ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಹುಲಿ ಹಾವಳಿ ಹೆಚ್ಚಾಗಿರುವ ಪೊನ್ನಂಪೇಟೆ ತಾಲೂಕಿನಲ್ಲಿ ಇದೀಗ ಕಾಡಾನೆ ಉಪಟಳವೂ ಅಧಿಕವಾಗಿದ್ದು, ಕಾಡಾನೆ ಹಾವಳಿಯಿಂದ ಸುಮಾರು 20 ಕ್ವಿಂಟಾಲ್ ಭತ್ತದ ಫಸಲು ಹಾನಿಯಾಗಿದ್ದು, ಆನೆಗೆ ಆಹಾರವಾಗಿದೆ. ಫಸಲು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಹುದೂರು ಗ್ರಾಮದ ಪ್ರಗತಿಪರ ಕೃಷಿಕ ಹಾಗೂ ವಿವಿಧ ಭತ್ತ ತಳಿ ಸಂರಕ್ಷಕ ರವಿ ಶಂಕರ್ ಸುಮಾರು 35 ಎಕರೆ ಭತ್ತದ ಗದ್ದೆಯಲ್ಲಿ 35 ಬಗೆಯ ಭತ್ತದ ತಳಿ ಬೆಳೆಯುತ್ತಿದ್ದಾರೆ. ಹಲವಾರು ವರ್ಷಗಳಿಂದ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಇದೇ ಮೊದಲ ಬಾರಿಗೆ ತಮ್ಮ ಜಮೀನಿನಲ್ಲಿ ಕಾಡಾನೆ ಹಾವಳಿ ಮಾಡಿದ್ದು, ಬಿಕೆಆರ್ ತಳಿಯ ಅಂದಾಜು ಸುಮಾರು ಒಂದು ಲಕ್ಷ ರು. ಮೌಲ್ಯದ ಭತ್ತದ ಬೀಜ ಹಾನಿಯಾಗಿದೆ.ಅರಣ್ಯ ಇಲಾಖೆಯ ಸಿಬ್ಬಂದಿಗಳು ಭತ್ತದ ಗದ್ದೆಗೆ ತೆರಳಿ ಫಸಲು ಹಾನಿ ವೀಕ್ಷಿಸಿದ್ದಾರೆ.
ಈಗಾಗಲೇ ತಮ್ಮ ಭತ್ತದ ಗದ್ದೆಯಲ್ಲಿ ಬಹುತೇಕ ಎಲ್ಲ ತಳಿಯ ಭತ್ತ ಕೊಯ್ಲು ಮಾಡಿದ್ದರು. ಬಿ.ಕೆ.ಆರ್. ತಳಿಯ ಭತ್ತವನ್ನು ಕೊಯ್ಲು ಮಾಡಿ ಇಟ್ಟಿದ್ದರು, ಇನ್ನೇನು ಭತ್ತದ ಫಸಲನ್ನು ಬೇರ್ಪಡಿಸಲು ಮಿಷನ್ ಗೆ ಹಾಕಬೇಕೆನ್ನುವಷ್ಟರಲ್ಲಿ ಆನೆ ಸಂಪೂರ್ಣ ಫಸಲನ್ನು ತಿಂದಿದೆ. ಅಲ್ಲದೆ ಭತ್ತದ ಫಸಲು ಗದ್ದೆಯ ಅಲ್ಲಲ್ಲಿ ಚಲ್ಲಾಪಿಲ್ಲಿಯಾಗಿದ್ದು, ರವಿಶಂಕರ್ ಕಾರ್ಮಿಕರಿಂದ ಒಂದಷ್ಟು ಭತ್ತದ ಫಸಲು ಹೆಕ್ಕಿಸಿದ್ದಾರೆ.ಈ ಬಿ.ಕೆ.ಆರ್. ತಳಿಯ ಭತ್ತದ ಫಸಲನ್ನು ಮುಂದಿನ ಮಳೆಗಾಲಕ್ಕೆ ಮಾರಾಟ ಮಾಡಲು ಸಂಗ್ರಹಿಸಿಡಲು ನಿರ್ಧರಿಸಿದ್ದರು. ಇದಕ್ಕೆ ಪ್ರತಿ ಕ್ವಿಂಟಾಲ್‌ಗೆ 6 ಸಾವಿರ ರುಪಾಯಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಇದೀಗ ಫಸಲು ಸಂಪೂರ್ಣ ನಾಶವಾಗಿದೆ. ರೈತನ ಕೈಗೆ ಬಂತ ತುತ್ತು ಕಾಡಾನೆಯ ಹೊಟ್ಟೆ ಸೇರಿದ್ದು, ಫಸಲು ಸಿಗದೆ ಭತ್ತ ಬೆಳೆದ ರೈತ ಕಂಗಾಲಾಗಿದ್ದಾರೆ.
ಇವರ ಬಳಿಯಿಂದ ಜಿಲ್ಲೆ ಸೇರಿದಂತೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ರೈತರು ಬಿತ್ತನೆ ಬೀಜವನ್ನು ಖರೀದಿಸುತ್ತಾರೆ. ಗುಣಮಟ್ಟದ ಬಿತ್ತನೆ ಬೀಜ ನೀಡುವುದರಿಂದ ಹೆಚ್ಚಿನ ಬೇಡಿಕೆಯೂ ಇತ್ತು. ಇದೀಗ ಕಾಡಾನೆ ಹಾವಳಿಯಾದರೆ, ಡಿಸೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಗೆ ಈಗಾಗಲೇ 8 ವಿವಿಧ ತಳಿಯ ಭತ್ತದ ಫಸಲು ಕೂಡ ನಷ್ಟವಾಗಿತ್ತು. ಇದರಿಂದ ಮುಂದಿನ ವರ್ಷ ಬಿತ್ತನೆ ಬೀಜ ಮಾರಾಟ ಮಾಡಲು ರವಿಶಂಕರ್ ಅವರಿಗೆ ಸಮಸ್ಯೆಯಾಗಿದೆ.ಕೊಡಗಿನಲ್ಲಿ ಭತ್ತದ ಕೃಷಿ ಮಾಡುವುದೇ ದೊಡ್ಡ ಸವಾಲು ಎಂಬುದರ ನಡುವೆ ರವಿಶಂಕರ್ ತಮ್ಮ ಭತ್ತದ ಗದ್ದೆಯಲ್ಲಿ ರಾಜಮುಡಿ, ಸೋನಾಮಸೂರಿ, ಜೀರಿಗೆ ಸಣ್ಣ, ಕಾಕೆಸಣ್ಣ, ಶ್ರೀರಾಮ, ಧಾನ್ಯಲಕ್ಷ್ಮಿ ಸೇರಿದಂತೆ ಸುಮಾರು 35ಕ್ಕೂ ಅಧಿಕ ತಳಿಯ ಭತ್ತ ಬೆಳೆಯುತ್ತಿದ್ದರು. ಭತ್ತದ ಗದ್ದೆಗಳನ್ನು ಪಾಳುಬಿಡುತ್ತಿದ್ದ ರೈತರಿಗೆ ಮಾದರಿಯಾಗಿದ್ದರು. ಆದರೆ ಈ ಬಾರಿ ಇವರ ಗದ್ದೆಗೂ ಕಾಡಾನೆ ಲಗ್ಗೆಯಿಟ್ಟಿದ್ದು, ಫಸಲು ನಷ್ಟದಿಂದಾಗಿ ರವಿ ಶಂಕರ್ ತೀವ್ರ ಬೇಸರಗೊಂಡಿದ್ದಾರೆ.
...............................ಕಟಾವು ಮಾಡಿದ ಭತ್ತದ ಫಸಲನ್ನು ಇನ್ನೇನು ಯಂತ್ರಕ್ಕೆ ಹಾಕಿ ಬೇರ್ಪಡಿಸಬೇಕೆನ್ನುವಷ್ಟರಲ್ಲಿ ಕಾಡಾನೆ ಗದ್ದೆಗೆ ಬಂದು ಫಸಲು ತಿಂದು ನಾಶಪಡಿಸಿದೆ. ಬಿಕೆಆರ್ ತಳಿಯ ಸುಮಾರು 20 ಕ್ವಿಂಟಾಲ್ ಭತ್ತ ಹಾನಿಯಾಗಿದೆ. ಅಂದಾಜು ಒಂದು ಲಕ್ಷ ರು. ನಷ್ಟ ಸಂಭವಿಸಿದೆ. ಗದ್ದೆಯ ಪರಿಸ್ಥಿತಿ ನೋಡುವಾಗ ಬೇಸರವಾಗುತ್ತಿದೆ.
-ರವಿಶಂಕರ್, ಭತ್ತ ಕೃಷಿಕ ಹುದೂರು ಗ್ರಾಮ.