ಭಾರಿ ಅಗ್ನಿ ಅನಾಹುತ, ಕೋಟ್ಯಂತರ ರುಪಾಯಿ ಹಾನಿ

| Published : May 21 2024, 12:46 AM IST

ಸಾರಾಂಶ

ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರಿನಲ್ಲಿ ಜನನಿಭಿಡ ಪ್ರದೇಶದಲ್ಲಿಯೇ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು, ಹತ್ತಾರು ಅಂಗಡಿಗಳು ಸುಟ್ಟು ಭಸ್ಮವಾಗಿ ಕೋಟ್ಯಂತರ ರುಪಾಯಿ ಹಾನಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಬೆಂಕಿ ನಂದಿಸಲು ಹತ್ತಾರು ಅಗ್ನಿಶಾಮಕ ವಾಹನಗಳು, ನೂರಾರು ಸಿಬ್ಬಂದಿಯಿಂದ ಯತ್ನ

ಯಾವುದೇ ಜೀವ ಹಾನಿಯಾಗಿಲ್ಲ, ಸ್ಥಳದಲ್ಲಿಯೇ 3-4 ಗಂಟೆ ಡಿಸಿ, ಎಸ್ಪಿ ಮೊಕ್ಕಾಂ

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರಿನಲ್ಲಿ ಜನನಿಭಿಡ ಪ್ರದೇಶದಲ್ಲಿಯೇ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು, ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿ ಕೋಟ್ಯಂತರ ರುಪಾಯಿ ಹಾನಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಗೊತ್ತಾಗಿಲ್ಲ, ಕೆಲವರು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆಗಿದೆ ಎನ್ನುತ್ತಿದ್ದರೇ ಇನ್ನು ಕೆಲವರು ಬಾಯ್ಲರ್‌ನಲ್ಲಿಯ ಬೆಂಕಿ ಹೊತ್ತಿಕೊಂಡು ಆಗಿದೆ ಎನ್ನಲಾಗುತ್ತಿದೆ.

ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ, ನಾಲ್ಕಾರು ಗಂಟೆಗಳ ಕಾಲ ಅಗ್ನಿ ಧಗ ಧಗ ಉರಿಯುತ್ತಿದ್ದು, ಸಾವಿರಾರು ಜನರು ಜಮಾಯಿಸಿದ್ದರು.

ಅಗ್ನಿ ಹೊತ್ತುಕೊಂಡು ಒಂದೊಂದೇ ಅಂಗಡಿಗೆ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿರುವುದನ್ನು ನೋಡಿ ಜನರು ಆತಂಕಗೊಂಡಿದ್ದರು. ಬೆಂಕಿ ಆಕಾಶದೆತ್ತರಕ್ಕೆ ಹೊತ್ತಿ ಉರಿಯುತ್ತಿರುವುದು ಕಾಡ್ಗಿಚ್ಚಿನಂತೆ ನಗರಾದ್ಯಂತ ಹಬ್ಬಿದ್ದರಿಂದ ಸಹಸ್ರಾರು ಜನ ಬರಲಾರಂಭಿಸಿದರು.

ಬೆಂಕಿ ನಂದಿಸಲು ಹತ್ತಾರು ಅಗ್ನಿಶಾಮಕ ವಾಹನ ಹಾಗೂ ನೂರಾರು ಸಂಖ್ಯೆಯ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು. ಸ್ಥಳದಲ್ಲಿ ಸೇರಿದ್ದ ಜನರನ್ನು ಚದುರಿಸಲು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ಪ್ರಾಣದ ಹಂಗುತೊರೆದು ಕಾರ್ಯಾಚರಣೆ:

ಹಲವು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಜ್ವಾಲೆಯಂತೆ ಉರಿಯುತ್ತಿತ್ತು. ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿ ಭಾರೀ ಅನಾಹುತ ಆಗುವ ಮುನ್ಸೂಚನೆ ಇತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಾಣದ ಹಂಗು ತೊರೆದು ಬೆಂಕಿ ನಂದಿಸಿದರು. ಬೆಂಕಿಯ ಜ್ವಾಲೆಯ ನಡುವೆಯೇ ಕಟ್ಟಡ ಏರಿ ನೀರು ಸಿಂಪಡಿಸಿ ಬೆಂಕಿ ಹತೋಟಿಗೆ ತರಲು ಶ್ರಮಿಸಿದರು.

ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾಗಿ ಮತ್ತೆ ತುಂಬಿಸಿಕೊಂಡು ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಅಷ್ಟರಲ್ಲಿ ಕುಕನೂರು, ಕುಷ್ಟಗಿ, ಗಂಗಾವತಿ, ಯಲಬುರ್ಗಾ, ಪಕ್ಕದ ಗದಗ ಜಿಲ್ಲೆಯಿಂದಲೂ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಂಡು ಹೆಚ್ಚಿನ ಸಿಬ್ಬಂದಿಗಳೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು. ಬಳಿಕ ಬೆಂಕಿ ಹತೋಟಿಗೆ ಬಂತು.

ಕಟ್ಟಡಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಯಿತು. ಮುಚ್ಚಿದ್ದ ಕೆಲ ಅಂಗಡಿಗಳ ಬಾಗಿಲು ತೆರೆದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಒಳನುಗ್ಗಿ ಬೆಂಕಿ ನಂದಿಸಿದರು.

12 ಅಂಗಡಿಗೆ ಹಾನಿ:

ಅಗ್ನಿದುರಂತದಲ್ಲಿ ಸುಮಾರು 12 ಅಂಗಡಿಗಳಿಗೆ ಹಾನಿಯಾಗಿದೆ. ಇದರಲ್ಲಿ 6-8 ಅಂಗಡಿಗಳು ಬಹುತೇಕ ಸುಟ್ಟಿವೆ.

ಪ್ಲೈವುಡ್ ಅಂಗಡಿಗಳು, ಪೇಂಟಿಗ್ ಅಂಗಡಿಗಳು, ಪ್ಲಾಸ್ಟಿಕ್ ಸಾಮಗ್ರಿ ಅಂಗಡಿ, ಜನರಲ್ ಸ್ಟೋರ್, ಹೋಟೆಲ್, ಮೆಡಿಕಲ್ ಶಾಪ್, ಸಾವಜಿ ಹೋಟೆಲ್ ಸೇರಿದಂತೆ ಹತ್ತಾರು ಅಂಗಡಿಗಳು ಸುಟ್ಟಿವೆ.

ಬೆಂಕಿ ಹೊತ್ತಿಕೊಂಡ ಅಂಗಡಿಗಳಲ್ಲಿ ಪೇಂಟ್‌, ಥಿನ್ನರ್‌, ಫೆವಿಕಾಲ್‌ ಮತ್ತಿತರ ಸಾಮಗ್ರಿಗಳು ಇದ್ದುದರಿಂದ ಆಗಾಗ ಸಣ್ಣ ಸ್ಫೋಟ ಸಂಭವಿಸಿ, ಸಾಮಗ್ರಿ ಸಿಡಿಯುತ್ತಿದ್ದವು. ಇದರಿಂದ ಸೇರಿದ್ದ ಜನರು ಗಾಬರಿಗೊಂಡರು.₹5 ಕೋಟಿಗೂ ಅಧಿಕ ಹಾನಿ:

ಹತ್ತಾರು ಅಂಗಡಿಗಳ ಬಹುತೇಕ ಸುಟ್ಟಿದ್ದರಿಂದ ಸುಮಾರು ₹5 ಕೋಟಿಗೂ ಅಧಿಕ ಹಾನಿಯಾಗಿದೆ ಎನ್ನಲಾಗಿದೆ. ಇದರ ಪ್ರಮಾಣ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ.

ದುರಂತದ ಬಗ್ಗೆ ಅಂಗಡಿ ಮಾಲಿಕರ್ಯಾರೂ ಮಾತನಾಡುತ್ತಿಲ್ಲ. ಹೇಳಿಕೆ, ಮಾಹಿತಿ ಸಹ ನೀಡಲು ಹಿಂದೇಟು ಹಾಕಿದರು. ಬಹುತೇಕ ಅಂಗಡಿಯಲ್ಲಿ ಮುನ್ನೆಚ್ಚರಿಕೆ, ಅಗ್ನಿಶಾಮಕ ಉಪಕರಣ ಇರಲಿಲ್ಲ ಎನ್ನಲಾಗಿದೆ. ಅನುಮತಿ ಇಲ್ಲದೇ ಇರುವ ಅಂಗಡಿಯೇ ಹೆಚ್ಚಾಗಿದ್ದರಿಂದ ಯಾರೂ ಮಾಹಿತಿ ನೀಡಲು ಮುಂದೆ ಬಂದಿಲ್ಲ, ಹಾನಿಯ ಬಗ್ಗೆ ಬಾಯ್ಬಿಡುತ್ತಿಲ್ಲ.

ಎಸ್ಪಿ, ಡಿಸಿ ಭೇಟಿ:

ಅಗ್ನಿ ದುರಂತ ಸ್ಥಳಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಭೇಟಿ ನೀಡಿ, 3-4 ಗಂಟೆಗಳ ಕಾಲ ಸ್ಥಳದಲ್ಲಿಯೇ ಇದ್ದು, ಬೆಂಕಿ ನಿಯಂತ್ರಿಸುವ ಕಾರ್ಯದ ಉಸ್ತುವಾರಿ ನೋಡಿಕೊಂಡರು. ಸ್ಥಳೀಯ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವುದು ಅಸಾಧ್ಯ ಎನಿಸಿದಾಗ ಜಿಲ್ಲೆಯ ವಿವಿಧೆಡೆ, ಪಕ್ಕದ ಜಿಲ್ಲೆಯಿಂದಲೂ ವಾಹನ ತರಿಸಿದರು. ಆ್ಯಂಬೆಲೆನ್ಸ್‌ ಸಹ ಸನ್ನದ್ಧ ಸ್ಥಿತಿಯಲ್ಲಿಟ್ಟು ಅಗತ್ಯ ಕ್ರಮ ಕೈಗೊಂಡರು.