ಕಾರ್ಖಾನೆ ವಿರುದ್ಧ ಬೃಹತ್‌ ಮಾನವ ಸರಪಳಿ

| Published : Mar 11 2025, 12:51 AM IST

ಸಾರಾಂಶ

ಸರ್ಕಾರವೇ ಕೈಗಾರಿಕೆ ಸ್ಥಾಪನೆ ಮಾಡಿ ರದ್ದುಪಡಿಸಿರುವ ಸಾಕಷ್ಟು ಉದಾಹರಣೆ ಇವೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಕೂಡಲೇ ರದ್ದತಿ ಆದೇಶ ಹೊರಡಿಸಬೇಕು. ಜಿಲ್ಲೆಯ ರಾಜಕಾರಣಿಗಳಿಗೆ ನೈತಿಕತೆಯಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಬದ್ಧ ಪ್ರದರ್ಶಿಸಬೇಕು.

ಕೊಪ್ಪಳ:

ನಗರದ ಸಮೀಪ ಬಿಎಸ್‌ಪಿಎಲ್ ಕೈಗಾರಿಕೆ ಸ್ಥಾಪನೆ ಬೇಡವೇ ಬೇಡ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ಸೋಮವಾರ ನಗರದ ಅಶೋಕ ವೃತ್ತದಲ್ಲಿ ಬೃಹತ್‌ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಮಿತಿಯ ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳದಲ್ಲಿ ಬಹುದೊಡ್ಡ ಜನಾಂದೋಲನ ರೂಪಗೊಂಡಿದೆ. ಕೈಗಾರಿಕೆ ವಿರುದ್ದ ಗಟ್ಟಿಯಾದ ಧ್ವನಿ ಎತ್ತಿದೆ. ಹಿಂದೆ ಗದಗನಲ್ಲಿ ಪೋಸ್ಕೋ ಕಂಪನಿ ಬಂದಾಗ ಆಗ ತೋಂಟದ ಸಿದ್ಧಲಿಂಗಶ್ರೀಗಳು ಹೋರಾಟದ ನೇತೃತ್ವ ವಹಿಸಿದ್ದರು. ಇದರಿಂದ ಕಂಪನಿ ಹೇಳ ಹೆಸರಿಲ್ಲದೇ ಕಿತ್ತುಕೊಂಡು ಹೋಯಿತು. ಈಗ ಅದೇ ಮಾದರಿಯಲ್ಲಿ ಕೊಪ್ಪಳದಲ್ಲಿ ಬಿಎಸ್‌ಪಿಎಲ್ ವಿರುದ್ದ ಗವಿಸಿದ್ಧೇಶ್ವರ ಶ್ರೀಗಳು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ನಾವೂ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಸರ್ಕಾರವು ಬಿಎಸ್‌ಪಿಎಲ್ ಕೈಗಾರಿಕೆ ಸ್ಥಾಪನೆ ಆದೇಶ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಸರ್ಕಾರವೇ ಕೈಗಾರಿಕೆ ಸ್ಥಾಪನೆ ಮಾಡಿ ರದ್ದುಪಡಿಸಿರುವ ಸಾಕಷ್ಟು ಉದಾಹರಣೆ ಇವೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಕೂಡಲೇ ರದ್ದತಿ ಆದೇಶ ಹೊರಡಿಸಬೇಕು. ಜಿಲ್ಲೆಯ ರಾಜಕಾರಣಿಗಳಿಗೆ ನೈತಿಕತೆಯಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಬದ್ಧ ಪ್ರದರ್ಶಿಸಬೇಕು ಎಂದ ಅವರು, ಜಿಲ್ಲೆಗೆ ಅಣುಸ್ಥಾವರವೂ ಬೇಡ ಎಂದರು.

ಗಿಣಗೇರಿ ಭಾಗದಲ್ಲಿ ಕೈಗಾರಿಕೆಗಳ ಕೇಂದ್ರೀಕರಣ ಮಾಡಲಾಗಿದೆ. ಇಂಥಹ ಕೇಂದ್ರೀಕರಣ ನೀತಿ ಸರಿಯಲ್ಲ. ಕೈಗಾರಿಕೆಗಳ ಸ್ಥಾಪನೆಯ ಬಾಧಿತ ಹಳ್ಳಿಗಳಲ್ಲಿ ಜನರಿಗೆ ಕ್ಯಾನ್ಸರ್ ಬರುತ್ತಿವೆ. ಟಿಬಿ, ಅಸ್ತಮಾ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಕಾಡಲಾರಂಭಿಸಿವೆ. ಈ ಕೂಡಲೇ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚನೆ ನೀಡುವ ಜತೆಗೆ ಕೈಗಾರಿಕೆ ರದ್ದತಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಾಂತೇಶ ಪಾಟೀಲ್ ಮೈನಳ್ಳಿ, ಶರಣಪ್ಪ ಸಜ್ಜನ್, ಬಸವರಾಜ ಶೀಲವಂತರ, ಡಿ.ಎಚ್. ಪೂಜಾರ, ವೀರೇಶ ಮಹಾಂತಯ್ಯನಮಠ, ಮಂಜುನಾಥ ಗೊಂಡಬಾಳ, ಜ್ಯೋತಿ ಗೊಂಡಬಾಳ, ಹನುಮಂತಪ್ಪ ಹೊಳೆಯಾಚೆ, ಕೆ.ಬಿ. ಗೋನಾಳ, ನಜೀರಸಾಬ ಮೂಲಿಮನಿ ಇತರರಿದ್ದರು.ಅಶೋಕ ವೃತ್ತದಲ್ಲಿ ನಡೆದ ಬೃಹತ್ ಮಾನವ ಸರಪಳಿಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರಲ್ಲದೇ, ಕೊಪ್ಪಳ ಉಳಿಸಿ ಕೈಗಾರಿಕೆ ತೊಲಗಿಸಿ ಎಂಬ ಘೋಷಣೆ ಕೂಗಿದರು. ನಮಗೆ ನ್ಯಾಯ ಬೇಕು. ಪರಿಸರ ಕಾಪಾಡಬೇಕು ಎಂದು ಒತ್ತಾಯಿಸಿದರು.