ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಮಕ್ಕಳಲ್ಲಿ ಸವಾಲುಗಳನ್ನು ಎದುರಿಸವ ಮನೋಭಾವ ಬೆಳೆಸಲು ಕ್ರೀಡೆ ಸಹಕಾರಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.ಹುದಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಮುಖ್ಯಮಂತ್ರಿಗಳ ವಿಶೇಷ ಅನುದಾನ ರು. 25 ಲಕ್ಷದಲ್ಲಿ ಹುದಿಕೇರಿಯ ಜನತಾ ಪ್ರೌಢಶಾಲೆಯ ಮೈದಾನ ಪುನಶ್ಚೇತನ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ಸೋಲು- ಗೆಲವು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆಯಲ್ಲಿ ಬೆಳೆಸಿಕೊಳ್ಳಬಹುದು. ಸೋಲು ಇಲ್ಲದೆ ಗೆಲವು ಇಲ್ಲ. ಕ್ರೀಡಾ ಸ್ಪೂರ್ತಿಯಿಂದ ಸೋಲನ್ನು ಸ್ವೀಕರಿಸಬೇಕು ಎಂದರು.ಕೊಡಗು ಜಿಲ್ಲೆ ಕ್ರೀಡೆಯಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಕೊಡಗು ಜಿಲ್ಲೆಯಿಂದ ಪ್ರತಿನಿಧಿಸುವಷ್ಟು ಕ್ರೀಡಾಪಟುಗಳು ದೇಶದ ಬೇರೆ ಯಾವುದೇ ಜಿಲ್ಲೆಯಿಂದ ಪ್ರತಿನಿಧಿಸಲು ಸಾಧ್ಯವಿಲ್ಲ. ಒಲಂಪಿಕ್ ನಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದವರೆಗೂ ಕ್ರೀಡಾಪಟುಗಳನ್ನು ಜಿಲ್ಲೆಯು ಕೊಡುಗೆ ನೀಡಿದೆ. ಆದ್ದರಿಂದ ಇಂತಹ ಕ್ರೀಡಾ ಪರಂಪರೆ ಮುಂದುವರಿಸಬೇಕು ಜಿಲ್ಲೆಯ ನಾನಾ ಕಡೆ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದರು.
ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಹಿಂದೆ ನೀಡಿದ ಆಶ್ವಾಸನೆಯಂತೆ ಕ್ಷೇತ್ರದ 8 ಹೋಬಳಿ ಗಳಲ್ಲಿ ತಲಾ ಒಂದು ಮೈದಾನಕ್ಕೆ ರು.25 ಲಕ್ಷದಂತೆ ಒಟ್ಟು ಎರಡು ಕೋಟಿ ಅನುದಾನದಲ್ಲಿ ಕ್ರೀಡಾ ಮೈದಾನ ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆರಂಭವಾಗಿದೆ. ಈಗಾಗಲೇ ವಿರಾಜಪೇಟೆ ತಾಲೂಕು ಮೈದಾನವನ್ನು ಪುನಶ್ಚೇತನ ಮಾಡಿ ಉದ್ಘಾಟಿಸಿದ ನಂತರ ಎರಡನೆಯ ಮೈದಾನವಾಗಿ ಹುದಿಕೇರಿಗೆ ಹೋಬಳಿಯ ಹುದಿಕೇರಿ ಜನತಾ ಪ್ರೌಢಶಾಲೆಯ ಮೈದಾನ ಅಭಿವೃದ್ಧಿಗೊಳಿಸಿ ಉದ್ಘಾಟಿಸಲಾಗುತ್ತಿದೆ ಎಂದರು.ಕೊಡಗು ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿದ ಹುದಿಕೇರಿ ಜನತಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮಂಡಂಗಡ ಎಂ ಅಶೋಕ್ ಮಾತನಾಡಿ, ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು ಗ್ರಾಮೀಣ ಭಾಗದಲ್ಲಿ ವಿಶೇಷ ಮೆರುಗು ನೀಡಿದೆ ಎಂದು ಹೇಳಿದರುಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಪ್ಪಣಮಾಡ ನಿವ್ಯ ಕಾವೇರಮ್ಮ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯ ಚಕ್ರವರ್ತಿ, ಜಿಲ್ಲಾ ಶಿಕ್ಷಣಾಧಿಕಾರಿ ಗಾಯತ್ರಿ ಬಿ. ಆರ್. ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಭಾರ) ರವಿ ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.