ಸಾರಾಂಶ
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಏಪ್ರಿಲ್ 11ಕ್ಕೆ ನಿಪ್ಪಾಣಿ ನಗರಕ್ಕೆ ಆಗಮಿಸಿ ನೂರು ವರ್ಷ ಪೂರ್ಣಗೊಳ್ಳಲಿದೆ. ಇದು ನಮ್ಮೆಲ್ಲ ನಿಪ್ಪಾಣಿ ವಾಸಿಗರಿಗೆ ಒಂದು ಅಭಿಮಾನದ ದಿನ. ಈ ಸುಸಂದರ್ಭವನ್ನು ಭಾರತೀಯ ಜನತಾ ಪಾರ್ಟಿಯಿಂದ ನಿಪ್ಪಾಣಿ ನಗರದಲ್ಲಿ ಇಡೀ ರಾಷ್ಟ್ರವೇ ನೋಡುವಂತಹ ಭವ್ಯ ಮತ್ತು ಅದ್ಭುತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.ಇಲ್ಲಿನ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅಂಬೇಡ್ಕರ್ ಅವರು ಇಲ್ಲಿ ಆಗಮಿಸಿ ನೂರು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಏನು ಮಾಡಬೇಕೆಂದು ಪ್ರಸ್ತಾವನೆ ಇಟ್ಟು ಸರ್ಕಾರದ ಗಮನಕ್ಕೆ ತಂದರು ಕೂಡ ಯಾವುದೇ ಬೆಂಬಲ ನೀಡಲಿಲ್ಲ. ಇದು ತುಂಬಾ ನಿರಾಶದಾಯಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತನ್ನಂತ ಒಬ್ಬ ಸಾಮಾನ್ಯ ಮಹಿಳೆ ಶಾಸಕಿ ಹಾಗೂ ಸಚಿವೆಯಾಗಿ ವಿಧಾನಸಭೆಯವರೆಗೂ ಹೋಗುವ ಹಾಗೇ ಆಗಿದ್ದು ಕೇವಲ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೆ ಇದು ಸಾಧ್ಯವಾಗಿದೆ. ಅಂಬೇಡ್ಕರ್ ಅವರು ಇಲ್ಲಿ ನಾಲ್ಕು ದಿನ ವಾಸ್ತವ್ಯ ಮಾಡಿ ಜನರಿಗೆ ಮಾರ್ಗದರ್ಶನ ನೀಡಿದ್ದರು. ಭಾರತೀಯ ಜನತಾ ಪಾರ್ಟಿಯ ಕೇಂದ್ರದ ಹಾಗೂ ರಾಜ್ಯದ ವರಿಷ್ಠರಿಂದಲೂ ಕೂಡ ಕಾರ್ಯಕ್ರಮ ಮಾಡಬೇಕೆಂದು ಸೂಚಿಸಿದ ಮೇರೆಗೆ ಒಂದು ಅದ್ಭುತ ಸಮಾವೇಶ ಮಾಡಿ ದೇಶಕ್ಕೆ ಮಾದರಿ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.ಮಾಜಿ ಸಚಿವರಾದ ಎನ್.ಮಹೇಶ್ ಮಾತನಾಡಿ, ಬೃಹತ್ ಸಮಾವೇಶ ಮಾಡುವ ಮೂಲಕ ಡಾ.ಅಂಬೇಡ್ಕರ್‌ಗೆ ಗೌರವ ಸಲ್ಲಿಸಿ. ಇಡೀ ರಾಷ್ಟ್ರ ಈ ಕಡೆ ತಿರುಗಿ ನೋಡುವಂತೆ ಮಾಡಲು ಅದ್ಭುತ ಕಾರ್ಯಕ್ರಮ ಯೋಜನೆ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗುವ ಭೀಮಯಾತ್ರೆಯು ಏ.14ರಂದು ನಿಪ್ಪಾಣಿ ನಗರಕ್ಕೆ ಆಗಮಿಸಿ 15ರಂದು ಬೃಹತ್ ಕಾರ್ಯಕ್ರಮವಾಗಿ ಮಾರ್ಪಾಡಾಗುವುದೆಂದರು.
ಬೆಳಗಾವಿಗೆ ಗಾಂಧೀಜಿ ಆಗಮಿಸಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಐಸಿಸಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿತು. ಆದರೆ ಸಂವಿಧಾನ ಸೃಷ್ಟಿಕರ್ತ ಬಾಬಾ ಸಾಹೇಬ್ ಅವರ ಆಗಮನಕ್ಕೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿ ಪ್ರಸ್ತಾಪಿಸಿದ್ದರು ಸರಕಾರದಿಂದ ಯಾವುದೇ ಬೆಂಬಲ ಸಿಗಲಿಲ್ಲ. ಯುನೆಸ್ಕೋನೆ ವಿಶ್ವದ ಶ್ರೇಷ್ಠ ಚಿಂತಕ ಎಂದು ಬಾಬಾ ಸಾಹೇಬ್ ಅವರನ್ನು ಗುರುತಿಸಿದೆ. ಅಂತಹ ಮಹಾನ್ ವ್ಯಕ್ತಿ ನಮ್ಮಿಂದ ಅಗಲಿದಾಗ ಅವರ ಅಂತಿಮ ಕ್ರಿಯಾ ಕರ್ಮಗಳನ್ನು ಸಕಲ ಸರಕಾರಿ ಗೌರವಗಳೊಂದಿಗೆ ಮಾಡಬೇಕಾಗಿತ್ತು. ಆದರೆ ನೆಹರು ಸರ್ಕಾರ ಅದನ್ನು ಮಾಡದೆ ದೊಡ್ಡ ತಪ್ಪು ಮಾಡಿದೆ. ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್‌ಗೆ ಸಹಾಯ ಮಾಡಲಿಲ್ಲ, ಗೌರವ ನೀಡಲಿಲ್ಲ, ಅವರ ಪ್ರತಿ ಹೆಜ್ಜೆಯಲ್ಲೂ ಅಡೆತಡೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.ಅದೇ ರೀತಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿ ಆಗಿದ್ದಾಗ ಅಂಬೇಡ್ಕರ್ ವಾಸವಿದ್ದ ಮನೆಯನ್ನು ಸ್ಮಾರಕ ಮಾಡುವ ಉದ್ದೇಶದಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತದನಂತರ 10 ವರ್ಷಗಳ ಕಾಲ ಬಂದ ಯುಪಿಎ ಸರ್ಕಾರ ಈ ಕಡೆ ಗಮನಹರಿಸದೆ ಮಹತ್ವ ನೀಡದೆ ಕೈ ಚೆಲ್ಲಿತು. ಆದರೆ ನಂತರ ಬಂದ ಮೋದಿ ಸರ್ಕಾರ ಅಂಬೇಡ್ಕರ್ ಮನೆಯನ್ನು ಸ್ಮಾರಕವನ್ನಾಗಿಸಿ ವಾಜಪೇಯಿ ಅವರ ಕಲ್ಪನೆ ಸಾಕಾರಗೊಳಿಸಿದರೆಂದರು.
ಡಾ.ಅಂಬೇಡ್ಕರ್ ಶೋಷಿತ ವರ್ಗದವರ ಪರ, ಸಾರ್ವಜನಿಕ ಕ್ಷೇತ್ರಗಳಿಂದ ಬಹಿಷ್ಕೃತಗೊಂಡವರು, ವಂಚಿತರು ಹೀಗೆ ಅನ್ಯಾಯ ಹಾಗೂ ಶೋಷಣೆಗೆ ಒಳಗಾದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ಅವರದಾಗಿತ್ತು. ಇದಕ್ಕೆ ಮೂಕ ನಾಯಕ ಎಂಬ ಪತ್ರಿಕೆಯು ಅವರ ಹೋರಾಟದ ಮುಖವಾಹಿನಿಯಾಗಿತ್ತು ಎಂದು ಹಲವು ಸನ್ನಿವೇಶಗಳನ್ನು ಸ್ಮರಿಸಿದರು. ಅಧಿವೇಶನದಲ್ಲಿ ಶಾಸಕಿ ಶಶಿಕಲಾ ಜೊಲ್ಲೆಯವರಿಂದ ಮತಕ್ಷೇತ್ರದಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು.ಸಮಾಜದ ಮನಸ್ಸಿನಲ್ಲಿ ಕಾಂಗ್ರೆಸ್ಗಿರು, ಬಿಜೆಪಿ ಅಂದರೆ ದಲಿತ ವಿರೋಧಿ, ಡಾ.ಅಂಬೇಡ್ಕರ್ ವಿರೋಧಿ ಅನ್ನೊ ವಿಷದ ಬೀಜ ಬಿತ್ತನೆ ಮಾಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಇದನ್ನು ಅಳಿಸಿಹಾಕಿ, ಬಿಜೆಪಿ ದಲಿತ ವಿರೋಧಿಯಲ್ಲ, ಬಿಜೆಪಿ ಅಂಬೇಡ್ಕರ್ ವಿರೋಧಿಯಲ್ಲ ಎಂದು ಸತ್ಯವನ್ನು ಪ್ರತಿಷ್ಠಾಪನೆ ಮಾಡಿ ಸುಳ್ಳನ್ನು ಅಳಿಸಿ ಹಾಕುವ ಕಾರ್ಯಮಾಡಲಿದೆಂದರು.ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಮುನಿಸ್ವಾಮಿ, ಶಾಸಕರಾದ ದುರ್ಯೋಧನ ಐಹೊಳೆ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಎಸ್.ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಕಾತ್ಯಾಲ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.