ಗದಗ: ಹಿಂದೂ ಸರ್ವ ಸಮಾಜಗಳ ಒಕ್ಕೂಟದ ವತಿಯಿಂದ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಮೇ 31ರಂದು ನಗರದ ವಿಡಿಎಸ್ಟಿಸಿ ಮೈದಾನದಲ್ಲಿ ನಡೆಯಲಿದೆ. ಸಾವಯವ ಕೃಷಿ ಬಗ್ಗೆ ರೈತರಿಗೆ ಸಲಹೆ ನೀಡಲು ಹಾಗೂ ಹಿಂದೂಗಳನ್ನು ಜಾಗೃತಿಗೊಳಿಸಲು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಆಗಮಿಸಲಿದ್ದಾರೆ ಎಂದು ಸಮಾವೇಶದ ಸಂಚಾಲಕ ರಾಜು ಖಾನಪ್ಪನವರ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 31ರಂದು ಮಧ್ಯಾಹ್ನ 3:30ಕ್ಕೆ ಭೂಮರಡ್ಡಿ ಸರ್ಕಲ್‌ನಿಂದ ಕುಂಭ ಮೆರವಣಿಗೆ ಆರಂಭವಾಗಲಿದ್ದು, ಮೆರವಣಿಗೆಯಲ್ಲಿ 2ರಿಂದ 3 ಸಾವಿರ ಮಹಿಳೆಯರು ಭಾಗವಹಿಸಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಸಂಜೆ 5.30ಕ್ಕೆ ಬೃಹತ್ ಸಮಾವೇಶ ನಡೆಯಲಿದೆ ಎಂದರು.ಕಳೆದ 10-15 ವರ್ಷಗಳಿಂದ ಹಿಂದೂ ಸಮಾಜ ಒಡೆಯಲು ಹಿಂದೂ ಸಮಾಜದ ಮಠಾಧೀಶರಿಂದಲೇ ಕುತಂತ್ರ ನಡೆಯುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಈ ಷಡ್ಯಂತ್ರದ ವಿರುದ್ಧ ಹಿಂದೂ ಸಮಾವೇಶ ಮಾಡುತ್ತಿದ್ದೇವೆ. ಸಮಾವೇಶದಲ್ಲಿ 25ರಿಂದ 30 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. 300ಕ್ಕೂ ಹೆಚ್ಚು ವಿವಿಧ ಮಠಗಳ ಮಠಾಧೀಶರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.
ಸಮಾವೇಶಕ್ಕೆ ಆಗಮಿಸುವಂತೆ ಹಿರೇಮಠ, ಜಗದ್ಗುರುಗಳ ಮಠ, ಪಂಚಪೀಠ ಮಠಾಧೀಶರಿಗೆ ಆಹ್ವಾನ ನೀಡುವ ಕಾರ್ಯ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ಬೇರೆ- ಬೇರೆ ರಾಜ್ಯಗಳ ಮಠಾಧೀಶರು ಹಿಂದೂ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ರಾಜು ಗುಡಿಮನಿ, ವೆಂಕಟೇಶ್ ಕುಲಕರ್ಣಿ, ಜಗದೀಶ್ ಎಸ್.ಪಿ., ಕುಬೇರಗೌಡ ಪಾಟೀಲ, ಸದಾಶಿವ ಮದರಿಮಠ, ರಾಜು ಕುರಡಗಿ, ಅರವಿಂದ ಹುಲ್ಲೂರ, ಉಡಚಪ್ಪ ಹಳ್ಳಿಕೇರಿ, ರುದ್ರಣ್ಣ ಗುಳಗುಳಿ, ಸ್ವಾತಿ ಅಕ್ಕಿ, ವಿಜಯಲಕ್ಷ್ಮೀ ಮಾನ್ವಿ, ಜಯಶ್ರೀ ಉಗಲಾಟದ, ಪ್ರೀತಿ ಹೊನ್ನಗುಡಿ, ಜಯಶ್ರೀ ಪವಾರ, ಅಶೋಕ ಗಡಾದ, ಮಂಜುನಾಥ ಕೊಟ್ನಿಕಲ್, ಗಣೇಶ್ ಸುಲ್ತಾನಪುರ, ಮಾಂತೇಶ ನೆಲೂಡಿ, ಚೆನ್ನಮ್ಮ ಹುಳಕಣ್ಣನವರ, ಸಹದೇವ ಗಣಾಚಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
