ಟಿಪ್ಪರ್ ಲಾರಿಗಳ ಧೂಳಿಗೆ ಅಪಾರ ಬೆಳೆ ನಷ್ಟ

| Published : Jun 13 2024, 12:45 AM IST

ಸಾರಾಂಶ

ಶ್ರೀಮಂತರಿಗೆ ಅನುಕೂಲವಾಗುವ ಚೆನ್ನೈ ಕಾರಿಡಾರ್ ರೈತರ ಬೆವರ ಹನಿಯನ್ನು ಕಸಿದು ಸಾಲಗಾರರನ್ನಾಗಿ ಮಾಡುತ್ತಿದೆ. ಜೊತೆಗೆ ಬಂಡವಾಳ ಹಾಕಿ ಬೆಳೆದಿರುವ ರೈತರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಬಂಗಾರಪೇಟೆ: ಟಿಪ್ಪರ್ ಲಾರಿಗಳ ಹಾವಳಿಯ ಧೂಳಿನಿಂದ ನಷ್ಟವಾಗಿರುವ ರೈತರ ಬೆಳೆಗಳಿಗೆ ಪರಿಹಾರ ನೀಡಲು ನಿರಾಕರಿಸುತ್ತಿರುವ ಡಿಬಿಎಲ್ ಗುತ್ತಿಗೆದಾರರ ಕ್ಯಾಂಪಸ್ ಗೇಟ್‌ನ್ನು ನಷ್ಟವಾದ ಬೆಳೆ ಸಮೇತ ಬಂದ್ ಮಾಡಿ ಪರಿಹಾರ ವಿತರಿಸುವಂತೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆಯ ಬಿಸಿ ಮುಟ್ಟಿಸಿದರು.

ಬರ ಹಾಗೂ ಪ್ರಕೃತಿ ವಿಕೋಪ, ಕಳಪೆ ಬಿತ್ತನೆ ಬೀಜ, ಕೀಟನಾಶಕಗಳ ಹಾವಳಿಯಿಂದ ರೋಗಗಳು ನಿಯಂತ್ರಣಕ್ಕೆ ಬಾರದೆ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಕೈ ಸುಟ್ಟುಕೊಳ್ಳುತ್ತಿರುವ ರೈತರಿಗೆ ಕೇಂದ್ರ ಸರ್ಕಾರದ ಚೆನೈ ಕಾರಿಡಾರ್ ರಸ್ತೆ ಅಭಿವೃದ್ಧಿ ಮಾರಕವಾಗಿ ಪರಿಣಮಿಸಿ, ನೂರಾರು ಎಕರೆ ಹೂ, ಕ್ಯಾಪ್ಸಿಕಂ, ರೇಷ್ಮೆ, ಟೊಮ್ಯಾಟೋ ಬೆಳೆಗಳು ಧೂಳಿನಿಂದ ಸಂಪೂರ್ಣವಾಗಿ ನಾಶವಾಗಿವೆ. ಜಿಲ್ಲಾಡಳಿತವಾಗಲಿ, ಜನ ಪ್ರತಿನಿಧಿಗಳಾಗಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ನೊಂದ ಕಲ್ಕರೆ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಶ್ರೀಮಂತರಿಗೆ ಅನುಕೂಲವಾಗುವ ಚೆನ್ನೈ ಕಾರಿಡಾರ್ ರೈತರ ಬೆವರ ಹನಿಯನ್ನು ಕಸಿದು ಸಾಲಗಾರರನ್ನಾಗಿ ಮಾಡುತ್ತಿದೆ. ಜೊತೆಗೆ ಬಂಡವಾಳ ಹಾಕಿ ಬೆಳೆದಿರುವ ರೈತರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಭೂಮಿ ಕೊಟ್ಟ ತಪ್ಪಿಗೆ ರೈತರು ತಮ್ಮ ಜಮೀನುಗಳಿಗೆ ಹಾದು ಹೋಗಲು ೧೦-೧೫ ಕಿಮೀ ಸುತ್ತು ಹಾಕಿಕೊಂಡು ಬರಬೇಕಾದ ಪರಿಸ್ಥಿತಿ ಇದೆ, ವಾರದೊಳಗೆ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡುವ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ಹಿಂಪಡೆದರು.

ಹೋರಾಟದಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಹರೀಶ್, ರಾಮಪ್ಪ, ಯಲ್ಲಣ್ಣ, ವೆಂಕಟೇಶಪ್ಪ, ವೆಂಕಟಪ್ಪ, ಎಂ.ಎಸ್.ಆನಂದ್ ಇದ್ದರು.