ಮುಂಡರಗಿಯಲ್ಲಿ ಮಣ್ಣಿನ ಮಡಕೆಗಳಿಗೆ ಭಾರೀ ಬೇಡಿಕೆ

| Published : Mar 10 2025, 12:17 AM IST

ಸಾರಾಂಶ

ಬೇಸಿಗೆ ಬಿಸಿಲಿನ ಬೇಗೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಂಪು ನೀರು ಕುಡಿಯಬೇಕೆಂಬ ಇಚ್ಛೆ ಜನರಲ್ಲಿ ಬಲವಾಗಿದ್ದು, ಹೀಗಾಗಿ ಮಣ್ಣಿನ ಮಡಕೆಗಳಿಗೆ ಮೊರೆ ಹೋಗುತ್ತಿದ್ದಾರೆ.

ಶರಣು ಸೊಲಗಿ

ಕನ್ನಡಪ್ರಭ ವಾರ್ತೆ ಮುಂಡರಗಿ

ಬೇಸಿಗೆ ಬಿಸಿಲಿನ ಬೇಗೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಂಪು ನೀರು ಕುಡಿಯಬೇಕೆಂಬ ಇಚ್ಛೆ ಜನರಲ್ಲಿ ಬಲವಾಗಿದ್ದು, ಹೀಗಾಗಿ ಮಣ್ಣಿನ ಮಡಕೆಗಳಿಗೆ ಮೊರೆ ಹೋಗುತ್ತಿದ್ದಾರೆ.

ಮಡಿಕೆ ನೀರು ಆರೋಗ್ಯಕ್ಕೂ ಉತ್ತಮವಾಗಿರುವುದರಿಂದ ಇದು ಬಡವರ ಫ್ರಿಡ್ಜ್‌ ಎಂದೇ ಪ್ರಸಿದ್ಧಿ. ಹಿತ್ತಾಳೆ, ತಾಮ್ರ, ಸ್ಟೀಲ್‌ಗಳ ಮಾರಾಟ ಭರಾಟೆಯಲ್ಲಿ ನೆಲಕಚ್ಚಿದ ನಮ್ಮ ದೇಶಿ ಮಣ್ಣಿನ ಮಡಕೆಗಳಿಗೆ ಬೇಸಿಗೆ ಬಂತೆಂದರೆ ಭಾರೀ ಬೇಡಿಕೆ ಬರುತ್ತದೆ. ಅದರಲ್ಲೂ ಪ್ರಸ್ತುತ ವರ್ಷ ಮಾರ್ಚ್‌ ಮೊದಲ ವಾರದಲ್ಲಿಯೇ 37ರಿಂದ 38 ಡಿಗ್ರಿವರೆಗೆ ಇರುವ ಬಿಸಿಲಿನ ತಾಪಮಾನಕ್ಕೆ ಜನ ಕಂಗಾಲಾಗಿದ್ದಾರೆ. ಮನೆಯಲ್ಲಿನ 18-20 ಸಾವಿರ ರುಪಾಯಿಗಳ ಬೆಲೆ ಬಾಳುವ ಫಿಡ್ಜ್‌ ನೀರು ಬಿಟ್ಟು ಮಣ್ಣಿನ ಮಡಕೆಯಲ್ಲಿನ ನೀರು ಕುಡಿಯಲು ಮುಂದಾಗಿದ್ದಾರೆ.

ಈ ಮಣ್ಣಿನ ಹರವೆ ಅಥವಾ ಗಡಿಗೆಗಳನ್ನು ಕೇವಲ ಬಡವರು ಮಾತ್ರ ಖರೀದಿಸಿ ಉಪಯೋಗಿಸುವುದಿಲ್ಲ, ಫ್ರಿಡ್ಜ್ ಇರುವವರೂ ಸಹ ಅನೇಕರು ಖರೀದಿಸುತ್ತಾರೆ. ಆದ್ದರಿಂದ ಸದ್ಯ ಮಣ್ಣಿನ ಮಡಕೆಗೆ ಬೇಡಿಕೆಗಳಿಗೆ ಹೆಚ್ಚಾಗಿದೆ.ಆಧುನಿಕತೆಯ ಭರಾಟೆಯಲ್ಲಿ ಮೂಲೆಗುಂಪಾಗಿ ಕೇವಲ ದೀಪಾವಳಿಗೆ ಹಣತೆ ಮಾಡಲು ಹಾಗೂ ಮಣ್ಣೆತ್ತಿನ ಅಮಾವಾಸ್ಯೆಗೆ ಎತ್ತು ಮಾಡಲು ಸೀಮಿತವಾಗಿದ್ದ ಕುಂಬಾರರ ಮುಖದಲ್ಲಿ ಮಂದಹಾಸ ಮೂಡಿದೆ.

ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಮಠದ ಹತ್ತಿರವಿರುವ ಕುಂಬಾರ ಓಣಿಯಲ್ಲಿ ಹಾಗೂ ಭಜಂತ್ರಿ ಓಣಿಯಲ್ಲಿ ಮತ್ತು ಹೆಸರೂರು ರಸ್ತೆ ಆಶ್ರಯ ಕಾಲೋನಿಯಲ್ಲಿ, ಹೊಸ ಬಸ್ ನಿಲ್ದಾಣದ ಹತ್ತಿರ ಹೀಗೆ ಅನೇಕ ಕಡೆಗಳಲ್ಲಿ ಮಣ್ಣಿನ ಹರವೆ, ಮಡಕೆ, ಮಣ್ಣಿನ ಕೊಡ, ಬಿಂದಿಗೆ, ಮಗಿಗಳು ಹಾಗೂ ಬಾಟಲ್‌ಗಳ ಮಾದರಿಯ ಮಣ್ಣಿನ ಬಾಟಲ್‌ಗಳು ದೊರೆಯುತ್ತವೆ. 50 ರುಪಾಯಿಗಳಿಂದ 350 ರುಪಾಯಿಗಳವರೆಗಿನ ಮಡಕೆಗಳು ಮಾರಾಟಕ್ಕೆ ಲಭ್ಯವಿದ್ದು, ಪ್ರತಿನಿತ್ಯ ಪಟ್ಟಣದ ಎಲ್ಲ ಕಡೆಗಳಲ್ಲಿಯೂ ಉತ್ತಮ ಮಾರಾಟವಾಗುತ್ತಿವೆ.

ದೂರದ ಸೊಲ್ಲಾಪುರ ಹಾಗೂ ಕೂಡ್ಲಿಗಿ ಸಮೀಪದ ಶಿವಪೂರದಿಂದ ವಿಶೇಷ ಮಾಟದ ಮಣ್ಣಿನ ಹರವೆ, ಗಡಿಗೆ ಮುಂಡರಗಿಗೆ ಬಂದಿವೆ. ನೌಕರರು ತಮ್ಮ ಮೋಟಾರ್ ಸೈಕಲ್ ಹಾಗೂ ಕಾರಿನಂತಹ ವಾಹನಗಳಲ್ಲಿ ಇಟ್ಟುಕೊಂಡು ಹೋಗಲು ಅನುಕೂಲ ಇರುವಂತಹ ಮಣ್ಣಿನ ಬಾಟಲು ಮಾರಾಟಕ್ಕಿಟ್ಟಿದ್ದು, ಈ ಬಾರಿ ಮಾರ್ಚ್ ತಿಂಗಳಿನಲ್ಲಿಯೇ ಹೆಚ್ಚಿನ ಮಾರಾಟ ಪ್ರಾರಂಭವಾಗಿದೆ ಎಂದು ಮಡಕೆ ಮಾರಾಟಗಾರ ಪರಸಪ್ಪ ಕುಂಬಾರ ಹೇಳಿದರು.