ಏ.4ರಿಂದ ಹಾಲಸಿದ್ಧನಾಥದಲ್ಲಿ ಬೃಹತ್ ಕೃಷಿ ಉತ್ಸವ

| Published : Mar 14 2025, 12:31 AM IST

ಏ.4ರಿಂದ ಹಾಲಸಿದ್ಧನಾಥದಲ್ಲಿ ಬೃಹತ್ ಕೃಷಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲೇ ಮೊಟ್ಟಮೊದಲ ಬಾರಿಗೆ ಏ.4ರಿಂದ 8ರವರೆಗೆ ಬೃಹತ ಕೃಷಿ ಉತ್ಸವ ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಬೆಳಗಾವಿ ಜಿಲ್ಲೆಯಲ್ಲೇ ಮೊಟ್ಟಮೊದಲ ಬಾರಿಗೆ ಏ.4ರಿಂದ 8ರವರೆಗೆ ಬೃಹತ ಕೃಷಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷರಾದ ಬಸವ ಪ್ರಸಾದ ಜೊಲ್ಲೆ ತಿಳಿಸಿದರು.

ಇಲ್ಲಿನ ಕಾರ್ಖಾನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೊಲ್ಲೆ ಗ್ರೂಪ್, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಶ್ರೀ ಬೀರೇಶ್ವರ ಕೋ-ಆಫ್‌ ಕ್ರೆಡಿಟ್ ಸೊಸೈಟಿಯಿಂದ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ವಿವಿಧ ಸಂಘ, ಸಂಸ್ಥೆಗಳ ಮೂಲಕ ರೈತರ ಜೀವನ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ರೈತರಿಗೆ ಹೊಸ ಬೆಳೆಗಳ ಬೆಳವಣಿಗೆ ಹಾಗೂ ಹೆಚ್ಚಿನ ಕೃಷಿ ಮಾಹಿತಿಗಾಗಿ 2015ರಲ್ಲಿ ತಂತ್ರಜ್ಞಾನ ಹಾಗೂ ಪರಿಕರಗಳ ಬಳಕೆ ಕುರಿತು ಮಾಹಿತಿ ನೀಡಲು ಕೃಷಿ ಮೇಳ ನಡೆಸಲಾಗಿತ್ತು. ಈಗ ಕೃಷಿ ಉತ್ಸವವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದೆ. ಇನ್ನು ಮುಂದೆ ಪ್ರತಿ ವರ್ಷ ಕೃಷಿ ಉತ್ಸವ ಆಯೋಜಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಈ ಕೃಷಿ ಉತ್ಸವದಲ್ಲಿ ರೈತರೊಂದಿಗೆ, ಮಹಿಳೆಯರು, ಯುವಕರು ಮತ್ತು ಇಡೀ ಕುಟುಂಬಗೋಸ್ಕರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹಸು, ಎಮ್ಮೆ ಮತ್ತು ಮೇಕೆ ಸ್ಪರ್ಧೆ, ದ್ವಿಚಕ್ರ ವಾಹನ ಮತ್ತು ಟ್ರ್ಯಾಕ್ಟರ್ ಪ್ರದರ್ಶನ, ಕೃಷಿಗೆ ಸಂಬಂಧಿಸಿದ ವಿವಿಧ ಮಳಿಗೆಗಳು ಮತ್ತು ವಿವಿಧ ಗ್ರಾಹಕ ವಸ್ತುಗಳ ಮಳಿಗೆಗಳು ಪ್ರದರ್ಶನದಲ್ಲಿ ಇರುತ್ತವೆ. ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಹೈನುಗಾರಿಕೆ, ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಸಾವಯವ ಕೃಷಿ ಕುರಿತು ತಜ್ಞರಿಂದ ವಿವಿಧ ವಿಚಾರ ಸಂಕಿರಣಗಳು ನಡೆಯಲಿವೆ. ಎಲ್ಲರೂ ಈ ಆಚರಣೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ನಿರ್ದೇಶಕ ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ಜಯಕುಮಾರ ಖೋತ, ಅವಿನಾಶ ಪಾಟೀಲ, ಸಮಿತ್ ಸಾಸನೆ, .ಪ್ರಕಾಶ ಶಿಂಧೆ, ಜಯವಂತ ಭಾಟಲೆ, ಸುನೀಲ ಪಾಟೀಲ, ರಾಜು ಗುಂಡೇಶ, ರಮೇಶ ಪಾಟೀಲ್, ವಿನಾಯಕ ಪಾಟೀಲ, ಶ್ರೀಕಾಂತ ಬನ್ನೆ, ರಾವಸಾಹೇಬ ಫರಾಳೆ, ಸುಹಾಸ ಘೂಗೆ, ಶ್ರೀಕಾಂತ ಕನಗಲೆ, ಕಿರಣ ನಿಕಾಡೆ, ಮಿಥುನ ಪಾಟೀಲ ಇತರರಿದ್ದರು.

ಮನರಂಜನಾ ಕಾರ್ಯಕ್ರಮಗಳು:

ಈ ಬೃಹತ್ ಕೃಷಿ ಉತ್ಸವದಲ್ಲಿ ಜೊಲ್ಲೆ ಸಮೂಹದ ವಿವಿಧ 8 ವರ್ಟಿಕಲ್‌ ಪ್ರಸ್ತುತಪಡಿಸಲಾಗುವುದು. ಆಹಾರ ಮಳಿಗೆಗಳು, ಮಕ್ಕಳಿಗಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಮನರಂಜನಾ ಕಾರ್ಯಕ್ರಮಗಳು ಸಹ ಇರುತ್ತವೆ. ಮಹಿಳೆಯರಿಗಾಗಿ ಫ್ಯಾಶನ್ ಶೋ ಮತ್ತು ಫುಗ್ಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರಿನ ಆಳ್ವಾಸ್‌ ಸಮೂಹದ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಬಸವ ಪ್ರಸಾದ ಜೊಲ್ಲೆ ತಿಳಿಸಿದರು.