ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ರಾಜ್ಯದಲ್ಲೇ ಎರಡನೆಯ ದೊಡ್ಡ ನಗರವೆನಿಸಿರುವ ಹುಬ್ಬಳ್ಳಿ- ಧಾರವಾಡ ನಗರ ಶೀಘ್ರದಲ್ಲೇ ಸ್ಥಳೀಯ ಯೋಜನಾ ಪ್ರದೇಶವನ್ನು (ಎಲ್‌ಪಿಎ- ಲೋಕಲ್ ಪ್ಲ್ಯಾನಿಂಗ್ ಏರಿಯಾ) ವಿಸ್ತರಿಸಿಕೊಳ್ಳಲಿದೆ. ಹೊಸದಾಗಿ 46 ಹಳ್ಳಿಗಳು ಸೇರ್ಪಡೆಯಾಗಲಿವೆ. ಈ ಸಂಬಂಧ ಈಗಾಗಲೇ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೂ ಆಗಿದೆ. ಅಲ್ಲಿಂದ ಅನುಮೋದನೆ ಬರುವುದೊಂದೇ ಬಾಕಿಯುಳಿದಿದೆ. ಇದರಿಂದಾಗಿ ಬರೋಬ್ಬರಿ 37 ವರ್ಷದ ಬಳಿಕ ಹುಡಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ ಎಂಬಂತಾಗಿದೆ.ಹಿಂದೆ ಅಂದರೆ ಪ್ರಾಧಿಕಾರ ರಚನೆಯಾದಾಗ 1988ರಲ್ಲೇ ಎಷ್ಟು ಅದರ ವ್ಯಾಪ್ತಿಯೆಂಬುದು ನಿರ್ಧಾರವಾಗಿತ್ತು. ಅದಾದ ಬಳಿಕ ಅದನ್ನು ವಿಸ್ತರಿಸಿರಲಿಲ್ಲ. ವಿಸ್ತರಿಸುವ ಪ್ರಯತ್ನ ನಡೆದಿತ್ತು ಆದರೆ, ಅದು ಪೂರ್ಣವಾಗಿ ಫಲಕಂಡಿರಲಿಲ್ಲ. ಅರ್ಧಕ್ಕಷ್ಟೇ ಸ್ಥಗಿತವಾಗಿತ್ತು. ಆದರೆ, ಹುಬ್ಬಳ್ಳಿ- ಧಾರವಾಡ ನಗರವೂ ನಾಗಾಲೋಟದಲ್ಲಿ ಬೆಳೆಯುತ್ತಿರುವ ಮಹಾನಗರ.
ರಾಜ್ಯದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ ಎನಿಸಿಕೊಂಡಿದೆ. ಇಲ್ಲಿನ ರಿಯಲ್ ಎಸ್ಟೆಟ್ ವ್ಯವಹಾರವೂ ಮಿಂಚಿನ ಓಟದಲ್ಲಿ ಸಾಗುತ್ತಿದೆ. ಈಗಾಗಲೇ ನಗರದ ಅಕ್ಕಪಕ್ಕಗಳಲ್ಲಿರುವ ಹಳ್ಳಿಗಳಲ್ಲಿ ಲೇಔಟ್‌ಗಳೆಲ್ಲ ಆಗಿ ಮಾರಾಟವಾಗುತ್ತಿವೆ. ಆದರೆ, ಸದ್ಯ ನಗರ ವ್ಯಾಪ್ತಿಗೆ ಬರುತ್ತಿಲ್ಲ. ಇದರಿಂದಾಗಿ ನಗರದಲ್ಲಿನ ಸೌಲಭ್ಯಗಳು ನಗರದ ಹೊರವಲಯಗಳಲ್ಲಿರುವ ಬಡಾವಣೆಗಳಿಗೆ ಸಿಗುತ್ತಿಲ್ಲ. ಜತೆಗೆ ನಗರಕ್ಕೆ ಹೊಂದಿಕೊಂಡಂತೆ ಬಡಾವಣೆಗಳು ಇದ್ದರೂ ವ್ಯವಸ್ಥಿತವಾಗಿ ಬೆಳೆಯಲು ಅವಕಾಶ ಸಿಗುತ್ತಿಲ್ಲ. ಹುಡಾದ ವ್ಯಾಪ್ತಿಗೆ ಅಕ್ಕಪಕ್ಕದ ಹಳ್ಳಿಗಳು ಬಂದರೆ ಮಾಸ್ಟರ್ ಪ್ಲ್ಯಾನ್ ಮಾಡಿ ವ್ಯವಸ್ಥಿತವಾಗಿ ನಗರವನ್ನು ಬೆಳೆಸಬಹುದು. ಜತೆಗೆ ನಗರದ ವ್ಯಾಪ್ತಿಗೆ ಬಂದರೆ ಹೆಚ್ಚಿನ ಸೌಲಭ್ಯಗಳು ಸಿಗಲು ಸಾಧ್ಯವಾಗುತ್ತದೆ. ಹೀಗಾಗಿ ಹೊರವಲಯಗಳಲ್ಲಿರುವ ಬಡಾವಣೆ, ಹಳ್ಳಿಗಳನ್ನು ನಗರ ಪ್ರದೇಶಕ್ಕೊಳಪಡಿಸಿ ಎಂಬ ಬೇಡಿಕೆ ಬಹುವರ್ಷಗಳದ್ದಾಗಿತ್ತು.ಎಷ್ಟು ವ್ಯಾಪ್ತಿ?: ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಮುಂಚೆ 46 ಹಳ್ಳಿಗಳು ಬರುತ್ತಿದ್ದವು. ಹುಡಾದ ವ್ಯಾಪ್ತಿ 402.08 ಚದುರ ಕಿಮೀ ಇತ್ತು. ಇದೀಗ ಹೊಸ ಎಲ್‌ಪಿಎ ಪ್ರಕಾರ ಮತ್ತೆ 46 ಹಳ್ಳಿಗಳು ಸೇರ್ಪಡೆಯಾಗಲಿವೆ. ಹುಬ್ಬಳ್ಳಿ ತಾಲೂಕಿನ 13 ಹಳ್ಳಿಗಳು, ಕಲಘಟಗಿ ತಾಲೂಕಿನ 6, ಧಾರವಾಡ ತಾಲೂಕಿನ 27 ಹಳ್ಳಿಗಳು ಸೇರಿದಂತೆ 46 ಹಳ್ಳಿಗಳು ಸೇರ್ಪಡೆಯಾಗಲಿವೆ. ಇದರಿಂದಾಗಿ ಹುಡಾ ವ್ಯಾಪ್ತಿಗೆ 92 ಹಳ್ಳಿಗಳು ಬಂದಂತಾಗುತ್ತದೆ. ಇದರ ವ್ಯಾಪ್ತಿಯೂ 402.08 ಚದುರ ಕಿಮೀನಿಂದ 757.54 ಚದುರ ಕಿಮೀ ಆದಂತಾಗುತ್ತದೆ. ದುಪ್ಪಟ್ಟು ಏರಿಯಾವನ್ನು ಹುಡಾ ಹೊಂದಿದಂತಾಗುತ್ತದೆ.
ಸರ್ಕಾರಕ್ಕೆ ಪ್ರಸ್ತಾವನೆ: ಈ ಸಂಬಂಧ ಈಗಾಗಲೇ ನಕಾಶೆ ತಯಾರಿಸಿ, ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅನುಮೋದನೆ ಸಿಕ್ಕ ಬಳಿಕ ಹುಡಾ ಇದನ್ನು ಘೋಷಿಸಲಿದೆ. ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂಬ ವಿಶ್ವಾಸ ಹುಡಾ ಮೂಲಗಳಿಂದ ತಿಳಿದು ಬರುತ್ತದೆ. ಇದರಿಂದಾಗಿ ಬಹುವರ್ಷದಿಂದ ನನೆಗುದಿಗೆ ಬಿದ್ದಿದ್ದ ಹಳ್ಳಿಗಳ ಸೇರ್ಪಡೆ ಸಾಧ್ಯವಾಗುತ್ತದೆ. ಜತೆಗೆ ವಿಸ್ತರಣೆಗೆ ತಕ್ಕಂತೆ ಮಾಸ್ಟರ್ ಪ್ಲ್ಯಾನ್ ರಿವೈಸ್ ಮಾಡಲು ಅನುಕೂಲವಾಗಲಿದೆ ಎಂಬುದು ಹುಡಾ ಅಧಿಕಾರಿ ವರ್ಗದ ಮಾತು. ಒಟ್ಟಿನಲ್ಲಿ ಎಲ್‌ಪಿಎ ಬದಲಾಗುತ್ತಿರುವುದಂತೂ ಸತ್ಯ.ಹೊಸದಾಗಿ ಸೇರ್ಪಡೆಯಾಗಲಿರುವ ಹಳ್ಳಿಗಳಿವು: ಹುಬ್ಬಳ್ಳಿ ತಾಲೂಕಿನ ರೇವಡಿಹಾಳ, ದೇವರಗುಡಿಹಾಳ, ಪರಸಾಪುರ, ಬುದ್ನಾಳ, ಮಾವನೂರ, ಬುಡರಸಿಂಗಿ, ಸಿದ್ಧಾಪುರ, ಮುರಾರಹಳ್ಳಿ, ಅದರಗುಂಚಿ, ಹಳ್ಯಾಳ, ಶಹರ ವೀರಾಪುರ, ಕುಸುಗಲ್, ಸುಳ್ಳ. ಕಲಘಟಗಿ ತಾಲೂಕಿನ ದೇವಲಿಂಗಿಕೊಪ್ಪ, ದಾಸನೂರ, ದುಮ್ಮವಾಡ, ಕುರುವಿನಕೊಪ್ಪ, ಕಾಡನಕೊಪ್ಪ, ಚಳಮಟ್ಟಿ, ಧಾರವಾಡ ತಾಲೂಕಿನ ಕೋಟೂರ, ಅಗಸನಹಳ್ಳಿ, ಶಿಂಗನಹಳ್ಳಿ, ಹೆಗ್ಗೇರಿ, ವರವನಾಗಲಾವಿ, ಚಿಕ್ಕಮಲ್ಲಿಗವಾಡ, ದಡ್ಡಿಕಮಲಾಪುರ, ಮಂಡಿಹಾಳ, ಮುಗದ, ಕ್ಯಾರಕೊಪ್ಪ, ಜಂಜಲ (ಜುಂಜಲಕಟ್ಟಿ), ಬಾಡ, ಬೆನಕನಕಟ್ಟಿ, ನಾಯಕನಹುಲಿಕಟ್ಟಿ, ಶಿವಳ್ಳಿ, ಮಾರಡಗಿ, ನವಲೂರ ತಡೆಬಿಳ, ಅಲ್ಲಾಪುರ, ಗೊಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ, ಕಮಲಾಪುರ, ದಾಸನಕೊಪ್ಪ, ದೇವಗಿರಿ ಎಂ. ನರೇಂದ್ರ, ಗೋವನಕೊಪ್ಪ ಎಂ. ನರೇಂದ್ರ, ನೀರಲಕಟ್ಟಿ ಹೀಗೆ 42 ಹಳ್ಳಿಗಳು ಹೊಸದಾಗಿ ಸೇರ್ಪಡೆಯಾಗಲಿವೆ.
ಹುಡಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ನಕಾಶೆ ಸಿದ್ಧಪಡಿಸಿ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದೆ. ಹೊಸದಾಗಿ 42 ಹಳ್ಳಿಗಳು ಸೇರ್ಪಡೆಯಾಗಲಿವೆ. ಅನುಮೋದನೆಯಾದರೆ 402 ಚದುರ ಕಿಮೀನಿಂದ 757 ಚದುರ ಕಿಮೀ ವ್ಯಾಪ್ತಿ ಹುಡಾದ್ದಾಗುತ್ತದೆ ಎಂದು ಹುಡಾ ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ ಹೇಳಿದರು.ನಗರದ ಹೊರವಲಯಗಳಲ್ಲಿ ಹೊಸದಾಗಿ ಸಾಕಷ್ಟು ಲೇಔಟ್‌ಗಳು ಆಗಿವೆ. ಆದರೆ, ಅವು ಹುಡಾ ವ್ಯಾಪ್ತಿಗೆ ಬರಲ್ಲ. ನಗರದ ಪಕ್ಕದಲ್ಲೇ ಇದ್ದರೂ ಸೇರ್ಪಡೆಯಾಗುತ್ತಿರಲಿಲ್ಲ. ಹುಡಾ ವ್ಯಾಪ್ತಿಗೆ ಅಕ್ಕಪಕ್ಕದ ಹಳ್ಳಿಗಳನ್ನು ಸೇರ್ಪಡೆ ಮಾಡುವುದರಿಂದ ಮಾಸ್ಟರ್ ಪ್ಲ್ಯಾನ್ ರಿವೈಸ್ ಮಾಡಲು, ವ್ಯವಸ್ಥಿತವಾಗಿ ನಗರವನ್ನು ಬೆಳೆಸಲು ಅನುಕೂಲವಾಗಲಿದೆ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಹೇಳಿದರು.