ, ಪ್ರಭು ನವಲಗುಂದಮಠ, ಪ್ರವೀಣ ಪವಾರ, ಜಗದೀಶ ಬುಳ್ಳಾನವರ, ಅನುರಾದ ಚಿಲ್ಲಾಳ, ಅಕ್ಕಮ್ಮ ಹೆಗಡೆ, ಸಂತೋಷ ಅರಕೇರಿ, ವೆಂಕಟೇಶ ಕಾಟವೆ, ಪ್ರಕಾಶ ಬುರಬುರೆ ಸೇರಿದಂತೆ ಹಲವರಿದ್ದರು.