ಸಾರಾಂಶ
ವಿಶೇಷ ವರದಿ
ಹುಬ್ಬಳ್ಳಿ: ಉದ್ಘಾಟನೆಯಾದರೂ ವ್ಯಾಪಾರಸ್ಥರಿಗೆ ಇನ್ನೂ ಹಸ್ತಾಂತರವಾಗಿಲ್ಲ. ಇದರಿಂದ ಕುಡುಕರ ಅಡ್ಡೆಯಾದಂತಾಗಿದೆ ನೂತನ ಜನತಾ ಬಜಾರ್..!
ಹುಬ್ಬಳ್ಳಿಯಲ್ಲಿ ಮಾರುಕಟ್ಟೆ ಪ್ರದೇಶವಾಗಿರುವ ಜನತಾ ಬಜಾರ್ ಹಳೆಯದಾಗಿತ್ತು. ಈ ಕಾರಣಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಇದನ್ನು ಹೊಸದಾಗಿ ನಿರ್ಮಿಸಲಾಗಿದೆ. ಕೋಟಿಗಟ್ಟಲೇ ಖರ್ಚು ಮಾಡಿ ನಿರ್ಮಿಸಿರುವ ಜನತಾ ಬಜಾರ್ ಹೊರಗಿನಿಂದ ನೋಡಿದರೆ ಸುಂದರವಾಗಿ ಕಾಣುತ್ತಿದೆ. ಆದರೆ, ಒಳಗಡೆ ಹೊಕ್ಕರೆ ದುರ್ನಾತ ಬೀರುತ್ತಿದೆ.
ಈ ಬಜಾರ್ ನಿರ್ಮಿಸಲು ಅಲ್ಲಿನ ವ್ಯಾಪಾರಸ್ಥರಿಗೆ ನೀಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. 2019ರಲ್ಲೇ ಈ ಕಟ್ಟಡದ ಕಾಮಗಾರಿ ಪ್ರಾರಂಭಿಸಿದ್ದು 2023ರಲ್ಲಿ ಇದರ ಉದ್ಘಾಟನೆ ಕೂಡ ನೆರವೇರಿಸಲಾಗಿದೆ. ಸ್ಮಾರ್ಟ್‌ಸಿಟಿಯಿಂದ ಮಹಾನಗರ ಪಾಲಿಕೆಗೂ ಹಸ್ತಾಂತರವಾಗಿದೆ. ಆದರೆ ಈ ವರೆಗೂ ವ್ಯಾಪಾರಸ್ಥರಿಗೆ ಹಂಚಿಕೆ ಮಾತ್ರ ಆಗುತ್ತಿಲ್ಲ.
ಕಾರಣವೇನು?
ಇಲ್ಲಿ 150 ಮಳಿಗೆ ಹಾಗೂ 175 ಕಟ್ಟೆಗಳನ್ನು ನಿರ್ಮಿಸಲಾಗಿದೆ. ಆದರೆ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಇನ್ನಷ್ಟು ಕಟ್ಟೆಗಳನ್ನು ನಿರ್ಮಿಸಿ ಕೊಡಬೇಕಿದೆ. ಇದಕ್ಕಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಆ ಕೆಲಸ ಮಾತ್ರ ಆಗುತ್ತಿಲ್ಲ. ಹೀಗಾಗಿ ವ್ಯಾಪಾರಸ್ಥರು ಜನತಾ ಬಜಾರಿನ ಹೊರಗಿನ ರಸ್ತೆ ಮೇಲೆ ವ್ಯಾಪಾರ ಮಾಡುವಂತಾಗಿದೆ.
ಈ ನೂತನ ಬಿಲ್ಡಿಂಗ್ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಹೊರಗಿನಿಂದ ಎಷ್ಟು ಸುಂದರವಾಗಿ ಕಾಣುತ್ತದೆ. ಒಳಹೋಗಿ ನೋಡಿದರೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಇಸ್ಪೆಟ್ ಎಲೆಗಳ ಕಟ್ಟು, ನಿರೋಧ ಕಣ್ಣಿಗೆ ರಾಚುತ್ತವೆ. ಅಂದರೆ ಪ್ರತಿನಿತ್ಯ ರಾತ್ರಿ ಅನಧಿಕೃತ ಬಾರ್‌ನಂತೆ ಆಗುತ್ತಿದೆ ಈ ಮಾರುಕಟ್ಟೆ. ಕಟ್ಟಡದೊಳಗೆ ಯಾರು ಇರುವುದಿಲ್ಲ. ಯಾರು ಏನು ಮಾಡಿದರೂ ಕೇಳುವವರೇ ಇಲ್ಲದಂತಾಗಿದೆ. ಬರೀ ಬಾರ್‌ನಂತಾಗುತ್ತಿಲ್ಲ. ಬದಲಿಗೆ ಇಸ್ಪಿಟ್ ಅಡ್ಡಾ ಆಗಿದೆ. ಇದರ ಕುರುಹಾಗಿ ಇಸ್ಪಿಟ್ ಎಲೆಗಳ ಕಟ್ಟುಗಳು ರಾಶಿ ರಾಶಿ ಬಿದ್ದಿವೆ. ಇನ್ನು ಮಹಿಳೆಯರ ಒಳ ಉಡುಪು, ನಿರೋಧ ಪಾಕೆಟ್‌ಗಳೆಲ್ಲ ರಾರಾಜಿಸುತ್ತಿವೆ. ಎಲೆಕ್ಟ್ರಿಕಲ್ ಸ್ವಿಚ್ ಬೋರ್ಡ್ ಕಳ್ಳ ಕಾಕರ ಪಾಲಾಗಿವೆ. ಕಿಡಕಿಗಳಿಗೆ ಅಳವಡಿಸಿದ್ದ ಗ್ಲಾಸ್‌ಗಳೆಲ್ಲ ಒಡೆದು ಹೋಗಿವೆ.
ಪಾಲಿಕೆ ಮೌನ:
ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮಾರುಕಟ್ಟೆಯನ್ನು ಹಸ್ತಾಂತರಿಸಿ ಕೈ ತೊಳೆದುಕೊಂಡಿದ್ದಾರೆ. ಆದರೆ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಬೇಕಾದ, ಮಾರುಕಟ್ಟೆಯನ್ನು ಸರಿಯಾಗಿ ನಿರ್ವಹಿಸಬೇಕಾದ ಮಹಾನಗರ ಪಾಲಿಕೆ ಮಾತ್ರ ಮೌನಕ್ಕೆ ಜಾರಿದೆ. ಪಾಲಿಕೆ ನಿರ್ಲಕ್ಷ್ಯದಿಂದಾಗಿ ಇದೀಗ ಮಾರುಕಟ್ಟೆ ಸಂಪೂರ್ಣ ಅಕ್ರಮ ಚಟುವಟಿಕೆ ತಾಣವಾದಂತಾಗಿದೆ.
ಇನ್ನಾದರೂ ಜನತಾ ಬಜಾರ್ ಮಾರುಕಟ್ಟೆಯ ಕಟ್ಟಡದಲ್ಲಿನ ಮಳಿಗೆ ಹಾಗೂ ಕಟ್ಟಾಗಳನ್ನು ವ್ಯಾಪಾರಸ್ಥರಿಗೆ ನೀಡಬೇಕು. ಜತೆಗೆ ಅಕ್ರಮ ಚಟುವಟಿಕೆಗಳ ತಾಣವಾಗದಂತೆ ಸಮರ್ಪಕ ನಿರ್ವಹಣೆ ಮಾಡಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.
ಜನತಾ ಬಜಾರ್‌ನ್ನು ಪಾಲಿಕೆ ಹಸ್ತಾಂತರಿಸಿಕೊಂಡಿದೆ. ಆದರೆ ಅದರಲ್ಲಿನ ಮಳಿಗೆ ಹಾಗೂ ಕಟ್ಟಾಗಳನ್ನು ವರ್ತಕರಿಗೆ ಹಂಚಿಕೆ ಮಾಡಬೇಕಿದೆ. ಅದನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿಟ್ಟು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.
ಜನತಾ ಬಜಾರ್‌ನಲ್ಲಿನ ಮಳಿಗೆಗಳನ್ನು ನಮಗೆ ಹಂಚಿಕೆ ಮಾಡಿ ಎಂದು ಹಲವು ಬಾರಿ ಹೇಳಿದರೂ ಈ ವರೆಗೂ ಮಾಡುತ್ತಿಲ್ಲ. ಇದರಿಂದ ನಾವು ರಸ್ತೆಯಲ್ಲಿ ಕುಳಿತು ವ್ಯಾಪಾರ ನಡೆಸುವಂತಾಗಿದೆ. ಅದರಿಂದಾಗಿ ಅದು ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ವ್ಯಾಪಾರಸ್ಥ ಅಬ್ದುಲ್ ರಜಾಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.