ಬಜೆಟ್‌ನಲ್ಲಿ ವಿಜಯನಗರ ಜಿಲ್ಲೆಗೆ ಭಾರೀ ಅನುದಾನ ನಿರೀಕ್ಷೆ

| Published : Mar 07 2025, 12:45 AM IST

ಸಾರಾಂಶ

ಈ ಬಾರಿ ಬಜೆಟ್‌ನಲ್ಲಿ ವಿಜಯನಗರ ಜಿಲ್ಲೆಗೆ ಭಾರೀ ನಿರೀಕ್ಷೆ ಹೊಂದಲಾಗಿದ್ದು, ಜಿಲ್ಲಾಸ್ಪತ್ರೆಗೆ ಮಾನವ ಸಂಪನ್ಮೂಲ ಮಂಜೂರಾತಿ ಮತ್ತು ಉಪಕರಣ ಖರೀದಿಗೆ ಸರ್ಕಾರ ಅನುದಾನ ಒದಗಿಸಲಿದೆಯೇ ಎಂದು ಕಾಯಲಾಗುತ್ತಿದೆ.

ಜಿಲ್ಲಾಸ್ಪತ್ರೆಗೆ ಬೇಕಿದೆ ಉಪಕರಣ ಖರೀದಿ । ಸಮಗ್ರ ಅಭಿವೃದ್ಧಿಗೆ ಅನುದಾನ ಸಾಧ್ಯತೆ

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಈ ಬಾರಿ ಬಜೆಟ್‌ನಲ್ಲಿ ವಿಜಯನಗರ ಜಿಲ್ಲೆಗೆ ಭಾರೀ ನಿರೀಕ್ಷೆ ಹೊಂದಲಾಗಿದ್ದು, ಜಿಲ್ಲಾಸ್ಪತ್ರೆಗೆ ಮಾನವ ಸಂಪನ್ಮೂಲ ಮಂಜೂರಾತಿ ಮತ್ತು ಉಪಕರಣ ಖರೀದಿಗೆ ಸರ್ಕಾರ ಅನುದಾನ ಒದಗಿಸಲಿದೆಯೇ ಎಂದು ಕಾಯಲಾಗುತ್ತಿದೆ.

ಜಿಲ್ಲೆಯಲ್ಲಿ 300 ಹಾಸಿಗೆ ಜಿಲ್ಲಾಸ್ಪತ್ರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ₹104 ಕೋಟಿ ಅನುದಾನದಲ್ಲಿ 250 ಹಾಸಿಗೆ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇನ್ನೂ 50 ಹಾಸಿಗೆ ನಿರ್ಮಾಣಕ್ಕೆ ₹15 ಕೋಟಿ ಕೆಕೆಆರ್‌ಡಿಬಿಯಿಂದ ಮಂಜೂರಾತಿ ದೊರೆತಿದೆ. ಈ ಕಾಮಗಾರಿಯೂ ಈಗ ಪ್ರಗತಿಯಲ್ಲಿದೆ. ಈ ಬಾರಿ ಬಜೆಟ್‌ನಲ್ಲಿ ಜಿಲ್ಲಾಸ್ಪತ್ರೆಗೆ ಮಾನವ ಸಂಪನ್ಮೂಲ ಮಂಜೂರಾತಿ ಮತ್ತು ಉಪಕರಣ ಖರೀದಿಗೆ ₹40 ಕೋಟಿ ಸರ್ಕಾರ ಅನುದಾನ ಒದಗಿಸಲಿದೆ ಎಂಬ ನಿರೀಕ್ಷೆ ಗರಿಗೆದರಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಡಿಗ್ರೂಪ್‌ ನೌಕರರು ಸೇರಿದಂತೆ ಜಿಲ್ಲಾಸ್ಪತ್ರೆಗೆ ಬೇಕಾದ ಮಾನವ ಸಂಪನ್ಮೂಲ ನೇಮಕಾತಿಗೆ ಸರ್ಕಾರ ಮಂಜೂರಾತಿ ನೀಡುವ ಸಾಧ್ಯತೆ ಇದೆ.

ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಇಲ್ಲದ ಹಿನ್ನೆಲೆ ಜಿಲ್ಲೆಯ ರೋಗಿಗಳು ಬಳ್ಳಾರಿ, ಕೊಪ್ಪಳ, ದಾವಣಗೆರೆ, ಹಾವೇರಿ ಜಿಲ್ಲೆಗಳಿಗೆ ತೆರಳುವಂತಾಗಿದೆ. ಜಿಲ್ಲೆಯಲ್ಲೇ ಜಿಲ್ಲಾಸ್ಪತ್ರೆಗೆ ಚಾಲನೆ ದೊರೆತರೆ ಜನರಿಗೂ ಅನುಕೂಲ ಆಗಲಿದೆ. ಹಾಗಾಗಿ ಈ ಬಾರಿ ಬಜೆಟ್‌ನಲ್ಲಿ ಜಿಲ್ಲಾಸ್ಪತ್ರೆಗೆ ಅಗತ್ಯ ಸೌಕರ್ಯದ ಕಡೆಗೆ ಸರ್ಕಾರ ಗಮನಹರಿಸಲಿದೆಯೇ ಎಂಬುದನ್ನು ನಿರೀಕ್ಷಿಸಲಾಗಿದೆ.

ಮೆಡಿಕಲ್ ಕಾಲೇಜ್‌ ಮಂಜೂರಾತಿ:

ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಕಟ್ಟಡ ಕೂಡ ನಿರ್ಮಾಣಗೊಂಡಿದೆ. ಇನ್ನೂ ಹೊಸಪೇಟೆಯಲ್ಲಿ ನೂರು ಹಾಸಿಗೆ ಆಸ್ಪತ್ರೆ ಇದೆ. ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೂ ಇದೆ. ಜಿಲ್ಲೆಗೊಂದು ಮೆಡಿಕಲ್‌ ಕಾಲೇಜ್‌ ಹಿನ್ನೆಲೆ ವಿಜಯನಗರ ಜಿಲ್ಲೆಗೂ ಮೆಡಿಕಲ್ ಕಾಲೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ.

ಕಾರ್ಖಾನೆ ಸಾಲ:

ಹೊಸಪೇಟೆಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಬಂದ್‌ ಆಗಿದ್ದು, ಹೊಸಪೇಟೆ, ಕಮಲಾಪುರ, ಹಗರಿಬೊಮ್ಮನಹಳ್ಳಿ ಭಾಗದ ರೈತರ ಅನುಕೂಲಕ್ಕಾಗಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡುವ ನಿರೀಕ್ಷೆ ಇದೆ.

ಪ್ರವಾಸೋದ್ಯಮ ಬೆಳವಣಿಗೆ:

ಹಂಪಿಯನ್ನು ಕೇಂದ್ರೀಕರಿಸಿ ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ. ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿಗೂ ಸರ್ಕಾರ ಒತ್ತು ನೀಡುವ ಯೋಜನೆ ನಿರೀಕ್ಷಿಸಲಾಗಿದೆ.

ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ:

ವಿಜಯನಗರ ಜಿಲ್ಲೆಯಲ್ಲಿ ಅಪೌಷ್ಟಿಕತೆ ಪ್ರಮಾಣ ಇರುವ ಹಿನ್ನೆಲೆ ಅಪೌಷ್ಟಿಕತೆಯಿಂದ ಮಕ್ಕಳನ್ನು ಪಾರು ಮಾಡಲು ವಿಶೇಷ ಯೋಜನೆಯನ್ನು ಸರ್ಕಾರ ಘೋಷಣೆ ಮಾಡುವ ನಿರೀಕ್ಷೆ ಹೊಂದಲಾಗಿದೆ.

ಮಹಿಳಾ ಪದವಿ ಕಾಲೇಜ್‌:

ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಮಹಿಳಾ ಪದವಿ ಕಾಲೇಜಿಗೆ ಮಂಜೂರಾತಿ ನೀಡುವ ಸಾಧ್ಯತೆ ಇದೆ. ಪಕ್ಕದಲ್ಲೇ ಕನ್ನಡ ವಿಶ್ವ ವಿದ್ಯಾಲಯ ಇರುವ ಹಿನ್ನೆಲೆ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಲು ಮಹಿಳಾ ಪದವಿ ಕಾಲೇಜ್‌ಗೆ ಸರ್ಕಾರ ಮಂಜೂರಾತಿ ನೀಡುವ ಸಾಧ್ಯತೆ ಇದೆ.ವಿಶೇಷ ಅನುದಾನ ನಿರೀಕ್ಷೆ:

ವಿಜಯನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿ ಹಾಗೂ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರ ವಿಶೇಷ ಅನುದಾನ ಒದಗಿಸುವ ನಿರೀಕ್ಷೆ ಇದೆ. ಇನ್ನೂ ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ, ಅರಣ್ಯ ಇಲಾಖೆಗಳ ಬಲವರ್ಧನೆಗೆ ವಿಶೇಷ ಒತ್ತು ನೀಡುವ ಸಾಧ್ಯತೆ ಇದೆ.ಪ್ರಗತಿಯಲ್ಲಿದೆ ಆರೋಗ್ಯ ಪ್ರಯೋಗಾಲಯ ನಿರ್ಮಾಣ:

ಕಳೆದ ವರ್ಷದ ಬಜೆಟ್‌ನಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಮಂಜೂರಾತಿ ದೊರೆತಿತ್ತು. ಈ ಪೈಕಿ ಹೂವಿನಹಡಗಲಿಗೆ ₹50 ಲಕ್ಷ ಮತ್ತು ಹರಪನಹಳ್ಳಿಗೆ ₹50 ಲಕ್ಷ ಮಂಜೂರಾತಿ ಸಿಕ್ಕಿತ್ತು. ಈಗ ಈ ಪ್ರಯೋಗಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಇನ್ನೂ ಹಗರಿಬೊಮ್ಮನಹಳ್ಳಿಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ₹50 ಲಕ್ಷ ಸರ್ಕಾರದಿಂದ ಅನುದಾನ ಬರಬೇಕಿದೆ. ಈ ಪ್ರಯೋಗಾಲದ ನಿರ್ಮಾಣ ಕಾಮಗಾರಿಯೂ ಶೀಘ್ರ ಆರಂಭ ಆಗಲಿದೆ. ಇನ್ನೂ ಕೂಡ್ಲಿಗಿಯಲ್ಲಿ ಈಗಾಗಲೇ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ನಿರ್ಮಾಣಗೊಂಡಿದೆ. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರಯೋಗಾಲಯ ನಿರ್ಮಾಣಗೊಂಡ ಬಳಿಕ ಜಿಲ್ಲಾಸ್ಪತ್ರೆಯಲ್ಲೂ ಸುಸಜ್ಜಿತ ಆರೋಗ್ಯ ಪ್ರಯೋಗಾಲಯ ನಿರ್ಮಾಣವಾಗಲಿದೆ.